ಹತ ಜಾರ್ಖಂಡ್ ಪತ್ರಕರ್ತನ ಕುಟುಂಬಕ್ಕೆ 5 ಲ.ರೂ. ಪರಿಹಾರ
Update: 2016-05-15 23:53 IST
ರಾಂಚಿ, ಮೇ 15: ಮೇ 12ರಂದು ಛಾತ್ರಾ ಜಿಲ್ಲೆಯ ದೇವಾರಿಯಾದಲ್ಲಿ ಅಪರಿಚಿತ ವ್ಯಕ್ತಿಗಳಿಂದ ಕೊಲೆಯಾದ ಸುದ್ದಿವಾಹಿನಿಯೊಂದರ ಪತ್ರಕರ್ತ ಅಖಿಲೇಶ್ ಪ್ರತಾಪ್ ಸಿಂಗ್ ಅವರ ಕುಟುಂಬಕ್ಕೆ ಐದು ಲಕ್ಷ ರೂ.ಪರಿಹಾರವನ್ನು ಜಾರ್ಖಂಡ್ ಮುಖ್ಯಮಂತ್ರಿ ರಘುವರ್ ದಾಸ್ ಅವರು ರವಿವಾರ ಪ್ರಕಟಿಸಿದ್ದಾರೆ.
ಕೊಲೆಗೆ ಸಂಬಂಧಿಸಿದಂತೆ ಕ್ರಮಾನುಷ್ಠಾನ ವರದಿಯನ್ನು ಸಲ್ಲಿಸುವಂತೆ ಮುಖ್ಯಮಂತ್ರಿಗಳು ಡಿಜಿಪಿ ಡಿ.ಕೆ.ಪಾಂಡೆಯವರಿಗೆ ಸೂಚಿಸಿದ್ದಾರೆ.
ಗುರುವಾರ ರಾತ್ರಿ ದೇವಾರಿಯಾ ಪಂಚಾಯತ್ ಕಚೇರಿಯ ಬಳಿ ಅಪರಿಚಿತ ದುಷ್ಕರ್ಮಿಗಳು ಸಿಂಗ್ ಅವರನ್ನು ಗುಂಡಿಟ್ಟು ಹತ್ಯೆಗೈದಿದ್ದು, ದೇಶಾದ್ಯಂತ ಪತ್ರಕರ್ತರ ಮೇಲಿನ ಹಲ್ಲೆಗಳ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ.