ಜಾಗತಿಕ ವೌಲ್ಯಮಾಪನ ಪರೀಕ್ಷೆಯಲ್ಲಿ ಭಾರತದ ಐದು ಕಾರುಗಳು ವಿಫಲ
ಹೊಸದಿಲ್ಲಿ,ಮೇ 17: ಮಹಿಂದ್ರಾ ಸ್ಕಾರ್ಪಿಯೊ ಸೇರಿದಂತೆ ಐದು ಭಾರತೀಯ ಕಾರುಗಳು ಬ್ರಿಟನ್ ಮೂಲದ ಜಾಗತಿಕ ನೂತನ ಕಾರು ವೌಲ್ಯಮಾಪನ ಕಾರ್ಯಕ್ರಮ(ಎನ್‌ಸಿಎಪಿ)ವು ನಡೆಸಿದ ಅಪಘಾತ ಪರೀಕ್ಷೆಗಳಲ್ಲಿ ವಿಫಲಗೊಂಡಿವೆ. ಇತ್ತೀಚಿನ ಅಪಘಾತ ಪರೀಕ್ಷೆ ಫಲಿತಾಂಶದಂತೆ ರೆನಾಲ್ಟ್ ಕ್ವಿಡ್,ಮಾರುತಿ ಸುಝುಕಿ ಸೆಲೆರಿಯೊ,ಮಾರುತಿ ಸುಝುಕಿ ಇಕೋ,ಮಹಿಂದ್ರಾ ಸ್ಕಾರ್ಪಿಯೊ ಮತ್ತು ಹುಂಡೈ ಇಯಾನ್ ಸೇರಿದಂತೆ ಈ ಐದು ಕಾರುಗಳು ಸುರಕ್ಷತೆಗಾಗಿ ‘ಶೂನ್ಯ’ ಸ್ಟಾರ್ ಗಳಿಸಿವೆ.
ಈ ಐದು ಕಾರುಗಳು ಪ್ರಯಾಣಿಕರಿಗೆ ಒದಗಿಸುವ ಸುರಕ್ಷತೆ ಕಳಪೆ ಮಟ್ಟದ್ದಾಗಿದೆ ಎಂದು ಎನ್‌ಸಿಎಪಿ ಹೇಳಿಕೆಯಲ್ಲಿ ತಿಳಿಸಿದೆ.
ಇತ್ತೀಚಿನ ಸೇಫರ್ ಕಾರ್ಸ್ ಫಾರ್ ಇಂಡಿಯಾ ಫಲಿತಾಂಶವು ಅಪಘಾತ ಸಂಭವಿಸಿದ ಸಂದರ್ಭ ಹಾನಿಗೊಳಗಾಗದಿರುವ ಹೊರಕವಚಗಳನ್ನು ಹೊಂದಿರುವುದು ಕಾರುಗಳಿಗೆ ಎಷ್ಟು ಮುಖ್ಯ ಎನ್ನುವುದನ್ನು ತೋರಿಸಿದೆ. ಇಂತಹ ಸದೃಢ ಹೊರಕವಚ ಮತ್ತು ಕನಿಷ್ಠ ಒಂದು ಏರ್‌ಬ್ಯಾಗ್ ಅಳವಡಿಕೆಯು ಕಾರಿನಲ್ಲಿದ್ದವರ ಸುರಕ್ಷತೆಗೆ ಅತ್ಯಂತ ಮುಖ್ಯ ಪೂರ್ವಾಗತ್ಯವಾಗಿದೆ. ರೆನಾಲ್ಟ್‌ನಂತಹ ಕಂಪೆನಿಯೂ ಇಂತಹ ಕಳಪೆ ಸುರಕ್ಷತೆಯ ಕಾರನ್ನು ತಯಾರಿಸಿರುವುದು ಅಚ್ಚರಿದಾಯಕವಾಗಿದೆ. ಜಗತ್ತಿನಲ್ಲಿಯ ಯಾವುದೇ ಕಂಪೆನಿಯೂ ಇಷ್ಟೊಂದು ಕಳಪೆ ಗುಣಮಟ್ಟದ ಹೊಸ ಕಾರುಗಳನ್ನು ತಯಾರಿಸುತ್ತಿಲ್ಲ. ತಮ್ಮ ನೂತನ ಮಾದರಿಗಳು ವಿಶ್ವಸಂಸ್ಥೆಯ ಕನಿಷ್ಠ ಅಪಘಾತ ಪರೀಕ್ಷೆಯಲ್ಲಿ ತೇರ್ಗಡೆಯಾಗುವಂತಾದರೂ ಕಾರುಗಳ ತಯಾರಕರು ನೋಡಿಕೊಳ್ಳಬೇಕು ಮತ್ತು ಏರ್ ಬ್ಯಾಗ್‌ಗಳ ಬಳಕೆಯನ್ನು ಬೆಂಬಲಿಸಬೇಕು ಎಂದು ಎನ್‌ಸಿಎಪಿಯ ಮಹಾ ಕಾರ್ಯದರ್ಶಿ ಡೇವಿಡ್ ವಾರ್ಡ್ ಹೇಳಿದರು.
ಮಾರುತಿ ಸುಝುಕಿ ಸೆಲೆರಿಯೊ ಹೊರತುಪಡಿಸಿ ಈ ಎಲ್ಲ ಭಾರತೀಯ ಕಾರುಗಳು ಮಕ್ಕಳ ಸುರಕ್ಷತೆಗಾಗಿ ಎರಡು ಸ್ಟಾರ್‌ಗಳನ್ನು ಗಳಿಸಿವೆ. ಸೆಲೆರಿಯೊ ಒಂದೇ ಸ್ಟಾರ್‌ಗೆ ತೃಪ್ತಿ ಪಟ್ಟುಕೊಂಡಿದೆ.