×
Ad

ದಲಿತ, ಆದಿವಾಸಿ, ಮುಸ್ಲಿಂ ಮಕ್ಕಳು ಶಾಲೆಯಿಂದ ದೂರ

Update: 2016-05-19 23:55 IST

ಸಂಸತ್ ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಸಿಕ್ಕಿದ ಉತ್ತರ ಎಲ್ಲರನ್ನೂ ದಂಗುಬಡಿಸುವಂಥದ್ದು. ದೇಶದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಆತಂಕಕಾರಿ ಚಿತ್ರಣವನ್ನು ಇದು ಬಹಿರಂಗಪಡಿಸಿದೆ. ಪ್ರಾಥಮಿಕ ಶಿಕ್ಷಣ ಎಲ್ಲರಿಗೂ ಸಿಗಬೇಕು ಎಂಬ ದೃಷ್ಟಿಯಿಂದ ಶಿಕ್ಷಣ ಹಕ್ಕು, ಸರ್ವಶಿಕ್ಷಣ ಅಭಿಯಾನದಂಥ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ದೇಶದಲ್ಲಿ 60.64 ಲಕ್ಷ ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದಾರೆ. ಈ ಪೈಕಿ ಶೇಕಡ 75ರಷ್ಟು ದಲಿತ, ಆದಿವಾಸಿ ಹಾಗೂ ಮುಸ್ಲಿಂ ಮಕ್ಕಳು!
ಸಿಪಿಐ ಸದಸ್ಯ ಕೆ.ಕೆ.ರೇಶ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮತಿ ಇರಾನಿ, ‘‘ಆರರಿಂದ 13 ವರ್ಷದೊಳಗಿನ 60 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅವರಲ್ಲಿ ಬಹುತೇಕ ಮಕ್ಕಳು ದಲಿತ, ಆದಿವಾಸಿ ಹಾಗೂ ಮುಸ್ಲಿಂ ಸಮುದಾಯದವರು’’ ಎಂದು ಹೇಳಿದರು.
ಇರಾನಿ ಬಹಿರಂಗಪಡಿಸಿದ ಅಂಕಿ ಅಂಶಗಳನ್ನು ವಿಸ್ತೃತವಾಗಿ ವಿಶ್ಲೇಷಿಸಿದಾಗ, ಇತರ ವರ್ಗಗಳ ಮಕ್ಕಳಿಗಿಂತ ಈ ವರ್ಗಗಳ ಮೂರು ಪಟ್ಟು ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಅಂದರೆ ಶಾಲೆಯಿಂದ ಹೊರಗುಳಿದ ಮಕ್ಕಳ ಪೈಕಿ ಶೇಕಡ 75 ಮಂದಿ ದಲಿತ, ಆದಿವಾಸಿ ಹಾಗೂ ಮುಸ್ಲಿಂ ಸಮುದಾಯದವರು.

ಐಎಂಆರ್‌ಬಿ ಸಮೀಕ್ಷೆ
ಪ್ರತಿ ವರ್ಗದ ಅಂಕಿ ಅಂಶಗಳನ್ನು ಮತ್ತೆ ವಿಭಜಿಸಿದರೆ, 60 ಲಕ್ಷ ಮಕ್ಕಳ ಪೈಕಿ ಶೇಕಡ 32.4ರಷ್ಟು ಮಕ್ಕಳು ಪರಿಶಿಷ್ಟ ಜಾತಿಗೆ ಸೇರಿದವರು. ಶೇಕಡ 25.7ರಷ್ಟು ಮಂದಿ ಮುಸ್ಲಿಂ ಸಮುದಾಯದ ಮಕ್ಕಳು. ಶಾಲೆಯಿಂದ ಹೊರಗುಳಿದವರಲ್ಲಿ ಪರಿಶಿಷ್ಟ ಪಂಗಡದ ಮಕ್ಕಳು ಶೇಕಡ 16.6ರಷ್ಟು. ಆದರೆ ಈ ಅಂಕಿ ಸಂಖ್ಯೆಗಳು ಅಷ್ಟೊಂದು ಅಚ್ಚರಿದಾಯಕವಲ್ಲ. 2014ರಲ್ಲಿ ಐಎಂಆರ್‌ಬಿ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆ, ಶಾಲೆಯಿಂದ ಹೊರಗುಳಿದಿರುವ ಬಹುತೇಕ ಮಕ್ಕಳು ಉತ್ತರ ಪ್ರದೇಶ ಹಾಗೂ ಬಿಹಾರದವರು ಎಂಬ ಅಂಶವನ್ನು ಬಹಿರಂಗಪಡಿಸಿದೆ. ಉತ್ತರಪ್ರದೇಶದಲ್ಲಿ ಶಾಲೆಯಿಂದ ಹೊರಗುಳಿದ ಒಟ್ಟು ಮಕ್ಕಳ ಸಂಖ್ಯೆ 16.12 ಲಕ್ಷ. ಈ ಪೈಕಿ 5.6 ಲಕ್ಷ ಮಕ್ಕಳು ಪರಿಶಿಷ್ಟ ವರ್ಗದವರು, 5.57 ಲಕ್ಷ ಮಂದಿ ಮುಸ್ಲಿಂ ಸಮುದಾಯದವರು ಹಾಗೂ 1.08 ಲಕ್ಷ ಮಂದಿ ಪರಿಶಿಷ್ಟ ಪಂಗಡದವರು. ಅಂತೆಯೇ ಬಿಹಾರದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ 11.69 ಲಕ್ಷ. ಈ ಪೈಕಿ 5.24 ಲಕ್ಷ ಮಕ್ಕಳು ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿದ್ದರೆ, 2.46 ಲಕ್ಷ ಮಂದಿ ಮುಸ್ಲಿಮರು ಹಾಗೂ 31 ಸಾವಿರ ಮಕ್ಕಳು ಪರಿಶಿಷ್ಟ ಪಂಗಡದವರು.
ಇನ್ನೊಂದೆಡೆ ಗೋವಾದಲ್ಲಿ, 6ರಿಂದ 13ವರ್ಷದೊಳಗಿನ ಮಕ್ಕಳಲ್ಲಿ ಯಾರೂ ಶಾಲೆಯಿಂದ ಹೊರಗುಳಿದಿಲ್ಲ. ಗೋವಾದ ನಂತರದ ಸ್ಥಾನ ದಲ್ಲಿ ಲಕ್ಷದ್ವೀಪ ಹಾಗೂ ಪುದುಚೇರಿ ಇವೆ. ಈ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 267 ಮತ್ತು 285 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.
ದಾದ್ರ ಮತ್ತು ನಗರ ಹವೇಲಿಯಲ್ಲಿ 745 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಈ ಪೈಕಿ 172 ಮಂದಿ ಪರಿಶಿಷ್ಟ ಜಾತಿಗೆ ಸೇರಿದವರು.
ಇಂತಹ ಕಾರ್ಮೋಡದ ನಡುವೆಯೂ ಇರುವ ಆಶಾಕಿರಣದ ಏಕೈಕ ಬೆಳ್ಳಿರೇಖೆ ಎಂದರೆ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯನ್ನು ಲೆಕ್ಕಹಾಕಲು ಹೊರಟಿರುವುದು ಹಾಗೂ ಇದನ್ನು ನಿಲ್ಲಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತಿಸಲು ಮುಂದಾಗಿರುವುದು. ಈ ನಿಟ್ಟಿನಲ್ಲಿ ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಡುವೆ ಸಭೆ ನಡೆಸಿ ವಿಷಯದ ಗಂಭೀರತೆ ಚರ್ಚಿಸಲಾಯಿತು. ಇದರಲ್ಲಿ ಎಲ್ಲ ರಾಜ್ಯಗಳ ಶಿಕ್ಷಣ ಸಚಿವರು, ರಾಷ್ಟ್ರೀಯ ಸಲಹಾ ಮಂಡಳಿ ಸದಸ್ಯರೂ ಭಾಗವಹಿಸಿದ್ದರು.

ಕೃಪೆ: scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News