×
Ad

ಪಿಣರಾಯಿಗೆ ಸಿಎಂ ಗಾದಿ

Update: 2016-05-20 23:48 IST

ತಿರುವನಂತಪುರ, ಮೇ 20: ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಪಿಣರಾಯಿ ವಿಜಯನ್ ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅವರು, ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇಲ್ಲಿನ ಸಿಪಿಎಂ ಮುಖ್ಯಾಲಯ ಎಕೆಜಿ ಭವನದಲ್ಲಿ ಶುಕ್ರವಾರ ಮುಂಜಾನೆ ಸಭೆ ಸೇರಿದ ಸಿಪಿಎಂ ರಾಜ್ಯ ಸಮಿತಿಯು 72ರ ಹರೆಯದ ವಿಜಯನ್‌ರನ್ನು ನಾಮಕರಣಮಾಡುವ ನಿರ್ಧಾರವನ್ನು ಕೈಗೊಂಡಿದೆಯೆಂದು ಪಕ್ಷದ ಮೂಲಗಳು ತಿಳಿಸಿವೆ. ಪಿಣರಾಯಿ ಅವರನ್ನು ನೂತನ ಎಡರಂಗ ಸರಕಾರದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ತೀರ್ಮಾನವನ್ನು ಸಿಪಿಎಂ ಪಾಲಿಟ್ ಬ್ಯೂರೊ ಕೈಗೊಂಡಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ತಿರುವನಂತಪುರದಲ್ಲಿ ತಿಳಿಸಿದರು.

ಅವರು ಕೂಡಲೇ ತನ್ನ ಕಂಟೋನ್ಮೆಂಟ್ ನಿವಾಸಕ್ಕೆ ತೆರಳಿದರು. ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎಫ್ ವಿಜಯ ಸಾಧಿಸಿದೊಡನೆಯೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸುವುದಕ್ಕಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿಯವರ ನೇತೃತ್ವದಲ್ಲಿ ಸಿಪಿಎಂ ಕಾರ್ಯಾಲಯ ಹಾಗೂ ಪಕ್ಷದ ಕೇರಳ ಸಮಿತಿಗಳು ಶುಕ್ರವಾರ ಸಭೆ ನಡೆಸಿವೆ.

ಎಲ್‌ಡಿಎಫ್ ಅಭಿಯಾನದ ಪ್ರಧಾನ ಮುಖಗಳಾದ ಅಚ್ಯುತಾನಂದನ್ ಹಾಗೂ ವಿಜಯನ್ ಕ್ರಮವಾಗಿ ಮಲಪ್ಪುರ ಹಾಗೂ ಪಿಣರಾಯಿ ಕ್ಷೇತ್ರಗಳಿಂದ ಆಯ್ಕೆಯಾಗಿದ್ದಾರೆ.

ಈ ಬಾರಿ ವಿಜಯನ್ ಒಬ್ಬರೇ ವಿಧಾನಸಭೆಗೆ ಆಯ್ಕೆಯಾಗಿರುವ ಪಾಲಿಟ್ ಬ್ಯೂರೊ ಸದಸ್ಯರಾಗಿದ್ದಾರೆ. 140 ಸದಸ್ಯ ಬಲದ ಕೇರಳ ವಿಧಾನಸಭೆಗೆ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ನ 91, ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ 47 ಹಾಗೂ ತಲಾ ಒಬ್ಬ ಬಿಜೆಪಿ ಹಾಗೂ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದಾರೆ.

ವಿಜಯನ್‌ರನ್ನು ಮುಖ್ಯಮಂತ್ರಿ ಹುದ್ದೆಗೆ ನಾಮಕರಣ ಮಾಡುವ ನಿರ್ಧಾರ ಹೊರ ಬಿದ್ದೊಡನೆಯೇ ಎಕೆಜಿ ಭವನದಲ್ಲಿ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿ ಸಿಹಿ ಹಂಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News