ಭಾರತದಲ್ಲಿ ಕುಟುಂಬದ ಗಾತ್ರ ವೇಗವಾಗಿ ಚಿಕ್ಕದಾಗುತ್ತಿರುವುದು ಮುಸ್ಲಿಮರಲ್ಲಿ: ಜನಗಣತಿ ವರದಿ
ಹೊಸದಿಲ್ಲಿ, ಮೇ 21: ಭಾರತದಲ್ಲಿ ಅತ್ಯಂತ ವೇಗವಾಗಿ ಕುಟುಂಬಗಳು ಚಿಕ್ಕದಾಗುತ್ತಿರುವುದು ಮುಸ್ಲಿಮರಲ್ಲಿ ಎಂದು ಶುಕ್ರವಾರ ಬಿಡುಗಡೆ ಮಾಡಲಾದ ಜನಗಣತಿ ವರದಿ ತಿಳಿಸುತ್ತದೆ. ಮುಸ್ಲಿಮ್‌ಸಮುದಾಯದಲ್ಲಿ ಹೆಚ್ಚುತ್ತಿರುವ ಸಾಕ್ಷರತೆ ಇದಕ್ಕೆ ಕಾರಣವೆಂದು ಬಣ್ಣಿಸಲಾಗುತ್ತಿದೆ.
ಅಂಕಿಅಂಶಗಳ ಪ್ರಕಾರ 2011ರಲ್ಲಿ ದೇಶದ ಕುಟುಂಬವೊಂದರ ಸದಸ್ಯರ ಸರಾಸರಿ ಸಂಖ್ಯೆ 4.45ರಷ್ಟು ಇದ್ದು, ಇದೇ ಸಂಖ್ಯೆ ದಶಕದ ಹಿಂದೆ 4.67ರಷ್ಟು ಇತ್ತು. ಪ್ರಸಕ್ತ ಇದು ಶೇ.5.3ಕ್ಕೆ ಇಳಿದಿದೆ.
ಇದೇ ಅವಧಿಯಲ್ಲಿ ಮುಸ್ಲಿಮ್ ಕುಟುಂಬಗಳ ಸರಾಸರಿ ಗಾತ್ರ 5.61ರಿಂದ 5.15ಕ್ಕೆ ಇಳಿದಿದೆಯೆಂದು ಗೃಹ ಸಚಿವಾಲಯದಿಂದ ಬಿಡುಗಡೆಯಾದ ವರದಿ ತಿಳಿಸಿದೆ. ಪುರುಷರು ಯಜಮಾನರಾಗಿರುವ ಕುಟುಂಬಗಳ ಗಾತ್ರ ಶೇ.11.1 ಕಡಿಮೆಯಾದರೆ, ಮಹಿಳೆಯರು ಮುಖ್ಯಸ್ಥರಾಗಿರುವ ಕುಟುಂಬ ಗಳ ಗಾತ್ರ ಶೇ. 4.47 ಕಡಿಮೆಯಾಗಿದೆ.
2001ರಿಂದ 2011ರ ಹತ್ತು ವರ್ಷಗಳ ಅವಧಿಯಲ್ಲಿ ಮುಸ್ಲಿಮ್ ಸಮುದಾಯದ ಜನಸಂಖ್ಯೆ ಶೇ.24.6 ಹೆಚ್ಚಾಗಿದ್ದರೆ, 121 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಮುಸ್ಲಿ ಮರ ಜನಸಂಖ್ಯೆ ಶೇ.14.2 ಅಂದರೆ 17.22 ಕೋಟಿಯಾಗಿದೆ. ಒಟ್ಟು 96.63 ಕೋಟಿ ಜನ ಸಂಖ್ಯೆಯಿರುವ ಹಿಂದೂಗಳು ಒಟ್ಟು ಜನಸಂಖ್ಯೆಯ ಶೇ.79.8ರಷ್ಟಿದ್ದಾರೆ.
ಶುಕ್ರವಾರ ಬಿಡುಗಡೆ ಮಾಡಲಾದ ಮಾಹಿತಿಯ ಪ್ರಕಾರ ಹಿಂದು ಕುಟುಂಬಗಳ ಸರಾಸರಿ ಗಾತ್ರ ಶೇ. 5.02 ಕಡಿಮೆಯಾಗಿದ್ದರೆ, ಕ್ರೈಸ್ತ ಕುಟುಂಬಗಳ ಗಾತ್ರ 6.47ರಷ್ಟು ಕಡಿಮೆಯಾಗಿದೆ. ಅಂತೆಯೇ ಬೌದ್ಧ ಧರ್ಮದ ಕುಟುಂಬಗಳ ಹಾಗೂ ಜೈನ ಕುಟುಂಬಗಳ ಗಾತ್ರ ಕ್ರಮವಾಗಿ ಶೇ. 5.96 ಹಾಗೂ ಶೇ. 5.5 ಕಡಿಮೆಯಾಗಿದೆ.
ಮುಸ್ಲಿಮರು ದೊಡ್ಡ ಗಾತ್ರದ ಕುಟುಂಬಗಳನ್ನು ಹೊಂದಿದ್ದಾರೆ ಹಾಗೂ ಅವರ ಜನಸಂಖ್ಯೆ ಕ್ಷಿಪ್ರವಾಗಿ ಬೆಳೆಯುತ್ತಿವೆಯೆಂದು ಬಲಪಂಥೀಯ ಹಿಂದೂ ಸಂಘಟನೆಗಳು ಬೊಬ್ಬಿರಿಯುತ್ತಿರುವ ಸಂದರ್ಭದಲ್ಲಿ ಈ ಜನಗಣತಿ ವರದಿ ಮಹತ್ವ ಪಡೆದುಕೊಂಡಿದೆ. ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿರುವ ವೇಗಕ್ಕೆ ಸರಿಸಮನಾಗಲು ಹಿಂದೂ ಮಹಿಳೆಯರೂ ಕನಿಷ್ಠ ಆರು ಮಕ್ಕಳನ್ನು ಹೆರಬೇಕೆಂದು ಕಳೆದ ವರ್ಷ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹಾಗೂ ವಿಹಿಂಪ ನಾಯಕಿ ಸಾಧ್ವಿ ಪ್ರಾಚಿ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.