ಅನಿರೀಕ್ಷಿತಗಳಿಲ್ಲದ ‘ಸರಬ್ಜಿತ್’

Update: 2016-05-21 18:40 GMT

ಸಾಧಾರಣವಾಗಿ, ನೈಜ ಕತೆಯನ್ನು ಸಿನೆಮಾ ಮಾಡುವ ಸಂದರ್ಭದಲ್ಲಿ ಚಿತ್ರಕತೆ, ನಿರೂಪಣೆ ಬಿಗಿಯಾಗದೇ ಹೋದರೆ, ಪ್ರೇಕ್ಷಕನನ್ನು ಸೆಳೆಯುವಲ್ಲಿ ಯಶಸ್ವಿಯಾಗುವುದಿಲ್ಲ. ಈಗಾಗಲೇ ಮಾಧ್ಯಮಗಳ ಮೂಲಕ ಸಾಕಷ್ಟು ಸುದ್ದಿಯಾಗಿರುವ ‘ಸರಬ್ಜಿತ್’ ಚಿತ್ರದ ವೈಫಲ್ಯವಿರುವುದೇ ಇಲ್ಲಿ. ಬಹುಶಃ ಪಾಕಿಸ್ತಾನದ ಮೇಲಿನ ದ್ವೇಷಕ್ಕಾಗಿ ಈ ಚಿತ್ರವನ್ನು ಒಮ್ಮೆ ನೋಡಬಹುದು. ಜೊತೆಗೆ ಭಾರತದ ಮೇಲಿನ ಪ್ರೀತಿಯನ್ನು ಸಾಬೀತು ಪಡಿಸುವುದಕ್ಕಾಗಿಯೂ. ಆದರೆ ಅದರಾಚೆಗೆ ಒಂದು ಸಿನೆಮಾವಾಗಿ ಸರಬ್ಜಿತ್‌ನನ್ನು ನೋಡಲು ಹೋದರೆ ನಿಮಗೆ ನಿರಾಸೆ ಕಟ್ಟಿಟ್ಟ ಬುತ್ತಿ.

   
 
 

ಸರಬ್ಜಿತ್ ಕತೆ ಎಲ್ಲರಿಗೂ ತಿಳಿದಿರುವಂತಹದ್ದು. ಎರಡು ದೇಶಗಳ ನಡುವಿನ ರಾಜಕೀಯಕ್ಕೆ ಬಲಿಯಾದ ಸರಬ್ಜಿತ್‌ನ ದುರಂತದಲ್ಲಿ ಎರಡು ಸರಕಾರಗಳೂ ಸಮಪಾಲನ್ನು ಹೊಂದಿವೆ. ಪ್ರೇಕ್ಷಕ ಈಗಾಗಲೇ ಈತನ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹೊಂದಿದ್ದಾನೆ. ಸಿನೆಮಾ ನೋಡುವಾಗ ಅದರ ಆಚೆಗಿನ ನೋಟವೊಂದನ್ನು ನಿರೀಕ್ಷಿಸುತ್ತಾನೆ. ಆದರೆ ದುರ್ಬಲ ಕತೆ, ಸಿನೆಮಾವನ್ನು ಪ್ರೇಕ್ಷಕನಿಗೆ ತಲುಪಿಸುವಲ್ಲಿ ವಿಫಲವಾಗಿದೆ. ಚಿತ್ರದಲ್ಲಿ ನಿರ್ದೇಶಕ ಸರಬ್ಜಿತ್‌ಗಿಂತಲೂ ಐಶ್ವರ್ಯಾ ರೈ ಕಡೆಗೆ ಹೆಚ್ಚು ಗಮನ ಕೊಟ್ಟಂತಿದೆ. ಸರಬ್ಜಿತ್ ಮತ್ತು ಆತನ ಅಕ್ಕ ದಲ್ಬೀರ್ ಕೌರ್ ಅವರು ಚಿತ್ರದ ಕೇಂದ್ರ ಬಿಂದು. ಸರಬ್ಜಿತ್ ಜೈಲಿನೊಳಗೆ ಅನುಭವಿಸುವ ಧಾರುಣ ಬದುಕು ಮನಸು ತಟ್ಟುತ್ತದೆ. ಆದರೆ ಅದಷ್ಟೇ ಸಿನೆಮಾ ಆಗುವುದಿಲ್ಲ. ದಲ್ಬೀರ್ ಕೌರ್ ಆಗಿ ಐಶ್ವರ್ಯಾ ರೈ ಒಂದಿಷ್ಟು ಗಮನ ಸೆಳೆಯುತ್ತಾರಾದರೂ, ಪಂಜಾಬಿನ ಹೆಣ್ಣನ್ನು ಅವರ ಮುಖದಲ್ಲಿ ಗುರುತಿಸಲು ಪ್ರೇಕ್ಷಕ ಒಂದಿಷ್ಟು ಹೆಣಗಾಡಬೇಕಾಗುತ್ತದೆ. ಐಶ್ವರ್ಯಾ ಆ ಪಾತ್ರಕ್ಕೆ ಜೀವ ತುಂಬಲು ವಿಫಲವಾದುದು ಚಿತ್ರದ ಬಹುದೊಡ್ಡ ಸೋಲಾಗಿದೆ. ಸರಬ್ಜಿತ್ ಆಗಿ ರಣ್‌ದೀಪ್ ಹೂಡ ಪರಿಣಾಮಕಾರಿಯಾಗಿ ನಟಿಸಿದ್ದಾರಾದರೂ, ಅವರಿಂದ ಇನ್ನಷ್ಟು ಸಾಧನೆಯನ್ನು ಪ್ರೇಕ್ಷಕ ನಿರೀಕ್ಷಿಸುತ್ತಾನೆ. ಅವರ ದೃಢಕಾಯ ಶರೀರವನ್ನು ಜೈಲಿನ ದೃಶ್ಯಗಳಲ್ಲಿ ಸಾಕಷ್ಟು ಪಳಗಿಸಿದ್ದಾರಾದರೂ, ಇನ್ನೂ ಒಂದಿಷ್ಟು ಪಳಗಬೇಕಾಗಿತ್ತು ಎಂದು ಅನ್ನಿಸಿ ಬಿಡುತ್ತದೆ. ಮುಖ್ಯವಾಗಿ ನಿರ್ದೇಶಕ ಹೊಸತನ್ನೇನೂ ಹೇಳುವುದಿಲ್ಲ. ಮಾಧ್ಯಮಗಳಲ್ಲಿ ಬಂದ ವರದಿಯನ್ನೇ ಆಧರಿಸಿ, ಸರಬ್ಜಿತ್ ಅವರನ್ನು ಕಟ್ಟಿಕೊಟ್ಟಿದ್ದಾರೆ. ಒಂದು ರೀತಿಯಲ್ಲಿ ಪಾಕಿಸ್ತಾನಿಯರು ಖಳರು ಮತ್ತು ಭಾರತೀಯರು ಅಮಾಯಕರು ಎನ್ನುವ ಅದೇ ಬ್ಲಾಕ್ ಆ್ಯಂಡ್ ವೈಟ್ ಕ್ಯಾಮರಾದಲ್ಲಿ ಇಡೀ ಚಿತ್ರದಲ್ಲಿ ಕಟ್ಟಿಕೊಟ್ಟಿರುವುದರಿಂದ, ಪ್ರೇಕ್ಷಕ ಊಹಿಸಿದಂತೆಯೇ ಚಿತ್ರ ಸಾಗುತ್ತದೆ. ಉಭಯ ದೇಶಗಳ ಸರಕಾರಗಳ ನಡುವಿನ ರಾಜಕೀಯದ ಒಳಸುಳಿಗಳ ಬಗ್ಗೆ ತೀವ್ರವಾಗಿ ಗಮನಸೆಳೆದಿದ್ದರೆ ಚಿತ್ರ ಒಂದಿಷ್ಟು ಭಿನ್ನವಾಗಬಹುದಿತ್ತು. ಭಾರತ ಸರಕಾರಕ್ಕೆ ಹೇಗೆ ಕಸಬ್ ಮತ್ತು ಅಫ್ಝಲ್‌ಗುರುವನ್ನು ಗಲ್ಲಿಗೇರಿಸುವುದು ಅಗತ್ಯವಾಗಿತ್ತೋ, ಹಾಗೆಯೇ ಪಾಕಿಸ್ತಾನಕ್ಕೂ ಸರಬ್ಜಿತ್‌ನನ್ನು ಗಲ್ಲಿಗೇರಿಸುವುದು ಅನಿವಾರ್ಯವಾಗಿತ್ತು. ಈ ರಾಜಕೀಯವನ್ನು ಮುನ್ನೆಲೆಗೆ ತಂದು ಸಿನೆಮಾ ಮಾಡಿದ್ದರೆ, ಕೆಲವು ಅನಿರೀಕ್ಷಿತಗಳು ಚಿತ್ರದಲ್ಲಿ ಬಂದು ಬಿಡುತ್ತಿತ್ತೋ ಏನೋ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News