ಯೂ ಟರ್ನ್: ನಿರ್ದೇಶಕನೇ ನಿಜವಾದ ಹೀರೋ...

Update: 2016-05-21 18:42 GMT

ಪವನ್ ಕುಮಾರ್ ಎಂದಾಗ ತಟ್ಟನೆ ನೆನಪಾಗುವುದು ‘ಲೂಸಿಯಾ’ ಮಾತ್ರ. ಒಂದು ಸಿನೆಮಾದ ಮೂಲಕ, ಫಿಲಾಸಫಿಯನ್ನು ಹೇಳಲು ಯತ್ನಿಸಿದವರು ಮತ್ತು ಅದನ್ನು ಅಷ್ಟೇ ಲವಲವಿಕೆಯಿಂದ ಹೇಳಿ ಯಶಸ್ವಿಯಾದವರು. ‘ಲೈಫ್ ಇಷ್ಟೇನೇ’ ಚಿತ್ರದ ಮೂಲಕ ಗಮನ ಸೆಳೆದ ಲೂಸಿಯಾ, ತನ್ನ ಪ್ರತಿಭೆ ಆಕಸ್ಮಿಕವಲ್ಲ ಎನ್ನುವುದನ್ನು ಲೂಸಿಯಾ ಸಾಹಸದ ಮೂಲಕ ಸಾಧಿಸಿ ತೋರಿಸಿದರು. ಇದೀಗ ಇನ್ನೊಂದು ಟರ್ನ್ ತೆಗೆದುಕೊಂಡಿದ್ದಾರೆ ಅವರು. ಅದೇ ‘ಯೂ ಟರ್ನ್’ ಎನ್ನುವ ಥ್ರಿಲ್ಲರ್ ಚಿತ್ರವನ್ನು ಮಾಡುವ ಮೂಲಕ. ಅಪಘಾತದ ಜಾಡು ಹಿಡಿದು ನೇರ ರಸ್ತೆಯಲ್ಲಿ ಸಾಗುವ ಪತ್ರಕರ್ತೆ ರಚನಾ ಅವರ ಬದುಕಿನಲ್ಲಿ ಯೂಟರ್ನ್ ಬಂದು ಬಿಡುತ್ತದೆ. ಒಂದು ಕೊಲೆಯ ಸುಳಿಯೊಳಗೆ ಆಕೆ ಸಿಲುಕುತ್ತಾಳೆ. ಈ ಹತ್ಯೆ ಮತ್ತು ಇತರ ಅಪಘಾತಗಳ ನಡುವಿನ ಸಂಬಂಧಗಳನ್ನು ಅತ್ಯಂತ ಕುಶಲ ನೇಕಾರನಂತೆ ನಿರ್ದೇಶಕರು ಹೆಣೆಯುತ್ತಾರೆ. ಮತ್ತು ಒಂದು ಥ್ರಿಲ್ಲರ್ ಚಿತ್ರಕ್ಕೆ ಅಗತ್ಯವಿರುವ ಪರಿಣಾಮಕಾರಿ ಕ್ಲೈಮಾಕ್ಸ್‌ನ್ನುಕೂಡ ನೀಡುತ್ತಾರೆ. ಇಡೀ ಚಿತ್ರದ ನಿಜವಾದ ಹೀರೋ ನಿರ್ದೇಶಕ ಪವನ್ ಕುಮಾರ್ ಆಗಿದ್ದಾರೆ. ಶೃದ್ಧಾ ಶ್ರೀನಾಥ್ ತನ್ನ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ. ದಿಲೀಪ್ ರಾಜ್ ಸಿಕ್ಕಿದ ಅವಕಾಶವನ್ನು ಬಳಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ನಾರಾಯಣ್ ಗಮನಸೆಳೆಯುತ್ತಾರೆ. ಛಾಯಾಗ್ರಹಣವೂ ಥ್ರಿಲ್ಲರ್ ಚಿತ್ರಕ್ಕೆ ಪೂರಕವಾಗಿದೆ. ಪ್ರೇಕ್ಷಕರ ಎಲ್ಲ ಊಹೆಗಳನ್ನು ತಲೆಕೆಳಗೆ ಮಾಡುವ ನಿರ್ದೇಶಕ, ಕನ್ನಡಕ್ಕೆ ಒಂದು ಅಪರೂಪದ ಥ್ರಿಲ್ಲರ್ ಚಿತ್ರವನ್ನು ನೀಡಿದ್ದಾರೆ. ಆ ಮೂಲಕ ತನ್ನ ಮೂರನೆ ಸಾಹಸದಲ್ಲೂ ಪವನ್ ಗೆದ್ದಿದ್ದಾರೆ. ಚಿತ್ರದ ಸಕಲ ಕುಶಲತೆಯನ್ನು ಬಲ್ಲ ಈ ನಿರ್ದೇಶಕರಿಂದ ಇನ್ನಷ್ಟು ಸಾಹಸಗಳನ್ನು ಕನ್ನಡ ಪ್ರೇಕ್ಷಕರು ಧಾರಾಳವಾಗಿ ನಿರೀಕ್ಷಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News