ಪಶ್ಚಿಮ ಬಂಗಾಳದ ಎಲ್ಲ ಕ್ಷೇತ್ರಗಳಲ್ಲಿ ಪ್ರಭಾವ ಬೀರಿದ ‘ನೋಟಾ’

Update: 2016-05-22 05:42 GMT

ಪಾಂಡಿಚೇರಿಯಲ್ಲಿ ಗರಿಷ್ಠ, ಕೇರಳದಲ್ಲಿ ಕನಿಷ್ಠ ನೋಟಾ ಮತ ಚಲಾವಣೆ

ಕೋಲ್ಕತಾ,ಮೇ 22: ಮತದಾನ ಯಂತ್ರದಲ್ಲಿ ಮತದಾರರಿಗೆ ಅಭ್ಯರ್ಥಿಯನ್ನು ತಿರಸ್ಕರಿಸಲು ಇಡಲಾಗಿರುವ ಆಯ್ಕೆ ‘ನೋಟಾ’ಕ್ಕೆ ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂಗಾಳದ ಎಲ್ಲ ಕ್ಷೇತ್ರಗಳಲ್ಲಿ ನೋಟಾ ಮತ ಹೆಚ್ಚು ಪ್ರಭಾವ ಬೀರಿದ್ದು, ಇದರಿಂದ ಚುನಾವಣಾ ಕಣದಲ್ಲಿದ್ದ ರಾಜಕೀಯ ಪಕ್ಷಗಳಾದ ಬಿಎಸ್ಪಿ, ಸಿಪಿಐ, ಫಾರ್ವರ್ಡ್ ಬ್ಲಾಕ್, ಎಸ್‌ಯುಸಿಐ ಹಾಗೂ ಪಕ್ಷೇತರ ಅಭ್ಯರ್ಥಿಗಳು ಭಾರೀ ಹೊಡೆತ ಅನುಭವಿಸಿದ್ದವು.

ಬಂಗಾಳದ ಹೆಚ್ಚಿನೆಲ್ಲ್ಲಾ ಕ್ಷೇತ್ರಗಳಲ್ಲಿ ನೋಟಾ ನಾಲ್ಕನೆ ಸ್ಥಾನ ಪಡೆದಿದೆ. ಇತ್ತೀಚೆಗೆ ನಡೆದ ಪಾಂಡಿಚೇರಿ, ಅಸ್ಸಾಂ ಹಾಗೂ ತಮಿಳುನಾಡು ರಾಜ್ಯಗಳ ಚುನಾವಣೆಯಲ್ಲೂ ನೋಟಾದಿಂದ ಎಡರಂಗ-ಕಾಂಗ್ರೆಸ್ ಮೈತ್ರಿಕೂಟ ಹಾಗೂ ಬಿಜೆಪಿಗಳು ನಷ್ಟ ಅನುಭವಿಸಿವೆ. ಕೇರಳದ ಮತದಾರರು ನೋಟಾಕ್ಕೆ ಹೆಚ್ಚು ಒತ್ತು ನೀಡಿಲ್ಲ. ಅಸ್ಸಾಂನಲ್ಲಿ ತೃಣಮೂಲ ಕಾಂಗ್ರೆಸ್‌ಗಿಂತ ಹೆಚ್ಚು ಮತಗಳು ನೋಟಾಕ್ಕೆ ಚಲಾವಣೆಯಾಗಿದೆ.

ಪಶ್ಚಿಮ ಬಂಗಾಳದ 6.55 ಕೋಟಿ ಮತದಾರರ ಪೈಕಿ 8 ಲಕ್ಷಕ್ಕೂ ಅಧಿಕ ಮತದಾರರು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತ ಹಾಕದೇ ನೋಟಾ ಬಟನ್‌ನ್ನು ಒತ್ತಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 5 ಲಕ್ಷ ಮತದಾರರು ನೋಟಾಕ್ಕೆ ಒತ್ತು ನೀಡಿದ್ದರು. ಇತ್ತೀಚೆಗೆ ಕೊನೆಗೊಂಡ ಪಂಚರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ ಪಾಂಡಿಚೇರಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ(ಶೇ.1.7) ನೋಟಾ ಮತ ಚಲಾವಣೆಯಾಗಿದ್ದರೆ, ಕೇರಳದಲ್ಲಿ ಕಡಿಮೆ ಪ್ರಮಾಣದ(ಶೇ.0.5) ನೋಟಾ ಮತ ಚಲಾವಣೆಯಾಗಿತ್ತು.

ಸುಪ್ರೀಂಕೋರ್ಟ್‌ನ ಆದೇಶದ ಬಳಿಕ ಭಾರತದ ಚುನಾವಣಾ ಆಯೋಗ 2013ರ ಅಕ್ಟೋಬರ್‌ನಲ್ಲಿ ಇವಿಎಂ ಯಂತ್ರ ಹಾಗೂ ಇತರ ಮತದಾನದ ಪತ್ರದಲ್ಲಿ ನೋಟಾ ಆಯ್ಕೆಯನ್ನು ಮೊದಲ ಬಾರಿ ಜಾರಿಗೆ ತಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News