ಸಮಾನತೆಯ ಶತ್ರುವಿನ ವಿರುದ್ದ್ಧ ಐಕ್ಯ ಹೋರಾಟ

Update: 2016-05-22 18:31 GMT

ಮುಂಬರುವ ದಿನಗಳಲ್ಲಿ ಸಮಾನತೆಯ ಶತ್ರುಗಳು ಯಾರು? ಮಿತ್ರರು ಯಾರು? ಎಂಬುದು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸ್ಪಷ್ಟವಾಗಿದೆ. ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಗೆದ್ದು ತಮಿಳುನಾಡು, ಪುದುಚೇರಿಗಳಲ್ಲಿ ಶೂನ್ಯ ಸಂಪಾದನೆ ಮಾಡಿದ ಬಿಜೆಪಿ, ಕಾಂಗ್ರೆಸ್ ಮುಕ್ತ ಭಾರತದ ಕನಸು ಕಾಣುತ್ತಿದೆ. ಜೊತೆಗೆ ಕೇರಳದಲ್ಲಿ ಖಾತೆ ಓಪನ್ ಮಾಡಿ ಈವರೆಗೆ ನೆಮ್ಮದಿಯ ತಾಣವಾಗಿದ್ದ ಈ ರಾಜ್ಯವನ್ನು ಶಾಂತವಾಗಿರಲು ಬಿಡುವುದಿಲ್ಲ ಎಂದು ಹೂಂಕರಿಸುತ್ತಿದೆ. ಹಾಗೆ ನೋಡಿದರೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮತ್ತು ಎಡಪಕ್ಷಗಳು ಹೆಚ್ಚು ಸ್ಥಾನವನ್ನು ಗೆದ್ದುಕೊಂಡಿವೆ. ಕೇರಳದಲ್ಲಿ ಒಂದು ಸ್ಥಾನ ಗೆದ್ದು ಅಸ್ಸಾಂನಲ್ಲಿ ಬಹುಮತ ಸಾಧಿಸಿದ ಬಿಜೆಪಿ ಇಡೀ ಭಾರತವನ್ನು ಗೆದ್ದಂತೆ ಬೀಗುತ್ತಿದೆ. ಕೋಮುವಾದಿ ಮನೋರೋಗಿಗಳು ಫೇಸ್‌ಬುಕ್‌ಗಳಲ್ಲಿ ವಾಂತಿಭೇದಿ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಟ್ಟು 696 ಸ್ಥಾನಗಳಿಗೆ ಸ್ಪರ್ಧಿಸಿ 64 ಸ್ಥಾನಗಳನ್ನು (ಶೇ.9.1 ಮತಗಳನ್ನು) ಪಡೆದಿದೆ. ಕಾಂಗ್ರೆಸ್ 363 ಸ್ಥಾನಗಳಿಗೆ ಸ್ಪರ್ಧಿಸಿ 115 ಸ್ಥಾನಗಳನ್ನು ಶೇ.31.6ರಷ್ಟು ಮತಗಳನ್ನು ಪಡೆದಿದೆ. ಎಡಪಕ್ಷಗಳು 452 ಸ್ಥಾನಗಳಿಗೆ ಸ್ಪರ್ಧಿಸಿ 124 ಸ್ಥಾನಗಳನ್ನು (ಶೇ.27.4 ಮತಗಳನ್ನು ಪಡೆದಿದೆ). ಹಾಗಿದ್ದರೆ ಬಿಜೆಪಿ ಹೇಳಿಕೊಳ್ಳುವಂತೆ ಜನತೆ ಅದನ್ನು ಸಂಪೂರ್ಣ ಬೆಂಬಲಿಸದ್ದಾರೆಯೇ? ಅಸ್ಸಾಂನಲ್ಲಿ ಬಿಜೆಪಿ ಗೆಲುವನ್ನು ಯಾವುದೇ ಪಕ್ಷದ ಗೆಲುವೆಂದು ತಳ್ಳಿ ಹಾಕಲಾಗುವುದಿಲ್ಲ. ಅಲ್ಲಿ ಬಾಂಗ್ಲಾದೇಶದ ವಲಸೆಗಾರರ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡು ಆರೆಸ್ಸೆಸ್ ದಶಕಗಳಿಂದ ತನ್ನ ಜಾಲವನ್ನು ವಿಸ್ತರಿಸಿಕೊಂಡಿದೆ. ಹಿಂದು ಮುಸಲ್ಮಾನರ ನಡುವೆ ದ್ವೇಷದ ಅಡ್ಡಗೋಡೆ ನಿರ್ಮಿಸಿದೆ. ಈ ವಿಭಜನೆಯ ಲಾಭ ಬಿಜೆಪಿಗೆ ಆಯಿತು.

ಈವರೆಗೆ ಈಶಾನ್ಯ ರಾಜ್ಯದಲ್ಲಿ ಈ ದಂಗೆಕೋರರ ಹಾವಳಿ ಇರಲಿಲ್ಲ. ಈಗ ಅಸ್ಸಾಂ ಮೂಲಕ ಅಲ್ಲಿ ಕಾಲು ಚಾಚಿದ ಜನರು ಇದೇ ಆ ಭೂಪ್ರದೇಶಕ್ಕೆ ಕೊಳ್ಳಿ ಇಡಲಿದ್ದಾರೆ. ಇದಕ್ಕಾಗಿ ಆರೆಸ್ಸೆಸ್ ಎಷ್ಟು ರಹಸ್ಯವಾದ ತಂತ್ರ ರೂಪಿಸಿದೆ ಅಂದರೆ ಅಲ್ಲಿ ಶಾಲೆ, ದವಾಖಾನೆಗಳನ್ನು ತೆರೆದು ಸೇವೆಯ ಸೋಗಿನಲ್ಲಿ ಕೋಮು ವಿಷ ಪ್ರಾಶನ ಮಾಡಿಸುತ್ತಿದೆ. ಅಸ್ಸಾಂ ಬುಡಕಟ್ಟು ಜನಾಂಗದ ಕೆಲ ಮಕ್ಕಳನ್ನು ದತ್ತು ಪಡೆದು ದೇಶದ ಬೇರೆ ಬೇರೆ ಕಡೆ ಅವರಿಗೆ ವಿದ್ಯೆ ಕಲಿಸುವ ನೆಪದಲ್ಲಿ ಆ ಮಕ್ಕಳಿಗೆ ಬ್ರೈನ್‌ವಾಶ್ ಮಾಡಲಾಗುತ್ತಿದೆ. ಕರ್ನಾಟಕದ ಕೆಲವೆಡೆ ಆರೆಸ್ಸೆಸ್ ಅಸ್ಸಾಂ ಮಕ್ಕಳನ್ನು ತಂದು ಓದಿಸುತ್ತಿದೆ. ಚಿಕ್ಕಬಳ್ಳಾಪುರ ಮುಂತಾದ ಕಡೆ ಇಂಥ ಚಟುವಟಿಕೆ ಅತ್ಯಂತ ನಿಗೂಢವಾಗಿ ನಡೆದಿದೆ. ಜಾತ್ಯತೀತ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡುವ ಆರೆಸ್ಸೆಸ್ ಹಿಡನ್ ಅಜೆಂಡಾ ಜಾರಿಗೆ ಮೋದಿ ಪ್ರಧಾನಿಯಾದ ನಂತರ ಉತ್ತಮ ಅವಕಾಶ ದೊರಕಿದೆ. ಕೇಂದ್ರ ಸರಕಾರದ ನೆರವಿಂದಲೇ ಈ ಕಾರ್ಯಾಚರಣೆ ನಡೆದಿದೆ. ಅಸ್ಸಾಂ ಗೆಲುವು ಆಕಸ್ಮಿಕವಲ್ಲ. ಅದರ ಹಿಂದೆ ನಾನಾ ಶಕ್ತಿಗಳು ಕೆಲಸ ಮಾಡಿವೆ. ಪಕ್ಕದ ಬಾಂಗ್ಲಾದೇಶದಿಂದ ಅಸ್ಸಾಂಗೆ ವಲಸೆ ಬರುವ ಜನರಲ್ಲಿ ಹಿಂದೂ-ಮುಸ್ಲಿಂ ಎಂಬ ವಿಭಜನೆ ಮಾಡಿ ಹಿಂದೂ ವಲಸಿಗರಿಗೆ ದೇಶದ ನಾಗರಿಕತ್ವ ನೀಡಿ, ಮುಸ್ಲಿಂ ವಲಸೆಗಾರರ ಹೊರಗಟ್ಟಬೇಕೆಂಬುದು ಸಂಘಪರಿವಾರದ ಕಾರ್ಯಸೂಚಿಯಾಗಿದೆ. ಈ ಕಾರ್ಯಸೂಚಿ ಇನ್ನು ಮುಂದೆ ಇನ್ನಷ್ಟು ವೇಗವಾಗಿ ಜಾರಿಗೆ ಬಂದು ಈಶಾನ್ಯ ಭಾರತದಲ್ಲಿ ಅಶಾಂತಿ ಭುಗಿಲೇಳಲಿದೆ. ಅಸ್ಸಾಂನಲ್ಲಿ ಗೆಲುವಿಗೆ ಮಾಧ್ಯಮಗಳೂ ಪರೋಕ್ಷವಾಗಿ ನೆರವಾಗಿವೆ. ಟೈಮ್ಸ್‌ನೌ ಚಾನಲ್‌ನ ಅರ್ನಾಬ್ ಗೋಸ್ವಾಮಿ ನಿತ್ಯವೂ ಸಂಘಪರಿವಾರದ ಪುಂಗಿ ಊದುತ್ತಾರೆ. ಕಾರಣ ಅಸ್ಸಾಂನಲ್ಲಿ ಈತನ ಸಂಬಂಧಿಕರೆಲ್ಲ ಬಿಜೆಪಿಯಲ್ಲಿದ್ದಾರೆ. ಅರ್ನಾಬ್ ಮಾವ ಸಿದ್ಧಾರ್ಥ ಭಟ್ಟಾಚಾರ್ಯ ಈ ಬಾರಿ ಪೂರ್ವ ಗೌಹಾತಿಯಿಂದ ವಿಧಾನಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದಾರೆ. ಕೇರಳದಲ್ಲಿ ಕಮ್ಯೂನಿಸ್ಟರಿಲ್ಲದಿದ್ದರೆ ಕಾಂಗ್ರೆಸ್‌ನ ದುರಾಡಳಿತದ ಲಾಭವನ್ನು ಇದೇ ಬಿಜೆಪಿ ಪಡೆಯುತ್ತಿತ್ತು. ಆದರೆ ಕಯ್ಯೂರ ಮತ್ತು ತುನ್ನಪ್ಪ ವಯಲಾರ್ ಹೋರಾಟದ ಕಾಲದಿಂದ ಕೇರಳದಲ್ಲಿ ಕಮ್ಯೂನಿಸ್ಟ್ ಪರಂಪರೆ ಇದೆ. ಅಂತಲೇ ರಾಜ್ಯದಲ್ಲಿ ಕೋಮುದಳ್ಳುರಿ ಎಬ್ಬಿಸುವ ಅದರ ಷಡ್ಯಂತ್ರ ವಿಫಲಗೊಂಡಿದೆ. ಆದರೂ ವಿಧಾನಸಭೆ ಚುನಾವಣೆಯಲ್ಲಿ ಒಂದು ಸ್ಥಾನಗೆದ್ದ ನಂತರ ಜಾತ್ಯತೀತ ಕೇರಳದಲ್ಲಿ ಕೋಮುವಾದಿ ಅಕೌಂಟ್ ಓಪನ್ ಆರಂಭವಾಗಿದೆ. ಕಣ್ಣೂರಲ್ಲಿ ಸಿಪಿಎಂ ವಿಜಯೋತ್ಸವ ಮೆರವಣಿಗೆ ಮೇಲೆ ಬಾಂಬ್ ಹಾಕಿ ಕಮ್ಯೂನಿಸ್ಟ್ ಕಾರ್ಯಕರ್ತನೊಬ್ಬನ ಸಾವಿಗೆ ಈ ಪರಿವಾರ ಕಾರಣವಾಗಿದೆ. ಸಮಾನತೆಯನ್ನು ಬಯಸುವ ಮನಸುಗಳಿಗೆ ಮುಂಬರುವ ದಿನಗಳು ಸುಲಭದ ದಿನಗಳಲ್ಲ. ಹಿಂದೂರಾಷ್ಟ್ರ ನಿರ್ಮಾಣದ ತನ್ನ ಅಜೆಂಡಾ ಜಾರಿಗೆ ಆರೆಸ್ಸೆಸ್ ಶತಾಯ ಗತಾಯ ಯತ್ನಿಸಲಿದೆ. ಇದಕ್ಕೆ ಪೂರಕವಾಗಿ ಕೇಂದ್ರದ ಮೋದಿ ಸರಕಾರ ಕಾರ್ಯನಿರ್ವಹಿಸುತ್ತಿದೆ. ಅಂಬೇಡ್ಕರ್, ಪೆರಿಯಾರ್, ಜ್ಯೋತಿಬಾಫುಲೆ ವಿಚಾರಧಾರೆಯನ್ನು ಜನರ ಮುಂದೆ ಕೊಂಡೊಯ್ಯಲು ಬಿಡುವುದಿಲ್ಲ. ಚೆನ್ನೈಯಲ್ಲಿ ಐಐಟಿಯಲ್ಲಿ ಅಂಬೇಡ್ಕರ್, ಪೆರಿಯಾರ್ ವಿಚಾರ ವೇದಿಕೆ ನಿಷೇಧ ಪ್ರಕರಣ, ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ವೇಮುಲಾ ಸಾವು, ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಕನ್ಹಯ್ಯಾ ಕುಮಾರ್, ಖಲೀಲ್ ಬಂಧನ ಇವೆಲ್ಲ ಘಟನೆಗಳು ನಮ್ಮ ಕಣ್ಣ ಮುಂದಿವೆ.

ಅಂಬೇಡ್ಕರ್ ಕನಸುಕಂಡಿದ್ದ ಸಮಾನತೆಯ ಭಾರತವನ್ನು ನಾಶಮಾಡಿ ಶ್ರೇಣೀಕೃತ ಹಿಂದೂರಾಷ್ಟ್ರ ನಿರ್ಮಿಸುವ ಆರೆಸ್ಸೆಸ್ ಕಾರ್ಯಸೂಚಿಯನ್ನು ತಡೆಯಲು ಜಾತ್ಯತೀತ ಪಕ್ಷ ಮತ್ತು ಸಂಘಟನೆಗಳಿಂದ ಮಾತ್ರ ಸಾಧ್ಯ. ಇಂಥ ನಿರ್ಣಾಯಕ ಕಾಲಘಟ್ಟದಲ್ಲಿ ಕಾಂಗ್ರೆಸ್ ಕಳಾಹೀನವಾಗಿದೆ. ಅಣ್ಣಾಡಿಎಂಕೆ ಯಂಥ ಪ್ರಾದೇಶಿಕ ಪಕ್ಷಗಳು ಯಾವಾಗ ಎಲ್ಲಿರುತ್ತವೆ ಎಂಬುದನ್ನು ಹೇಳಲಾಗುವುದಿಲ್ಲ. ಅಸ್ಸಾಂ ಗಣಪರಿಷತ್ತಿನಂಥ ಪ್ರಾದೇಶಿಕ ಪಕ್ಷದ ನೆರವು ಪಡೆದು ಸಂಘಪರಿವಾರ ಅಲ್ಲಿ ಕಾಲೂರಿದ್ದನ್ನು ಮರೆಯಬಾರದು. ಇಂಥಸನ್ನಿವೇಶದಲ್ಲಿ ಸಂಘಪರಿವಾರ ಮನುವಾದಿ-ಕೋಮುವಾದಿ ಅಜೆಂಡಾವನ್ನು ಮುಖಾಮುಖಿಯಾಗಿ ಎದುರಿಸಿ ಹೋರಾಡುತ್ತಿರುವ ಶಕ್ತಿಗಳೆಂದರೆ ಎಡಶಕ್ತಿ ಮತ್ತು ದಲಿತ ಶಕ್ತಿ. ಈ ಕೆಂಪು ಮತ್ತು ನೀಲಿ ಬಾವುಟಗಳು ಒಂದಾದರೆ ಮಾತ್ರ ಮನುವಾದಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯ. ಇಂಥ ಅಪಾಯಕಾರಿ ಸನ್ನಿವೇಶದಲ್ಲಿ ಎಡಪಕ್ಷಗಳು ಮತ್ತು ದಲಿತ ಸಂಘಟನೆಗಳ ನಡುವೆ ವೈಮನಸ್ಸು ಉಂಟು ಮಾಡುವ ಹುನ್ನಾರವನ್ನು ಸಂಘಪರಿವಾರ ನಡೆಸಿದೆ. ಆದರೆ, ಈ ಅಪಾಯದ ಅರಿವು ಎರಡೂ ಸಂಘಟನೆಗಳಿಗೆ ಆಗುತ್ತಿಲ್ಲ. ಈವರೆಗೆ ಸಮಾನತೆ ಬಯಸುವ ಶಕ್ತಿಗಳ ನಿಜವಾದ ಶತ್ರು ಯಾರೆಂದು ಸ್ಪಷ್ಟವಾಗಿರಲಿಲ್ಲ. ಅದೀಗ ಸ್ಪಷ್ಟವಾಗಿದೆ. ಕಾರ್ಪೊರೇಟ್ ಬಂಡವಾಳಶಾಹಿ ಕೃಪಾಪೋಷಿತ ಹಿಟ್ಲರ್‌ವಾದಿ-ಗೋಳ್ವಲ್ಕರ್‌ವಾದಿ ಸಂಘಪರಿವಾರ ನಮ್ಮೆಲ್ಲರ ಪ್ರಧಾನ ಶತ್ರುವಾಗಿದೆ.
ಈ ಪ್ರಧಾನ ಶತ್ರುವಿನ ವಿರುದ್ಧ ಹೋರಾಡಿ ಹಿಮ್ಮೆಟ್ಟಿಸಲು ಎಲ್ಲ ಜಾತಿಯ ಪ್ರಗತಿಪರರು ದಲಿತ ಮತ್ತು ಎಡಶಕ್ತಿಗಳು ಒಂದುಗೂಡ ಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News