ವಿಳಾಸ ಸಮೇತ ಡೆಲಿವರಿ ಬಾಕ್ಸ್ ಎಸೆಯುವುದು ವಂಚನೆಗೆ ಮೂಲ! : ಏನಿದು ಡೆಲಿವರಿ ಬಾಕ್ಸ್ ವಂಚನೆ?
ಸಾಂದರ್ಭಿಕ ಚಿತ್ರ | Photo Credit : freepik
ಇತ್ತೀಚೆಗೆ ಬೆಂಗಳೂರಿನಲ್ಲಿ ವಂಚಕರ ಜಾಲವೊಂದು ಕಾರ್ಯನಿರ್ವಹಿಸುತ್ತಿದ್ದು, ಎಸೆದ ಶಾಪಿಂಗ್ ಬಾಕ್ಸ್‌ಗಳನ್ನು ಹುಡುಕಿ ತೆಗೆದು ಅದರೊಳಗೆ ವಸ್ತುಗಳನ್ನು ಇಟ್ಟು ಡೆಲಿವರಿ ಬಾಯ್‌ಗಳಂತೆ ಮನೆಗೆ ತಂದು ಕೊಡಲಾಗಿತ್ತು. ಮನೆಯವರು ನಿಜಕ್ಕೂ ತಮ್ಮಲ್ಲೇ ಒಬ್ಬರು ಆರ್ಡರ್ ಮಾಡಿರಬೇಕು ಎಂದುಕೊಂಡು ಅದನ್ನು ಸ್ವೀಕರಿಸಿ ಹಣ ಪಾವತಿಸಿದ್ದಾರೆ. ಇದು ಇತ್ತೀಚೆಗೆ ನಡೆಯುತ್ತಿರುವ ವಂಚನೆ. ಇಂತಹ ತರಹೇವಾರಿ ವಿಧಗಳಲ್ಲಿ ಆನ್‌ಲೈನ್ ಮೋಸಗಳು ಇತ್ತೀಚೆಗೆ ವ್ಯಾಪಕವಾಗಿವೆ.
ಆನ್‌ಲೈನ್ ಆ್ಯಪ್‌ಗಳಿಂದ ಆರ್ಡರ್ ಮಾಡುವಾಗ ಹೇಳಿದ ಉತ್ಪನ್ನದ ಬದಲಾಗಿ ಬೇರೆ ಉತ್ಪನ್ನಗಳು ಬಂದದ್ದು ಇವೆಯೇ? ಅಥವಾ ಡೆಲಿವರಿ ಆಗಿದೆ ಅಂತ ಸಂದೇಶ ಬಂದು ನಂತರ ಉತ್ಪನ್ನ ಸಿಗದೆ ಇದ್ದುದು ಇದೆಯೆ? ಇಂತಹ ಹಲವಾರು ವಂಚನೆಗಳು ನಡೆಯುತ್ತಿವೆ. ಆನ್‌ಲೈನ್ ವ್ಯವಹಾರದ ಬಗ್ಗೆ ಹೆಚ್ಚು ಗೊತ್ತಿಲ್ಲದವರು ದೂರು ಕೊಡುವುದೂ ಇಲ್ಲ. ಹೀಗಾಗಿ ವಂಚನೆಗಳ ಬಗ್ಗೆ ಜನರಿಗೆ ಮಾಹಿತಿಯೂ ಸಿಗುವುದಿಲ್ಲ.
ಏನಿದು ಡೆಲಿವರಿ ಬಾಕ್ಸ್ ವಂಚನೆ?
ಇತ್ತೀಚೆಗೆ ಬೆಂಗಳೂರಿನ ಗಿರಿನಗರದ ನಿವಾಸಿಯೊಬ್ಬರು ಡೆಲಿವರಿ ಬಾಕ್ಸ್ ವಂಚನೆ ಪ್ರಕರಣವೊಂದರ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದರು. ಎಸೆದ ಡೆಲಿವರಿ ಬಾಕ್ಸ್ ವಿಳಾಸವನ್ನು ಪತ್ತೆ ಹಚ್ಚಿ ವಿಳಾಸದಲ್ಲಿರುವ ವ್ಯಕ್ತಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಮನೆಗೆ ಪ್ಯಾಕೇಜ್ ಕೊಂಡೊಯ್ದು ಮನೆಯಲ್ಲಿದ್ದ ವ್ಯಕ್ತಿಯಿಂದ ಹಣ ಪಾವತಿಸುವಂತೆ ಕೇಳಿಕೊಂಡಿದ್ದಾರೆ. ಮನೆಯಲ್ಲಿದ್ದ ವೃದ್ಧೆ ತಮ್ಮ ಮಗಳೇ ಖರೀದಿಸಿರಬೇಕೆಂದುಕೊಂಡು ಹಣ ಪಾವತಿಸಿದ್ದಾರೆ. ಹೀಗೆ ಡೆಲಿವರಿ ಬಾಕ್ಸ್ ವಿಳಾಸ ಪಡೆದು ವಂಚನೆ ಮಾಡುವುದು ಇಲ್ಲಿಗೇ ನಿಲ್ಲುವುದಿಲ್ಲ. ಇನ್‌ಸ್ಟಾಗ್ರಾಂ ಪ್ಲಾಟ್‌ಫಾರ್ಮ್‌ನಲ್ಲಿ ಕಿರುವೀಡಿಯೊ ಒಂದು ಹರಿದಾಡುತ್ತಿದ್ದು, ಅದರಲ್ಲಿ ಇಂತಹ ಡೆಲಿವರಿ ಬಾಕ್ಸ್ ವಂಚನೆ ಬಗ್ಗೆ ಎಚ್ಚರಿಸಲಾಗಿದೆ.
ಈ ಡೆಲಿವರಿ ಬಾಕ್ಸ್ ಅನ್ನು ಅಜಾಗರೂಕತೆಯಿಂದ ಎಸೆಯುವ ಪ್ರವೃತ್ತಿ ನಿಮ್ಮನ್ನು ವಂಚನೆಗೆ ಸಿಲುಕಿಸಬಹುದು ಎನ್ನುವ ಎಚ್ಚರಿಕೆಯನ್ನು ಇನ್‌ಸ್ಟಾಗ್ರಾಂ ವೀಡಿಯೊ ನೀಡುತ್ತಿದೆ. ಇದೊಂದು ಸಣ್ಣ ಸಮಸ್ಯೆಯಾಗಿದ್ದರೂ ದೊಡ್ಡ ವಂಚನೆಯಾಗುವ ಸಾಧ್ಯತೆಯಿದೆ. ಪ್ರತಿ ಬಾರಿ ಆರ್ಡರ್ ಸ್ವೀಕರಿಸಿದಾಗ ವೈಯಕ್ತಿಕ ವಿವರಗಳನ್ನು ತೆಗೆದು ಬಾಕ್ಸ್ ಎಸೆಯಬೇಕು. ಇಲ್ಲದೆ ಹೋದರೆ ಆನ್‌ಲೈನ್ ವಂಚಕರಿಗೆ ನಿಮ್ಮ ಹೆಸರು, ವಿಳಾಸ, ಫೋನ್ ಸಂಖ್ಯೆ ಮತ್ತು ಕೆಲವೊಮ್ಮೆ ಇಮೇಲ್ ವಿಳಾಸವೂ ತಿಳಿಯುತ್ತದೆ. ನಿಮ್ಮ ಆನ್‌ಲೈನ್ ಪ್ರೊಫೈಲ್ ನಿರ್ಮಿಸಲು ಇಷ್ಟು ಸಾಕಾಗುತ್ತದೆ.
ಈ ವಿವರಗಳನ್ನು ಪಡೆದುಕೊಂಡು ಹಗರಣದ ಕರೆಗಳು, ನಕಲಿ ಸಂದೇಶಗಳು ಮತ್ತು ಬಲೆಗೆ ಬೀಳಿಸುವ ಯತ್ನವಾಗುತ್ತದೆ. ನೀವು ತಿರಸ್ಕರಿಸಿ ಎಸೆದ ವಿವರಗಳಿಂದ ನಿಮ್ಮ ಉದ್ಯೋಗ ಮತ್ತು ಇತರ ವಿವರಗಳನ್ನು ಪಡೆದುಕೊಂಡು ಅದಕ್ಕೆ ತಕ್ಕಂತೆ ವೇಷ ಧರಿಸಿ ನಿಮಗೆ ಕರೆ ಮಾಡುತ್ತಾರೆ. ಒಟಿಪಿ ಕೇಳುವುದು, ನಕಲಿ ಲಿಂಕ್ ಕ್ಲಿಕ್ ಮಾಡುವಂತೆ ಹೇಳುವುದು ಅಥವಾ ವಂಚನೆ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಹೇಳುತ್ತಾರೆ. ಇದು ವಂಚನೆಗೆ ದಾರಿಯಾಗುತ್ತದೆ.
ಸುರಕ್ಷಿತವಾಗಿರಲು ಏನು ಮಾಡಬೇಕು?
ಯಾವುದೇ ಡೆಲಿವರಿ ಬಾಕ್ಸ್ ಕೈಗೆ ಸಿಕ್ಕ ಕೂಡಲೇ ಶಿಪ್ಪಿಂಗ್ ಲೇಬಲ್ ತೆಗೆದು ಹಾಕಲು ಮರೆಯಬೇಡಿ. ಎಸೆಯುವ ಮೊದಲು ವಿಳಾಸ ಹರಿದು ಹಾಕಿರುವುದನ್ನು ಖಚಿತಪಡಿಸಿ. ಅಪರಿಚಿತ ಸಂಖ್ಯೆಗಳಿಂದ ಬರುವ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ. ಅನುಮಾನಾಸ್ಪದ ಲಿಂಕ್‌ಗಳಿಗೆ ಕ್ಲಿಕ್ ಮಾಡಬೇಡಿ. ಸಂದೇಶಗಳು ಅಧಿಕೃತ ಮೂಲಗಳಿಂದ ಬಂದಿವೆಯೇ ಎಂದು ಖಚಿತಪಡಿಸಿ. ಸಾಮಾಜಿಕ ಮಾಧ್ಯಮಗಳಲ್ಲಿ ಖಾಸಗಿ ವಿಷಯಗಳನ್ನು ಹಂಚಿಕೊಳ್ಳಬೇಡಿ. ನಿಮ್ಮ ವಿವರಗಳನ್ನು ಖಾಸಗಿಯಾಗಿ ಇರಿಸಿ. ಇಂತಹ ಸಣ್ಣ ದೈನಂದಿನ ಅಭ್ಯಾಸಗಳು ದೊಡ್ಡ ವ್ಯತ್ಯಾಸ ತರಬಹುದು.
ಸಾಮಾಜಿಕ ಮಾಧ್ಯಮಗಳಿಂದ ಖರೀದಿಸಬೇಡಿ
ಇತ್ತೀಚೆಗೆ ದೀಪಾವಳಿ ಸಂದರ್ಭದಲ್ಲಿ ಬೆಂಗಳೂರಿನ ನಿವಾಸಿ ಐಶ್ವರ್ಯ ಇನ್‌ಸ್ಟಾಗ್ರಾಂನಲ್ಲಿ ಕಂಡ ವಿಳಾಸವೊಂದರಿಂದ ರೂ 2000 ಆನ್‌ಲೈನ್ ಪಾವತಿಸಿ ಸೀರೆ ಖರೀದಿಸಿದ್ದರು. ಆದರೆ ಸೀರೆ ಬರಲಿಲ್ಲ. ಹಣವೂ ಸಿಗಲಿಲ್ಲ. “ನಮ್ಮ ಸಂಬಂಧಿಕರೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಕಂಡ ವೆಬ್‌ಸೈಟ್ ಒಂದರಿಂದ ಸೀರೆ ಖರೀದಿಸಿದ್ದರು. ಹಣ ಪಾವತಿಸುವವರೆಗೂ ವೆಬ್‌ಸೈಟ್ ಮೂಲದವರು ಸಂಪರ್ಕದಲ್ಲಿದ್ದರು. ಆದರೆ ಹಣ ಪಾವತಿಸಿದ ನಂತರ ಸೀರೆಯೂ ಬರಲಿಲ್ಲ, ಹಣವೂ ಹೋಯಿತು” ಎಂದು ವಿವರ ನೀಡಿದರು ಅಶ್ವಿನಿ ಮೇಲಿನಮನಿ.
ಸಾಮಾಜಿಕ ಮಾಧ್ಯಮಗಳಿಂದ ವಸ್ತುಗಳನ್ನು ಖರೀದಿಸುವವರು ಬಹಳ ಎಚ್ಚರವಹಿಸಬೇಕು. ಬಹಳಷ್ಟು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಮೋಸದ ವ್ಯವಹಾರ ನಡೆಸುತ್ತಾರೆ. ಕೆಲವು ತಿಂಗಳುಗಳ ಹಿಂದೆ ಸೌಂದರ್ಯತಜ್ಞರೊಬ್ಬರು ಫೇಸ್‌ಬುಕ್‌ನಲ್ಲಿ ಆಭರಣಗಳನ್ನು ಖರೀದಿಸಿದ್ದರು. ಅವರು ಖರೀದಿಸಿದ ಆಭರಣವೇ ಬೇರೆ ಮತ್ತು ಬಂದಿದ್ದೇ ಬೇರೆ. ಮರಳಿ ಕಳುಹಿಸಲು ನೋಡಿದರೆ ವೆಬ್‌ತಾಣದ ವಿವರವೇ ಇರಲಿಲ್ಲ. “ಹುಡುಕಿದರೂ ವೆಬ್‌ತಾಣ ಸಿಗಲಿಲ್ಲ. ಮರುಪಾವತಿಯೂ ಸಿಗಲಿಲ್ಲ, ಅದೇ ಕಡಿಮೆ ಗುಣಮಟ್ಟದ ವಸ್ತುಗಳನ್ನು ಇಟ್ಟುಕೊಳ್ಳಬೇಕಾಯಿತು” ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಸೌಂದರ್ಯ ತಜ್ಞರು.
“ಕಾಸ್ಮೆಟಿಕ್ ವ್ಯವಹಾರದಲ್ಲಿ ಬಹಳಷ್ಟು ಮೋಸದ ವ್ಯವಹಾರ ನಡೆಯುತ್ತದೆ. “ಬಹಳಷ್ಟು ಸಲ ನಾನು ಖರೀದಿಸಿದ ಕಾಸ್ಮೆಟಿಕ್‌ಗಳ ಗುಣಮಟ್ಟ ಕಳಪೆಯಾಗಿ ಬಂದಿದ್ದಿದೆ” ಎನ್ನುತ್ತಾರೆ ಶಿವಮೊಗ್ಗದ ನಿವಾಸಿ ಅನಿತಾ. ಬೆಂಗಳೂರಿನ ನಿವಾಸಿ ಜ್ಯೋತಿ ಪ್ರಕಾರ, “ಅಮೆಜಾನ್‌ನಲ್ಲಿ ಒಂದು ಬಾರಿ ತಾನು ಖರೀದಿಸಿದ ಕಾಸ್ಮೆಟಿಕ್ಸ್‌ಗೆ ಬದಲಾಗಿ ಬೇರೆ ವಸ್ತುಗಳು ಬಂದಿದ್ದವು. ಆದರೆ ದೂರು ಸಲ್ಲಿಸಿದ ನಂತರ ಸರಿಯಾದ ವಸ್ತುಗಳು ಬಂದವು. ಮೊದಲು ಬಂದ ವಸ್ತುಗಳನ್ನು ಹಿಂಪಡೆದಿರಲಿಲ್ಲ. ಆದರೆ ಎರಡನೇ ಬಾರಿ ನನಗೆ ಬೇಕಾದ ಗುಣಮಟ್ಟದ ವಸ್ತುಗಳು ಬಂದಿದ್ದವು.”
ಕಳಪೆ ಗುಣಮಟ್ಟದ ವಸ್ತುಗಳ ಮಾರಾಟ
ಅಶ್ವಿನಿಯವರು ಹೇಳುವ ಪ್ರಕಾರ, “ನಾನು ಒಂದು ಡ್ರೆಸ್ ಬುಕ್ ಮಾಡಿದ್ದೆ. ಅಮೌಂಟ್ ಕೂಡ ಪೇ ಮಾಡಿದ್ದೆ. ನನಗೆ ಬಂದಿರುವುದು ಬ್ಲಾಕ್ ಬಟ್ಟೆ. ರಿಟರ್ನ್ ಹಾಕಿದ್ದೆ ಆದ್ರೂ ತಗೊಂಡು ಹೋಗಿಲ್ಲ. ನಂಗ ಐಟಂ ರಿಸೀವ್ ಆಗಿದೆ ಎಂದು ಮೆಸೇಜ್ ಬಂತು. ನಾನು ಯಾವುದೋ ವೆಬ್‌ಸೈಟ್ ನಿಂದ ಮಾಡಿದ್ದೆ. ಎರಡು ವರ್ಷಗಳ ಹಿಂದೆ. ನನ್ನ ರೂ 650 ವಾಪಾಸ್ ಬರಲಿಲ್ಲ, ಬಟ್ಟೇನೂ ಅವರು ತಗೊಂಡು ಹೋಗಲಿಲ್ಲ.”
ಬಹಳಷ್ಟು ಮಂದಿಗೆ ಇಂತಹ ಅನುಭವ ಆಗಿದೆ. ಶಿವಮೊಗ್ಗದ ನಿವಾಸಿಯೊಬ್ಬರು ಹೇಳುವ ಪ್ರಕಾರ, ಕಳಪೆ ಗುಣಮಟ್ಟದ ವಸ್ತುಗಳು ಆನ್‌ಲೈನ್‌ನಲ್ಲಿ ಬಹಳ ಮಾರಾಟವಾಗುತ್ತಿವೆ. “ನಾವೊಂದು ಫ್ಲಾಕ್ಸ್ ಆರ್ಡರ್ ಮಾಡಿದ್ದೆವು. ಬಣ್ಣ ಮತ್ತು ಗುಣಮಟ್ಟದಲ್ಲಿ ಕಳಪೆ ಇರುವ ವಸ್ತು ಬಂದಿತ್ತು. ಅದನ್ನು ನೋಡಿದರೆ ಬಳಸಿದ ವಸ್ತುವಿನ ರೀತಿಯಲ್ಲಿತ್ತು. ಬೇರೆಯವರು ರಿಟರ್ನ್ ಮಾಡಿದ ವಸ್ತುವನ್ನು ನಮಗೆ ಕೊಟ್ಟ ರೀತಿಯಲ್ಲಿತ್ತು. ಹೇಳಿದರೆ ದೂರು ಸಲ್ಲಿಸಿ ಎಂದು ಉತ್ತರಿಸಿದರು. ಇನ್ನು ದೂರು ಕೊಡಲು ಹೋಗುವುದೇಕೆ ಎಂದು ನಾವು ಅದನ್ನೇ ಇಟ್ಟುಕೊಂಡೆವು.”
ಕಳಪೆ ಗುಣಮಟ್ಟದ ವಸ್ತುಗಳನ್ನು ಸ್ವೀಕರಿಸಿರುವ ಸಮಸ್ಯೆ ಬಹುತೇಕ ಎಲ್ಲಾ ಸಕ್ರಿಯ ಆನ್‌ಲೈನ್ ಖರೀದಿದಾರರ ಅನುಭವವಾಗಿದೆ. ಬೆಂಗಳೂರಿನ ನಿವಾಸಿ ಚೇತನ್ ಅವರ ಪ್ರಕಾರ ಅನೇಕ ಬಾರಿ ನಕಲಿ ಉತ್ಪನ್ನ ಮತ್ತು ಎರಡನೇ ದರ್ಜೆಯ ಉತ್ಪನ್ನಗಳನ್ನು ಸ್ವೀಕರಿಸಿದ್ದಾರೆ.
“ಅಮೆರಿಕದಲ್ಲಿ ಅಮೆಜಾನ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಸ್ನೇಹಿತರೊಬ್ಬರಿಂದ ಲ್ಯಾಪ್‌ಟಾಪ್ ಖರೀದಿಸಿದ್ದೆವು. ಅವರು ಆನ್‌ಲೈನ್ ಮೂಲಕ ಲ್ಯಾಪ್‌ಟಾಪ್ ತರಿಸಿದ್ದರು. ಅಮೆರಿಕದಲ್ಲಿ ತೆರೆಯುವಾಗ ಸರಿಯಾಗೇ ಇತ್ತು. ಭಾರತಕ್ಕೆ ಬಂದು ನೋಡಿದರೆ ಲ್ಯಾಪ್‌ಟಾಪ್ ಓಪನ್ ಆಗುತ್ತಿರಲಿಲ್ಲ. ಕೇಬಲ್ ಎಲ್ಲವೂ ಸರಿ ಇದ್ದವು. ಆದರೆ ಲ್ಯಾಪ್‌ಟಾಪ್ ಓಪನ್ ಆಗಿರಲಿಲ್ಲ. ವಿಚಾರಿಸಿದರೆ ಅಮೆರಿಕದಲ್ಲಿಯೇ ದೂರು ನೀಡಿ ಮರಳಿಸಬೇಕು ಎನ್ನುವ ಉತ್ತರ ಬಂತು” ಎಂದು ವಿವರಿಸುತ್ತಾರೆ ಶಿವಮೊಗ್ಗದ ನಿವಾಸಿ ಹೇಳಿದ್ದಾರೆ.
ಎರಡನೇ ದರ್ಜೆಯ ವಸ್ತುಗಳ ಮಾರಾಟದ ಸಮಸ್ಯೆಗೆ ಸಂಪೂರ್ಣವಾಗಿ ಬ್ರಾಂಡ್‌ಗಳನ್ನು ಆರೋಪಿಸಲು ಸಾಧ್ಯವಿಲ್ಲ ಎನ್ನುತ್ತಾರೆ ತಂತ್ರಜ್ಞಾನ ತಜ್ಞರಾದ ಕುಮಾರ್. “ದೊಡ್ಡ ಬ್ರಾಂಡ್‌ಗಳಿಗೆ ಸ್ಥಳೀಯ ಪಾಲುದಾರರು ಇರುತ್ತಾರೆ. ಅವರು ಕಡಿಮೆ ದರ್ಜೆಯ ಅಥವಾ ಕಳಪೆ ವಸ್ತುಗಳನ್ನು ಕಳುಹಿಸುತ್ತಾರೆ. ಹಾಗಿದ್ದರೂ ವಸ್ತುಗಳನ್ನು ಮರಳಿ ಕಳುಹಿಸಿ ರಿಫಂಡ್ ತೆಗೆದುಕೊಳ್ಳುವುದು ಉತ್ತಮ ಅಭ್ಯಾಸ” ಎನ್ನುತ್ತಾರೆ ಕುಮಾರ್.
ಡೆಲಿವರಿ ಸಂದೇಶವಿದೆ, ವಸ್ತುಗಳು ಇಲ್ಲ
ಗ್ರಾಮೀಣ ಪ್ರದೇಶಗಳಲ್ಲಿ ಮನೆಯ ಬಳಿ ಬಂದು ತಲುಪಿಸುವ ವ್ಯವಸ್ಥೆ ಇರುವುದಿಲ್ಲ. ಹೀಗಿರುವಾಗ ಮಧ್ಯವರ್ತಿಯ ಬಳಿ ವಸ್ತುಗಳನ್ನು ಬಿಟ್ಟು ಹೋಗುವುದು ಸಹಜವಾಗಿ ನಡೆಯುವ ಪ್ರಕ್ರಿಯೆ. ಹೀಗಿರುವಾಗ ಬಹಳಷ್ಟು ಮಂದಿ ಆನ್‌ಲೈನ್ ಪಾವತಿ ಮಾಡಿರುತ್ತಾರೆ. “ನಾನು ವಾರದ ಹಿಂದೆ ಒಂದು ಕಾರ್ಪೆಟ್ ಆರ್ಡರ್ ಮಾಡಿದ್ದೆ. ಅದು ಡೆಲಿವರಿ ಆಗಿದೆ ಎಂದು ನನಗೆ ಸಂದೇಶ ಬಂದಿತ್ತು. ಆದರೆ ಇನ್ನೂ ವಸ್ತು ನನಗೆ ದೊರೆತಿಲ್ಲ. ಡೆಲಿವರಿ ಹುಡುಗರ ಜೊತೆಗೆ ಸಂಪರ್ಕದಲ್ಲಿದ್ದೇನೆ. ಪರಿಶೀಲಿಸುವುದಾಗಿ ಹೇಳಿದ್ದಾರೆ” ಎನ್ನುತ್ತಾರೆ ಕೊಡಗಿನ ನಿವಾಸಿಯಾಗಿರುವ ಸುಶೀಲ.
ಏನಿದು ಒಟಿಪಿ ವಂಚನೆ?
ಬಹಳಷ್ಟು ಸಲ ಆನ್‌ಲೈನ್ ಶಾಪಿಂಗ್ ಸಂಸ್ಥೆಗಳಿಂದ ಖರೀದಿಸುವವರು ಫೋನ್ ಮೂಲಕ ಒಟಿಪಿ ಹೇಳುತ್ತಾರೆ. ಇದು ಬಹಳ ಅಪಾಯಕಾರಿ. ಇದೀಗ ದೊಡ್ಡ ಆನ್‌ಲೈನ್ ಶಾಪಿಂಗ್ ಸಂಸ್ಥೆಗಳ ಹೆಸರಿನಲ್ಲಿ ವಂಚಕರು ಒಟಿಪಿ ಕೇಳುತ್ತಾರೆ. ಒಟಿಪಿ ಹೇಳಿದ ನಂತರ ಅವರ ಬ್ಯಾಂಕ್ ಖಾತೆಯಿಂದ ಹಣ ಕಣ್ಮರೆಯಾಗಿರುತ್ತದೆ. ಹೀಗಾಗಿ ಮನೆಗೆ ವಸ್ತು ಬಂದಾಗ ಡೆಲಿವರಿಯನ್ನು ಪರೀಕ್ಷಿಸಿ ನಂತರ ಒಟಿಪಿ ಹೇಳುವುದು ಸೂಕ್ತ.
ಕುಮಾರ್ ಹೇಳುವ ಪ್ರಕಾರ, “ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಪ್ರದೇಶಕ್ಕೆ ಸ್ಥಿರವಾದ ಡೆಲಿವರಿ ಹುಡುಗರು ಇರುತ್ತಾರೆ. ಯಾರು ಏನು ಪದೇಪದೆ ಖರೀದಿಸುತ್ತಾರೆ ಎನ್ನುವ ಮಾಹಿತಿ ಅವರ ಬಳಿ ಇರುತ್ತದೆ. ಹೀಗಾಗಿ ಮೋಸವಾಗುವ ಅವಕಾಶಗಳು ಹೆಚ್ಚಿರುತ್ತವೆ”.
ವಂಚನೆಯನ್ನು ತಪ್ಪಿಸುವುದು ಹೇಗೆ?
ಸಾಧ್ಯವಾದಷ್ಟು ಕ್ಯಾಶ್ ಆನ್ ಡೆಲಿವರಿ ಆಯ್ಕೆ ಬಳಸಿ, ಪಾರ್ಸೆಲ್ ತೆರೆದು ಪರೀಕ್ಷಿಸಿದ ನಂತರ ಹಣ ನೀಡಿ, ಸಾಧ್ಯವಾದಷ್ಟು ಓಪನ್ ಬಾಕ್ಸ್ ಡೆಲಿವರಿ ಪಡೆಯಿರಿ, ಒಟಿಪಿ ಖಚಿತಪಡಿಸಿಕೊಂಡ ನಂತರ ಹಣ ನೀಡಿ, ಸಾಮಾಜಿಕ ಮಾಧ್ಯಮಗಳಿಂದ ಖರೀದಿಸಬೇಡಿ, ನಕಲಿ ಲಿಂಕ್‌ಗಳನ್ನು ಬಳಸಿ ಆನ್‌ಲೈನ್ ಶಾಪಿಂಗ್ ಮಾಡಬೇಡಿ, ನಕಲಿ ಆನ್‌ಲೈನ್ ಆ್ಯಪ್ ಬಳಕೆ ತಪ್ಪಿಸಿ, ಆರ್ಡರ್ ನಿಮ್ಮ ಹೆಸರು ಮತ್ತು ವಿಳಾಸದಲ್ಲಿದೆಯೇ ಎಂಬುದನ್ನು ಖಚಿತಪಡಿಸಿದ ನಂತರ ಸ್ವೀಕರಿಸಿ, ಡೆಲಿವರಿ ಬಂದಾಗ ಬಾಕ್ಸ್ ಪರಿಶೀಲಿಸಿ ಪಡೆಯಿರಿ, ಬುಕ್ ಮಾಡಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಬಳಿಕವಷ್ಟೇ ವಸ್ತು ತೆಗೆದುಕೊಳ್ಳಿ, ಹೆಚ್ಚಿನ ಮಾಹಿತಿಗಾಗಿ ಗ್ರಾಹಕರ ಸೇವಾ ಪ್ರತಿನಿಧಿಗೆ ಕರೆ ಮಾಡಿ, ಖರೀದಿಸಿದ ವಸ್ತುವಿಗೆ ರಿಟರ್ನ್ ಮತ್ತು ಹಣ ಮರುಪಾವತಿಯ ಸೌಲಭ್ಯವಿದೆಯೇ ಗಮನಿಸಿ.