×
Ad

ಭಾರತದ ಅಕ್ಕಿ ಆಮದು ಮೇಲಿನ ಸುಂಕ ಹಿಂಪಡೆಯುವಂತೆ ಒತ್ತಡಕ್ಕೆ ಬಿದ್ದ ಟ್ರಂಪ್; ಏನಿದು ಬಾಸ್ಮತಿಯ ಕತೆ?

Update: 2025-12-12 18:22 IST

ಸಾಂದರ್ಭಿಕ ಚಿತ್ರ | Photo Credit : freepik

 


ಅಮೆರಿಕ ಅಕ್ಕಿಯ ಆಮದನ್ನು ಕಡಿಮೆ ಮಾಡಲು ಟೆಕ್ಸ್‌ಮತಿ ಮತ್ತು ಜಸ್ಮತಿ ಎನ್ನುವ ಎರಡು ಹೈಬ್ರಿಡ್ ಅಕ್ಕಿಯ ತಳಿಗಳನ್ನು ಸೃಷ್ಟಿಸಿತ್ತು. ಆದರೆ ಅವು ಭಾರತದ ಬಾಸ್ಮತಿಯ ಸಮೀಪಕ್ಕೂ ಬರಲಿಲ್ಲ!

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಅಕ್ಕಿಯ ಮೇಲೆ ಹೇರಲಾಗಿದ್ದ ಸುಂಕವನ್ನು ಹಿಂತೆಗೆದುಕೊಳ್ಳಬೇಕಾಗಿ ಬಂದಿದೆ. ಒಂದು ಕಾಲದಲ್ಲಿ ಅಮೆರಿಕದಿಂದ ಬರುವ ಗೋಧಿಯ ಮೇಲೆ ಅವಲಂಬಿಸಿದ್ದ ಭಾರತ, ಇದೀಗ ಅಮೆರಿಕಕ್ಕೆ ಅತಿದೊಡ್ಡ ಅಕ್ಕಿ ಸರಬರಾಜು ಮಾಡುವ ದೇಶವಾಗಿದೆ. ಅಮೆರಿಕ ಬಾಸ್ಮತಿಯ ಪ್ರತಿರೂಪವನ್ನು ಸೃಷ್ಟಿಸುವುದಾಗಿ ಹೇಳಿತ್ತು. ಅದಕ್ಕೆ ಪ್ರಯತ್ನವೂ ಪಟ್ಟಿತ್ತು. ಆದರೆ ಟೆಕ್ಸಮತಿ ಎನ್ನುವ ತಳಿ ಬಾಸ್ಮತಿಯ ಪರಿಮಳದ ಸಮೀಪಕ್ಕೂ ಬರಲಿಲ್ಲ. ಭಾರತದ ಹಿಮಾಲಯದ ತಪ್ಪಲಿನಲ್ಲಿ ಬೆಳೆಯಲಾಗುವ ಬಾಸ್ಮತಿಯ ಉದ್ದ ಮತ್ತು ನಯವಾದ ವಿನ್ಯಾಸಕ್ಕೆ ಸಮವಾಗಿ ಬರಲು ಹೈಬ್ರಿಡ್ ತಳಿಗಳು ವಿಫಲವಾದವು.

ಇದೀಗ ಟೆಕ್ಸ್‌ಮತಿ ಮತ್ತು ಜಸ್ಮತಿಗಳೆನ್ನುವ ಅಮೆರಿಕದ ಹೈಬ್ರಿಡ್ ತಳಿಗಳನ್ನು ನೆನಪಿಸಿಕೊಳ್ಳಲು ಕಾರಣವಿದೆ. ಇತ್ತೀಚೆಗೆ ಭಾರತದ ಆಮದಿನ ಮೇಲೆ ಶೇ 50ರಷ್ಟು ಸುಂಕ ವಿಧಿಸಿದ್ದ ಡೊನಾಲ್ಡ್ ಟ್ರಂಪ್ ಸರ್ಕಾರ, ಈ ವಾರ ಭಾರತದಿಂದಾಗುವ ಅಕ್ಕಿಯ ರಫ್ತಿನ ಮೇಲೆ ಹೇರಿದ್ದ ಹೆಚ್ಚುವರಿ ಸುಂಕವನ್ನು ತೆಗೆದು ಹಾಕಿದೆ. ಮಾತ್ರವಲ್ಲದೆ, ಅಮೆರಿಕದಲ್ಲಿ ಅಕ್ಕಿ ಬೆಳೆಯುವವರು ಸೇರಿದಂತೆ ರೈತರಿಗೆ 12 ಶತಕೋಟಿ ಡಾಲರ್‌ಗಳಷ್ಟು ಪ್ಯಾಕೇಜ್ ಘೋಷಿಸಿದೆ.

ಭಾರತದ ಅಕ್ಕಿಗೆ ಅಮರಿಕ ಸ್ಪರ್ಧೆ

1980ರಲ್ಲಿ ಟೆಕ್ಸಾಸ್‌ನಲ್ಲಿ ಟೆಕ್ಸ್‌ಮತಿ ಎನ್ನುವ ಹೈಬ್ರಿಡ್ ತಳಿಯನ್ನು ಸೃಷ್ಟಿಸಲಾಗಿತ್ತು. ಪರಿಮಳ ಬರುವ ಅಕ್ಕಿಯ ಆಮದನ್ನು ತಪ್ಪಿಸಲೆಂದೇ ಟೆಕ್ಸ್‌ಮತಿಯನ್ನು ಸೃಷ್ಟಿಸಲಾಗಿತ್ತು. ಆದರೆ ಅಮೆರಿಕದ ಜನರ ನಡುವೆ ಬಾಸ್ಮತಿಗೆ ಇದ್ದ ಪ್ರೀತಿಯನ್ನು ತೆಗೆದು ಹಾಕಲು ಟೆಕ್ಸ್‌ಮತಿ ವಿಫಲವಾಯಿತು.

1960ರ ದಶಕದಲ್ಲಿ ಭಾರತ ಅಮೆರಿಕದಿಂದ ಬರುತ್ತಿದ್ದ ಎರಡನೇ ದರ್ಜೆಯ ಗೋಧಿಯಿಂದ ತನ್ನ ಜನರಿಗೆ ಆಹಾರ ಒದಗಿಸಿತ್ತು. ಆದರೆ ಭಾರತದ ‘ಹಸಿರು ಕ್ರಾಂತಿ’ ಮತ್ತು ಅಮೆರಿಕನ್ನರ ಆಹಾರದ ಬದಲಾವಣೆಯಿಂದ ಎಲ್ಲಾ ತಿರುವು ಮರುವು ಆಯಿತು. ಹೀಗಾಗಿ ಅಮೆರಿಕ ಭಾರತದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳುವ ಅತಿದೊಡ್ಡ ರಾಷ್ಟ್ರವಾಯಿತು.

ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಅದು ಭಾರತದ ಬಾಸ್ಮತಿಯಂತಹದೇ ತಳಿಯಾಗಿರುವ ಟೆಕ್ಸ್‌ಮತಿ ಮತ್ತು ಜಸ್ಮತಿಯನ್ನು ಸೃಷ್ಟಿಸಲು ಪ್ರಯತ್ನಿಸಿರುವುದು. ಆದರೆ ಈ ಸ್ಪರ್ಧೆಯಲ್ಲಿ ಭಾರತದ ರೈತರು ಗೆದ್ದರು.

ಟೆಕ್ಸಾಸ್ ಮೂಲದ ಕಂಪನಿಯಾದ ರೈಸ್‌ಟೆಕ್ ಬಾಸ್ಮತಿಯಂತಹ ಪರಿಮಳವಿರುವ ಉದ್ದನೆಯ ತಳಿಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿತು. ಆದರೆ ಅಮೆರಿಕದ ಪರಿಸರದಲ್ಲಿ ಸಮಾನ ಗುಣಮಟ್ಟದ ಅಕ್ಕಿಯನ್ನು ಬೆಳೆಯಲು ಸಾಧ್ಯವಾಗಲಿಲ್ಲ. ನಂತರ ಅದು ಜಸ್ಮತಿಯನ್ನೂ ಪರಿಚಯಿಸಿದೆ. ಥಾಯ್‌ ಜಾಸ್ಮೀನ್ ಅಕ್ಕಿಗೆ ಭಾರತದ ಆಕಾರ ಮತ್ತು ಪರಿಮಳವನ್ನು ನೀಡುವ ಪ್ರಯತ್ನವಾಗಿತ್ತದು.

ರೈಸ್‌ಸೆಲೆಕ್ಟ್‌ನಂತ ಬ್ರಾಂಡ್‌ಗಳು ಇದನ್ನು ಮಾರುಕಟ್ಟೆಗೆ ತಂದಿದ್ದವು. ಟೆಕ್ಸ್‌ಮತಿಗೆ ಪಾಪ್‌ಕಾರ್ನ್‌ನಂತಹ ಪರಿಮಳವಿದೆ ಮತ್ತು ಜಸ್ಮತಿ ಸಲಾಡ್‌ಗಳಿಗೆ ಮತ್ತು ಹುರಿದು ಬಳಸಲು ಸೂಕ್ತ ಎಂದು ಅಮೆರಿಕದ ಜನರು ಸ್ವೀಕರಿಸಲು ಹಿಂದೇಟು ಹಾಕಿದರು.

ಇದೀಗ ದಶಕಗಳೇ ಕಳೆದರೂ ಹೈಬ್ರಿಡ್ ತಳಿಗಳು ಅಮೆರಿಕದಲ್ಲಿ ಬಳಕೆಯಲ್ಲಿವೆ. ಆದರೆ ಮೂಲ ಬಾಸ್ಮತಿಯ ಬೇಡಿಕೆಗೆ ಕುಂದುಂಟು ಮಾಡಲು ಸಾಧ್ಯವಾಗಲಿಲ್ಲ. ಗುಣಮಟ್ಟದಲ್ಲಿ ಪಂಜಾಬ್ ಮತ್ತು ಹರಿಯಾಣದಲ್ಲಿ ಬೆಳೆಯುವ ಬಾಸ್ಮತಿಗೆ ಎಂದೂ ಹೈಬ್ರಿಡ್ ತಳಿಗಳು ಅಡ್ಡಿಯಾಗಲಿಲ್ಲ.

ಭಾರತದಿಂದ ಅಮೆರಿಕಕ್ಕೆ ಬಾಸ್ಮತಿ

ಭಾರತದ ಬಾಸ್ಮತಿ ಅಮೆರಿಕದ ಬಾಸ್ಮತಿ ಆಮದಿನ ಶೇ 88ರಷ್ಟು ಪಾಲನ್ನು ಹೊಂದಿದೆ. ಪಾಕಿಸ್ತಾನವೂ ಬಾಸ್ಮತಿ ಬೆಳೆಯುತ್ತಿದೆಯಾದರೂ, ಅದರ ಮಾರುಕಟ್ಟೆ ಪಾಲು ಶೇ 9ರಷ್ಟು ಮಾತ್ರವಿದೆ.

ಟ್ರಂಪ್ ಈ ಮೊದಲು, “ಭಾರತ ಅಮೆರಿಕದ ಮೇಲೆ ತನ್ನ ಅಕ್ಕಿಯನ್ನು ಹೇರುತ್ತಿದೆ ಮತ್ತು ಹೊಸ ಸುಂಕ ಅದನ್ನು ನಿಯಂತ್ರಿಸಲಿದೆ” ಎಂದು ಶ್ವೇತಭವನದ ಸಭೆಯಲ್ಲಿ ಹೇಳಿದ್ದರು. ಆದರೆ ಈ ವಾರ ಅದೇ ಶ್ವೇತಭವನದ ಸಭೆಯಲ್ಲಿ ಈ ಬಗ್ಗೆ ಮತ್ತೆ ಚರ್ಚೆಯಾಗಿದೆ. ಸುಂಕವನ್ನು ಹಿಂತೆಗೆದುಕೊಳ್ಳಬೇಕಾಗಿ ಬಂದಿದೆ.

ಭಾರತದ ಮಟ್ಟಿಗೆ ಅಕ್ಕಿ ಆಮದಿನ ಮೇಲೆ ಹೇರುವ ಸುಂಕ ಹೆಚ್ಚು ಪರಿಣಾಮ ಬೀರದು. ಏಕೆಂದರೆ ಭಾರತದ ಒಟ್ಟು ಅಕ್ಕಿ ರಫ್ತಿನ ಶೇ 3ರಷ್ಟು ಮಾತ್ರ ಅಮೆರಿಕಕ್ಕೆ ಹೋಗುತ್ತಿದೆ. ಬಹಳಷ್ಟು ಪ್ರಮಾಣದ ಅಕ್ಕಿ ಗಲ್ಫ್ ದೇಶಗಳು ಮತ್ತು ಆಫ್ರಿಕಾಗೆ ಹೋಗುತ್ತಿದೆ. ಸುಂಕ ಹೆಚ್ಚು ಮಾಡಿದಲ್ಲಿ ಅಮೆರಿಕದ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆಯೇ ವಿನಾ ಭಾರತದ ರಫ್ತಿಗೆ ಸಮಸ್ಯೆ ಬೀಳದು.

1960ರಲ್ಲಿ ಅಮೆರಿಕದ ಸಹಾಯದ ಮೇಲೆ ಅವಲಂಬಿಸಿದ್ದ ಭಾರತ ಇದೀಗ 2024-25ರಲ್ಲಿ 22.5 ದಶಲಕ್ಷ ಮೆಟ್ರಿಕ್ ಟನ್‌ಗಳಷ್ಟು ಅಕ್ಕಿಯನ್ನು ಅಮೆರಿಕಕ್ಕೆ ರಫ್ತು ಮಾಡಿದೆ. ಅದರಲ್ಲಿ ಶೇ 86ರಷ್ಟು ಬಾಸ್ಮತಿಯೇ ಸೇರಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News