ಅಮೆರಿಕದ ಕಂಪೆನಿಗಳಿಂದ ಭಾರತೀಯರನ್ನು ಹೊರಹಾಕಲು ಯೋಜನೆ; ಪ್ರಸಿದ್ಧ ಸಮೀಕ್ಷಾ ಸಂಸ್ಥೆ ಘೋಷಣೆ
ಸಾಂದರ್ಭಿಕ ಚಿತ್ರ | Photo Credit : freepik
ಅಮೆರಿಕದ ಪ್ರಮುಖ ಸಮೀಕ್ಷಾ ಕಂಪೆನಿಗಳಲ್ಲಿ ಒಂದಾಗಿರುವ ‘ರಾಸ್‌ಮುಸೆನ್ ರಿಪೋರ್ಟ್ಸ್’ ಎಚ್-1ಬಿ ವೀಸಾಗಳ ಬಗ್ಗೆ ಹೊಸ ರೀತಿಯ ದಾಳಿ ನಡೆಸಿದೆ. ಭಾರತೀಯರನ್ನು ಅಮೆರಿಕದ ಕಂಪೆನಿಗಳಿಂದ ಹೊರಹಾಕಲು ಕನ್ಸಲ್ಟೆನ್ಸಿ ಕಂಪೆನಿ ತೆರೆಯುವುದಾಗಿ ಹೇಳಿದೆ.
ಅಮೆರಿಕದಲ್ಲಿ ಸಾರ್ವಜನಿಕ ಅಭಿಪ್ರಾಯಗಳನ್ನು ರೂಪಿಸುವ ಪ್ರಮುಖ ಸಮೀಕ್ಷಾ ಸಂಸ್ಥೆಯಾಗಿರುವ ‘ರಾಸ್‌ಮುಸೆನ್ ರಿಪೋರ್ಟ್ಸ್’ನ ಸಿಇಒ ಮಾರ್ಕ್ ಮಿಷೆಲ್ ಎಚ್-1ಬಿ ವೀಸಾ ಕಾರ್ಯಕ್ರಮವನ್ನು ಟೀಕಿಸಿದ್ದು, ಅಮೆರಿಕದ ಕಂಪೆನಿಗಳಿಂದ ಭಾರತೀಯರನ್ನು ಹೊರಗೆ ಹಾಕುವ ಅಭಿಯಾನಕ್ಕಾಗಿ ಕನ್ಸಲ್ಟನ್ಸಿಯನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ.
ಎಚ್-1ಬಿ ವೀಸಾಗಳ ಮೂಲಕ ಅಮೆರಿಕದ ಕಂಪೆನಿಗಳು ವಿದೇಶಿ ಪ್ರತಿಭೆಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತವೆ. ಎಚ್-1ಬಿ ವ್ಯವಸ್ಥೆಯಲ್ಲಿ ಉದ್ಯೋಗ ದೊರೆತವರಲ್ಲಿ ಶೇ 70ರಷ್ಟು ಭಾರತೀಯರಾಗಿದ್ದಾರೆ. ವಾರ್ಷಿಕವಾಗಿ 85,000 ಭಾರತೀಯರಿಗೆ ಎಚ್-1ಬಿ ವೀಸಾ ನೀಡಲಾಗುತ್ತಿದೆ.
“ನನ್ನ ಜೀವನದಲ್ಲಿ ಇಂತಹ ಒಂದು ಕೆಲಸ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಹಾಗಿದ್ದರೂ ಇದೀಗ ಅಮೆರಿಕದ ಕಂಪೆನಿಗಳಿಂದ ಭಾರತೀಯರನ್ನು ಹೊರಗಿಡಲೆಂದೇ ಕನ್ಸಲ್ಟೆನ್ಸಿ ಆರಂಭಿಸಲಿದ್ದೇನೆ. ನಾನು ಸಾಯುವವರೆಗೂ ಇದಕ್ಕಾಗಿ ಹೆಣಗಾಡುತ್ತೇನೆ” ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಅವರು ಡಿಸೆಂಬರ್ 10ರಂದು ಬರೆದಿದ್ದಾರೆ.
“ಆ್ಯಪಲ್ ಕಂಪೆನಿಯ ಹಿರಿಯ ಡೆವಲಪರ್‌ಗಳೇ ನಾವು ಹೊರಗೆ ಕಳುಹಿಸುವ ಪ್ರತಿ ಎಚ್-1ಬಿಯು ಆರ್ಥಿಕವಾಗಿ 10 ಅಕ್ರಮ ವಲಸಿಗರನ್ನು ಹೊರಕಳುಹಿಸಿರುವುದಕ್ಕೆ ಸಮನಾಗಿರುತ್ತದೆ. ನಿನ್ನೆಯೇ ಇದನ್ನು ಏಕೆ ಮಾಡಲಿಲ್ಲ ಎಂದು ನನಗೆ ತಿಳಿದಿಲ್ಲ. ಇವರಲ್ಲಿ ಬಹಳಷ್ಟು ಮಂದಿ ಆರಂಭಿಕ ಹಂತದವರು. ಆದರೆ ಬಹಳಷ್ಟು ಮಂದಿ ಟನ್‌ಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಿಷೆಲ್ ಅವರ ಬೆದರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಕಾರಣವಿದೆ. ಅವರು ‘ರಾಸ್‌ಮುಸೆನ್ ರಿಪೋರ್ಟ್ಸ್’ನ ಸಿಇಒ. ಆ ಕಂಪೆನಿ ಅಮೆರಿಕದ ಬೃಹತ್ ಸಮೀಕ್ಷಾ ಕಂಪೆನಿಗಳಲ್ಲಿ ಒಂದಾಗಿದೆ. 2003ರಲ್ಲಿ ಸ್ಕಾಟ್ ರಾಸ್‌ಮುಸೆನ್ ಅವರು ಸ್ಥಾಪಿಸಿರುವ ಈ ಸಂಸ್ಥೆ ಅಮೆರಿಕದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಮೂಡಿಸುವ ಅತಿದೊಡ್ಡ ಸಂಸ್ಥೆಯಾಗಿದೆ. ಇದು ನಿತ್ಯವೂ ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ, ಅರ್ಥವ್ಯವಸ್ಥೆ ಮತ್ತು ಗ್ರಾಹಕ ಸಂವೇದನೆಗಳ ಕುರಿತು ಸಮೀಕ್ಷೆ ನಡೆಸುತ್ತದೆ.