ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಗೋವಾಕ್ಕೆ ಆಪ್ ಸಿಎಂ ಅಭ್ಯರ್ಥಿ ?

Update: 2016-05-24 07:07 GMT

ಪಣಜಿ, ಮೇ 24: ಗೋವಾ ಅಸೆಂಬ್ಲಿ ಚುನಾವಣೆಗೆ ಇನ್ನೊಂದು ವರ್ಷ ಬಾಕಿಯಿರುವಂತೆಯೇ ಆಮ್ ಆದ್ಮಿ ಪಾರ್ಟಿ ಬಹಳ ದೊಡ್ಡ ಸಾಧನೆಯನ್ನು ಮಾಡಿದೆಯೆಂಬಂತಿರುವ ಬೆಳವಣಿಗೆಯೊಂದು ನಡೆದಿದೆ.

ಪಕ್ಷವು ಗೋವಾದಲ್ಲಿ ತನ್ನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಖ್ಯಾತ ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರನ್ನು ಗುರುತಿಸಿದೆಯೆಂದು ಮೂಲಗಳಿಂದ ತಿಳಿದು ಬಂದಿದೆಯೆಂದು ಕ್ಯಾಚ್ ನ್ಯೂಸ್ ವರದಿ ತಿಳಿಸಿದೆ.

ಪ್ರಸಕ್ತ ಜನಪ್ರಿಯ ಟಿವಿ ಆ್ಯಂಕರ್ ಹಾಗೂ ಇಂಡಿಯಾ ಟುಡೆ ಸಮೂಹದ ಕನ್ಸಲ್ಟಿಂಗ್ ಸಂಪಾದಕರೂ ಆಗಿರುವ ಸರ್ದೇಸಾಯಿ ಮೇ 22ರಂದು ಎಎಪಿ ಪಣಜಿಯಲ್ಲಿ ಆಯೋಜಿಸಿದ್ದ ರ್ಯಾಲಿಯೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ರ್ಯಾಲಿ ಸಂದರ್ಭವೇ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷ ಗೋವಾದ ಎಲ್ಲಾ 40 ಸ್ಥಾನಗಳಿಗೂ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಈ ಸಂದರ್ಭ ಕೇಜ್ರಿವಾಲ್ ಸರ್ದೇಸಾಯಿ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲದೇ ಇದ್ದರೂ ಆ ರ್ಯಾಲಿಯಲ್ಲಿ ಕೇಜ್ರಿವಾಲ್ ಅವರ ಉಪಸ್ಥಿತಿಯೇ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದ್ದವು. ಈ ಊಹಾಪೋಹಗಳು ಆಧಾರರಹಿತವೆಂದೇನೂ ಹೇಳುವಂತಿರಲಿಲ್ಲ.

ಎಎಪಿ ಮೂಲಗಳ ಪ್ರಕಾರ ಸರ್ದೇಸಾಯಿಯವರೊಂದಿಗೆ ಮಾತುಕತೆಗಳು ನಡೆಯುತ್ತಿದ್ದರೂ ಅಂತಿಮ ನಿರ್ಧಾರ ಇನ್ನಷ್ಟೇ ಹೊರಬೀಳಬೇಕಿದೆ. ಆದರೆ ಈ ವದಂತಿಗಳನ್ನು ನಿರಾಕರಿಸಿರುವ ಸರ್ದೇಸಾಯಿ  ದಿ ನವಹಿಂದ್ ಟೈಮ್ಸ್ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ‘‘ನಾನು ಮುಖ್ಯಮಂತ್ರಿಯಾಗಬೇಕೆಂದು ಗೋವಾದ ಜನತೆ ಹೇಳಿದರೆ ನಾನು ತಯಾರಿದ್ದೇನೆ’’ಎಂದು ಹೇಳಿದ್ದಾರೆ.

ಅತ್ತ ಸರ್ದೇಸಾಯಿ ಸರಣಿ ಟ್ವೀಟ್ ಗಳನ್ನು ಮಾಡಿ ಗೋವಾ ರಾಜ್ಯ ಎದುರಿಸುತ್ತಿರುವ ಹಲವು ಸಮಸ್ಯೆಗಳತ್ತ ಬೆಳಕು ಚೆಲ್ಲಿರುವುದು ಅವರು ಎಎಪಿ ಸೇರುತ್ತಾರೆನ್ನುವ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿವೆ. ಈ ವಿಚಾರದಲ್ಲಿಹಲವಾರು ಎಎಪಿ ಕಾರ್ಯಕರ್ತರೂ ಸಾಮಾಜಿಕ ತಾಣಗಳಲ್ಲಿ ಚರ್ಚೆ ನಡೆಸುತ್ತಿದ್ದಾರೆ. ರಾಜಕೀಯ ವಲಯದಲ್ಲಿ ಈ ಸುದ್ದಿ ಸಾಕಷ್ಟು ಸಂಚಲನ ಮೂಡಿಸಿದೆಯೆಂಬುದನ್ನು ಅಲ್ಲಗಳೆಯಲಾಗುವುದಿಲ್ಲ.

ಗೋವಾ ನಂಟು :

ಸರ್ದೇಸಾಯಿ ಗುಜರಾತಿನಲ್ಲಿ ಹುಟ್ಟಿ, ಮಹಾರಾಷ್ಟ್ರದಲ್ಲಿ ಬೆಳೆದು, ದೆಹಲಿಯಲ್ಲಿ ಉದ್ಯೋಗದಲ್ಲಿದ್ದರೂ ಅವರು ತಮ್ಮನ್ನು ಯಾವತ್ತೂ ಅರ್ಧ ಗೋವಾದವನೆಂದೇ ಗುರುತಿಸಿಕೊಳ್ಳುತ್ತಿದ್ದಾರೆ. ಅವರ ತಂದೆ ಮಾಜಿ ಕ್ರಿಕೆಟಿಗ ದಿ. ದಿಲೀಪ್ ಸರ್ದೇಸಾಯಿ ಗೋವಾದಲ್ಲಿ ಹುಟ್ಟಿದವರು.

ಪಣಜಿಯಲ್ಲಿ ಎಎಪಿ ರ್ಯಾಲಿ ನಡೆದ ದಿನವೇ ಲೋಕಮತ್ ದೈನಿಕ ಅವರಿಗೆ ‘ಗೋವನ್ ಆಫ್ ದಿ ಇಯರ್’ ಬಿರುದನ್ನಿತ್ತು ಗೌರವಿಸಿದೆ. ಸರ್ದೇಸಾಯಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದ ಬಳಿಕ ಎನ್‌ಡಿಟಿವಿಯೊಂದಿಗೆ ಮಾತನಾಡಿದ ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪಾರ್ಸೇಕರ್ ‘‘ಅವರಿಗೆ (ಸರ್ದೇಸಾಯಿ) ಅವಕಾಶವೊಂದನ್ನು ನೀಡಿದಲ್ಲಿ ಅವರು ಗೋವಾದಿಂದ ಸ್ಪಧಿಸಲು ಉತ್ಸುಕರಾಗಿದ್ದಾರೆಂದು ನನಗೆ ಅನಿಸಿದೆ’’ಎಂದಿದ್ದರು. ಗೋವಾದ ಪ್ರಸಕ್ತ ಅಸೆಂಬ್ಲಿಯ ಅವಧಿ ಮಾರ್ಚ್ 18, 2017ರಂದು ಮುಕ್ತಾಯವಾಗಲಿದ್ದು ರಾಜ್ಯದಲ್ಲಿ ಮುಂದಿನ ಫೆಬ್ರವರಿ-ಮಾರ್ಚ್‌ನಲ್ಲಿ ಚುನಾವಣೆ ನಡೆಯಬಹುದು. ರಾಜ್ಯದಲ್ಲಿ ಭ್ರಷ್ಟಾಚಾರ ವಿರೋಧಿ ಅಲೆ ಹೆಚ್ಚಿರುವ ಕಾರಣ ಎಎಪಿ ತನಗೆ ಇಲ್ಲಿ ಉತ್ತಮ ಅವಕಾಶಗಳಿವೆಯೆಂದು ಅಂದುಕೊಂಡಿದೆ.

ಪಕ್ಷದಲ್ಲಿ ಈಗಾಗಲೇ ಹಲವು ಮಾಜಿ ಪತ್ರಕರ್ತರು ನಾಯಕರಾಗಿದ್ದು ಅವರಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಪಕ್ಷದ ವಕ್ತಾರ ಆಶುತೋಷ್ ಹಾಗೂ ದೆಹಲಿ ಡೈಲಾಗ್ ಕಮಿಷನ್ ಮುಖ್ಯಸ್ಥ ಆಶಿಷ್ ಖೇತಾನ್ ಸೇರಿದ್ದಾರೆ. ಅವರಲ್ಲಿ ಆಶುತೋಷ್ ಹಾಗೂ ಸರ್ದೇಸಾಯಿ ಐಬಿಎನ್ 18 ನೆಟ್ ವರ್ಕ್‌ನಲ್ಲಿ ಸಹೋದ್ಯೋಗಿಗಳಾಗಿದ್ದರು.

ಸರ್ದೇಸಾಯಿ ಆಗ ಅದರ ಸ್ಥಾಪಕ ಸಂಪಾದಕರಾಗಿದ್ದರು. ಐಬಿಎನ್ ನೆಟ್ ವರ್ಕ್ ಸಂಸ್ಥೆಯನ್ನು ರಿಲಯನ್ಸ್ ಇಂಡಸ್ಟ್ರೀಸ್ ವಹಿಸಿಕೊಂಡ ನಂತರ ಸರ್ದೇಸಾಯಿ ಹಾಗೂ ಅವರ ಪತ್ನಿ ಸಾಗರಿಕಾ ಘೋಷ್‌ ಜೂನ್ 2014ರಲ್ಲಿ ಸಂಸ್ಥೆಯನ್ನು ತೊರೆದಿದ್ದರು. ‘‘ಸಂಪಾದಕೀಯ ಸ್ವಾತಂತ್ರ್ಯ ಹಾಗೂ ಬದ್ಧತೆ ನನ್ನ 26 ವರ್ಷಗಳ ಪತ್ರಿಕೋದ್ಯಮ ವೃತ್ತಿಯ ಅವಿಭಾಜ್ಯ ಭಾಗವಾಗಿತ್ತು. ಪ್ರಾಯಶಃ ಅದನ್ನು ಬದಲಾಯಿಸಲು ಈ ವಯಸ್ಸಿನಲ್ಲಿ ನನಗೆ ಸಾಧ್ಯವಿಲ್ಲ,’’ ಎಂದು ಐಬಿಎನ್ ಸಹೋದ್ಯೋಗಿಗಳಿಗೆ ತಮ್ಮ ವಿದಾಯ ಪತ್ರದಲ್ಲಿ ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News