ಬ್ರೆಡ್, ಬರ್ಗರ್, ಪಿಝ್ಝಾಗಳಲ್ಲಿ ಕ್ಯಾನ್ಸರ್ ಕಾರಕ ಅಂಶ

Update: 2016-05-24 08:17 GMT

ಹೊಸದಿಲ್ಲಿ, ಮೇ 24 : ಭಾರತದಲ್ಲಿ ಮಾರಾಟವಾಗುವ ಬ್ರೆಡ್ ಹಲವಾರು ವಿಷಕಾರಕ ರಾಸಾಯನಿಕಗಳಿಂದ ಕೂಡಿದ್ದು ಥೈರಾಯ್ಡ್ ಸಮಸ್ಯೆ ಮತ್ತು ಕ್ಯಾನ್ಸರ್ ಉಂಟು ಮಾಡಬಹುದು ಎಂದು ಸೆಂಟರ್ ಫಾರ್ ಸಾಯನ್ಸ್ ಎಂಡ್ ಎನ್ವಿರಾನ್ಮೆಂಟ್ ಹಲವಾರು ಪರೀಕ್ಷೆಗಳ ಮೂಲಕ ಪತ್ತೆ ಹಚ್ಚಿದ್ದು ಕೇಂದ್ರ ಆರೋಗ್ಯ ಸಚಿವಾಲಯ ಈ ನಿಟ್ಟಿನಲ್ಲಿ ತನಿಖೆಗೆ ಆದೇಶಿಸಿದೆ.

ಐದು ಜನಪ್ರಿಯ ಬಹುರಾಷ್ಟ್ರೀಯ ಸಂಸ್ಥೆಗಳಾದ ಕೆಎಫ್‌ಸಿ, ಪಿಝ್ಹೆ ಹಟ್, ಡೊಮಿನೋಸ್, ಸಬ್ ವೇ, ಮೆಕ್ ಡೊನಾಲ್ಡ್ಸ್ ಹಾಗೂ ಸ್ಲೈಸ್ ಆಫ್ ಇಟೆಲಿ ಇಲ್ಲಿನ ಉತ್ಪನ್ನಗಳಲ್ಲಿಯೂ ಅತ್ಯಧಿಕ ರಾಸಾಯನಿಕ ಅಂಶಗಳಿವೆಯೆಂದು ಸಿಎಸ್ಸಿ ವರದಿ ತಿಳಿಸಿದೆ.

ಪ್ರತಿ ದಿನ ಎರಡು ಸ್ಲೈಸ್ ಬ್ರೆಡ್ ತಿಂದರಷ್ಟೇ ಥೈರಾಯ್ಡ್ ಮತ್ತು ಕ್ಯಾನ್ಸರ್ ಅಪಾಯ ಸೃಷ್ಟಿಸಲು ಸಾಕು,’’ಎನ್ನುತ್ತಾರೆ ಸಿಎಸ್ಸಿ ಉಪ ನಿರ್ದೇಶಕ ಚಂದ್ರ ಭೂಷಣ್.
ದೆಹಲಿಯ ಹಲವಾರು ಅಂಗಡಿಗಳಿಂದ 38 ಸ್ಯಾಂಪಲ್ ಗಳನ್ನು ಪರೀಕ್ಷಿಸಿ ಅವುಗಳಲ್ಲಿರುವ ಪೊಟ್ಯಾಶಿಯಂ ಬ್ರೊಮೇಟ್ ಹಾಗೂ ಪೊಟ್ಯಾಶಿಯಂ ಐಯೊಡೇಟ್ ಅಂಶಗಳಿಗಾಗಿ ಪರೀಕ್ಷೆಗೊಡ್ಡಲಾಯಿತು, ‘‘84 ಶೇ. ಕ್ಕಿಂತಲೂ ಅಧಿಕ ಉತ್ಪನ್ನಗಳಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾದವು,’’ಎಂದು ಭೂಷಣ್ ಹೇಳಿದ್ದಾರೆ. ವೈಟ್ ಬ್ರೆಡ್ ನಲ್ಲಿ ಅತ್ಯಧಿಕ ರಾಸಾಯನಿಕ ಅಂಶಗಳು ಪತ್ತೆಯಾದರೆ ಬಹುಧಾನ್ಯ ಬ್ರಡ್ ನಲ್ಲಿ ಕಡಿಮೆ ರಾಸಾಯನಿಕ ಅಂಶಗಳು ಪತ್ತೆಯಾದವು.

ಬೇಕ್ ಮಾಡುವ ಮೊದಲು ಹಿಟ್ಟಿಗೆ ಪೊಟ್ಯಾಶಿಯಮ್ ಬ್ರೊಮೇಟ್ ಹಾಗೂ ಪೊಟ್ಯಾಶಿಯಂ ಐಯೊಡೇಟ್ ಹಿಂದೆಯೇ ಉಪಯೋಗಿಸಲಾಗುತ್ತಿದ್ದರೂ, ವಿಶ್ವ ಸಂಸ್ಥೆಯ ಎಚ್ಚರಿಕೆಯ ನಂತರ ಚೀನಾ, ಶ್ರೀಲಂಕಾ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳು ಅವನ್ನು ನಿಷೇಧಿಸಿದ್ದವು. ಆದರೆ ಭಾರತದಲ್ಲಿ ಮಾತ್ರ ಈ ಉತ್ಪನ್ನಗಳು ನಿಷೇಧಗೊಂಡಿರಲಿಲ್ಲ.

ಸಿಎಸ್ಸಿ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡ ‘‘ಈ ಬಗ್ಗೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಹೇಳಲಾಗಿದೆ. ಗಾಬರಿ ಪಡುವ ಅಗತ್ಯವಿಲ್ಲ. ತನಿಖಾ ವರದಿ ಶೀಘ್ರದಲ್ಲಿಯೇ ಹೊರಬರಲಿದೆ,’’ಎಂದರು.

ಅತ್ತ ಆಲ್ ಇಂಡಿಯಾ ಬ್ರೆಡ್ ಮ್ಯಾನುಫೆಕ್ಚರರ್ಸ್‌ ಎಸೋಸಿಯೇಶನ್ ತಾನು ಸಿಎಸ್ಸಿ ವರದಿಯನ್ನು ಇನ್ನಷ್ಟೇ ನೋಡಬೇಕಿದೆ ಎದು ಹೇಳಿದೆ. ‘‘ಭಾರತದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರವು ಪೊಟ್ಯಾಶಿಯಂ ಬ್ರೊಮೇಟ್ ಅಥವಾ ಪೊಟ್ಯಾಶಿಯಂ ಐಯೊಡೇಟನ್ನು ಬ್ರೆಡ್ ನಲ್ಲಿ ಗರಿಷ್ಟ50 ಪಿಪಿಎಂ ಹಾಗೂ ಬೇಕರಿ ಉತ್ಪನ್ನಗಳಿಗೆ ಗರಿಷ್ಠ 20 ಪಿಪಿಎಂ ಉಪಯೋಗಿಸಲು ಅನುಮತಿಸುತ್ತದೆ,’’ಎಂದು ಅಸೋಸಿಯೇಶನ್ ಹೇಳಿದೆ.

ಸ್ಯಾಂಡ್‌ವಿಚ್ ಬ್ರೆಡ್, ಪಾವ್, ಬನ್ ಹಾಗೂ ವೈಟ್ ಬ್ರೆಡ್ ನಲ್ಲಿ ಈ ಎರಡು ರಾಸಾಯನಿಕಗಳು ಅತ್ಯಧಿಕ ಪ್ರಮಾಣದಲ್ಲಿವೆಯೆಂದು ಹಾಗೂ ಹಾರ್ವೆಸ್ಟ್ ಗೋಲ್ಡ್, ಬ್ರಿಟಾನಿಯಾ ಮತ್ತು ಪರ್ಫೆಕ್ಟ್ ಬ್ರೆಡ್ ಉತ್ಪನ್ನಗಳಲ್ಲಿ ಅತ್ಯಧಿಕ ರಾಸಾಯನಿಕಗಳಿವೆಯೆಂದು ಸಿಎಸ್ಸಿ ವರದಿ ತಿಳಿಸಿತ್ತು.


ಡೊಮಿನೋಸ್ ಬ್ರ್ಯಾಂಡ್ ನಡೆಸುವ ಜುಬಿಲೆಂಟ್ ಫುಡ್‌ವರ್ಕ್ಸ್ ತನ್ನ ಸಂಸ್ಥೆ ಈ ರಾಸಾಯನಿಕಗಳನ್ನು ಉಪಯೋಗಿಸುವುದಿಲ್ಲವೆಂದು ಹೇಳಿದರೆ ಬ್ರಿಟಾನಿಯಾ ಮತ್ತು ಸ್ಲೈಸ್ ಆಫ್ ಇಟೆಲಿ ಕೂಡ ಹಾಗೆಯೇ ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News