ದಾವೂದ್‌ನನ್ನು ಶೀಘ್ರ ಬಂಧಿಸುತ್ತೇವೆ:ರಾಜನಾಥ ಸಿಂಗ್

Update: 2016-05-24 13:52 GMT

ಹೊಸದಿಲ್ಲಿ,ಮೇ 24: ‘ಮೋಸ್ಟ್ ವಾಂಟೆಡ್’ ಪಾತಕಿ ದಾವೂದ್ ಇಬ್ರಾಹೀಂನನ್ನು ಶೀಘ್ರವೇ ಬಂಧಿಸಿ ಭಾರತಕ್ಕೆ ಕರೆ ತರಲಾಗುವುದು ಎಂದು ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಅವರು ಹೇಳಿದ್ದಾರೆ. ಆದರೆ ಇದಕ್ಕಾಗಿ ಯಾವುದೇ ನಿರ್ದಿಷ್ಟ ಕಾಲಮಿತಿಯನ್ನು ಅವರು ಹೇಳಲಿಲ್ಲ.

 ‘ದಾವೂದ್‌ನನ್ನು ಶೀಘ್ರವೇ ಬಂಧಿಸುತ್ತೇವೆ. ಯಾವುದೇ ಪರಿಸ್ಥಿತಿಯಲ್ಲಿಯೂ ಆತನನ್ನು ಭಾರತಕ್ಕೆ ವಾಪಸ್ ಕರೆತರುತ್ತೇವೆ. ಆತ ಅಂತರರಾಷ್ಟ್ರೀಯ ಭಯೋತ್ಪಾದಕನಾಗಿದ್ದಾನೆ. ಆದರೆ ಆತನನ್ನು ಸೆರೆ ಹಿಡಿಯಲು ಅಂತರರಾಷ್ಟ್ರೀಯ ಸಂಸ್ಥೆಗಳ ನೆರವು ಪಡೆಯಬೇಕಾದ ಅಗತ್ಯವಿದೆ ಎಂದು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.

ದಾವೂದ್‌ನ ವಿರುದ್ಧ ಎಲ್ಲ ದಾಖಲೆಗಳನ್ನು ಪಾಕಿಸ್ಥಾನಕ್ಕೆ ನೀಡಲಾಗಿದೆ ಎಂದರು.

ದಾವೂದ್‌ನ ಇರುವಿಕೆಯನ್ನು ತಾನು ಪತ್ತೆ ಹಚ್ಚಿರುವುದಾಗಿ ಈ ಹಿಂದೆ ಸುದ್ದಿ ವಾಹಿನಿಯೊಂದು ಹೇಳಿಕೊಂಡ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ದಾವೂದ್‌ನನ್ನು ಹಸ್ತಾಂತರಿಸುವಂತೆ ಪಾಕಿಸ್ತಾನದ ಮೇಲೆ ಒತ್ತಡವನ್ನು ಮುಂದುವರಿಸುವುದಾಗಿ ಪುನರುಚ್ಚರಿಸಿತ್ತು.

ಐಸಿಸ್‌ನಿಂದ ಭಾರತಕ್ಕೆ ಯಾವುದೇ ಬೆದರಿಕೆಯಿಲ್ಲ ಎಂದು ಸಿಂಗ್ ಇದೇ ವೇಳೆ ಭರವಸೆ ನೀಡಿದರು. ಇತ್ತೀಚಿನ ಐಸಿಎಸ್ ವೀಡಿಯೊವೊಂದರಲ್ಲಿ ಭಾರತೀಯ ಜಿಹಾದಿಗಳು ಕಾಣಿಸಿಕೊಂಡು ಭಾರತದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯಗಳಿಗೆ ಸೇಡು ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಐಸಿಸ್‌ನಿಂದ ಯಾವುದೇ ಬೆದರಿಕೆಯಿಲ್ಲ. ಕಟ್ಟೆಚ್ಚರವನ್ನು ವಹಿಸಲಾಗಿದ್ದು, ಈ ದೇಶದ ಮುಸ್ಲಿಮರೂ ಐಸಿಸ್‌ಗೆ ವಿರುದ್ಧವಾಗಿದ್ದಾರೆ. ಭಾರತದಲ್ಲಿ ಭಯೋತ್ಪಾದನೆ ನಡೆಸಲು ಐಸಿಸ್‌ಗೆ ಮುಸ್ಲಿಮ ಸಮುದಾಯವು ಅವಕಾಶ ನೀಡುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News