ಮರಣಶಯ್ಯೆಯಲ್ಲಿರುವವರಿಗೆ ವಿಮಾ ಹಣವನ್ನು ನಿರಾಕರಿಸುವಂತಿಲ್ಲ:ಹೈಕೋರ್ಟ್ ಮಹತ್ವದ ತೀರ್ಪು

Update: 2016-05-24 13:51 GMT

ಚಂಡಿಗಡ,ಮೇ 24: ಮಹತ್ವದ ತೀರ್ಪೊಂದರಲ್ಲಿ ಪಂಜಾಬ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಮರಣಶಯ್ಯೆಯಲ್ಲಿರುವ ರೋಗಿಗಳು ವೈದ್ಯಕೀಯ ಸಲಹೆಗೆ ವಿರುದ್ಧವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದನ್ನು ನಿಲ್ಲಿಸಲು ನಿರ್ಧರಿಸಿ ಬಳಿಕ ಮೃತಪಟ್ಟರೆ ಅವರ ಕುಟುಂಬಕ್ಕೆ ವಿಮಾ ಪರಿಹಾರವನ್ನು ನಿರಾಕರಿಸುವಂತಿಲ್ಲ ಎಂದು ಎತ್ತಿ ಹಿಡಿದಿದೆ. ಈ ಆದೇಶವು ಭಾರೀ ವೈದ್ಯಕೀಯ ವೆಚ್ಚದ ಹೊರೆಯನ್ನು ಹೊತ್ತಿರುವ ಕುಟುಂಬಗಳಿಗೆ ನೆಮ್ಮದಿಯನ್ನು ನೀಡಬಹುದು. ಚಿಕಿತ್ಸೆಯನ್ನು ಪಡೆಯದಿರುವ ರೋಗಿಯ ಬಯಕೆಯು ‘ರೋಗಿಯ ಸ್ವಾಯತ್ತೆ ’ಯ ಮತ್ತು ‘ಘನತೆಯಿಂದ ಸಾವನ್ನಪ್ಪುವ ’ ವಿಷಯವಾಗಿದೆ ಎಂದು ನ್ಯಾಯಾಲಯವು ಹೇಳಿತು.

   ವೈದ್ಯರ ಸಲಹೆಗೆ ವಿರುದ್ಧವಾಗಿ ಚಿಕಿತ್ಸೆಯನ್ನು ನಿಲ್ಲಿಸುವ ವಿಮಾದಾರ ಮೃತಪಟ್ಟರೆ ಆತನ ಕುಟುಂಬವು ವಿಮಾಹಣವನ್ನು ಪಡೆಯುವ ಹಕ್ಕು ಹೊಂದಿಲ್ಲ ಎಂದ ವಾದಿಸಿದ್ದ ಓರಿಯಂಟಲ್ ಇನ್ಶೂರನ್ಸ್ ಕಂಪನಿಯ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯವು, ನಷ್ಟ ಪರಿಹಾರವಾಗಿ 35.46 ಲಕ್ಷ ರೂ.ಗಳನ್ನು ಪಾವತಿಸುವಂತೆ ಕಂಪನಿಗೆ ಸೂಚಿಸಿದ್ದ ಹಕ್ಕು ನ್ಯಾಯಾಧಿಕರಣದ ಆದೇಶವನ್ನು ಎತ್ತಿ ಹಿಡಿಯಿತು.

 ಬಹಳಷ್ಟು ವಿಮಾ ಕಂಪನಿಗಳು ಮರಣಶಯ್ಯೆಯಲ್ಲಿರುವ ರೋಗಿಗಳು ವೈದ್ಯರ ಸಲಹೆಗೆ ವಿರುದ್ಧವಾಗಿ ಚಿಕಿತ್ಸೆಯನ್ನು ತೊರೆಯುವುದನ್ನೇ ನೆಪವಾಗಿಟುಕೊಂಡು ಅವರ ಕುಟುಂಬಗಳಿಗೆ ವಿಮಾ ಹಣವನ್ನು ನೀಡಲು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯದ ಈ ಆದೇಶವು ಮಹತ್ವಪೂರ್ಣವಾಗಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News