×
Ad

ಜನಧನ ಯೋಜನೆಯಡಿಯ ಬ್ಯಾಂಕ್ ಖಾತೆಗಳು ಸುರಕ್ಷಿತವಲ್ಲ:ಆರ್‌ಬಿಐ

Update: 2016-05-24 21:46 IST

ಹೊಸದಿಲ್ಲಿ,ಮೇ 24: ಪ್ರಧಾನಿ ನರೇಂದ್ರ ಮೋದಿಯವರ ಸರಕಾರವು ಎರಡು ವರ್ಷಗಳನ್ನು ಪೂರೈಸುತ್ತಿದೆ. ಎನ್‌ಡಿಎ ಪ್ರಗತಿ ವರದಿಯು ಪ್ರಧಾನ ಮಂತ್ರಿ ಜನಧನ ಯೋಜನೆಯಡಿ ಸುಮಾರು 22 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆದಿರುವುದನ್ನು ಪ್ರಮುಖ ಸಾಧನೆಯೆಂಬಂತೆ ಬಿಂಬಿಸಿಕೊಳ್ಳುತ್ತಿದೆ. ಆದರೆ ಹೊಸದಾಗಿ ತೆರೆಯಲಾಗಿರುವ ಈ ಖಾತೆಗಳು ಸುಲಭ ಭೇದ್ಯವಾಗಿದ್ದು, ಅಕ್ರಮ ಹಣ ವರ್ಗಾವಣೆಗೆ ಬಳಕೆಯಾಗಬಹುದು ಎಂದು ಆರ್‌ಬಿಐ ಎಚ್ಚರಿಕೆ ನೀಡಿದೆ.

 ಇಲ್ಲಿ ಬ್ಯಾಂಕ್ ಅಧಿಕಾರಿಗಳ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಆರ್‌ಬಿಐ ಡೆಪ್ಯೂಟಿ ಗವರ್ನರ್ ಎಸ್.ಎಸ್.ಮುಂದ್ರಾ ಅವರು, ಇತ್ತೀಚಿನ ಪ್ರಕರಣವೊಂದರಲ್ಲಿ ಖಾತೆದಾರನಿಗೆ ಗೊತ್ತೇ ಇಲ್ಲದಂತೆ ಜಡ ಬ್ಯಾಂಕ್ ಖಾತೆಯನ್ನು ಭಾರೀ ಮೊತ್ತದ ಹಣದ ಸ್ವೀಕಾರ ಮತ್ತು ವರ್ಗಾವಣೆಗೆ ಬಳಸಿಕೊಂಡಿದ್ದು ಕಂಡು ಬಂದಿದೆ. ಅಧಿಕಾರಿಗಳು ಖಾತೆದಾರನಿಗೆ ನೋಟಿಸ್ ಜಾರಿಗೊಳಿಸಿದಾಗಲಷ್ಟೇ ಈ ಅಕ್ರಮ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಜನಧನ ಖಾತೆಗಳ ಮೇಲೆ ಕಳಪೆ ನಿಗಾಕ್ಕೆ ಬ್ಯಾಂಕುಗಳ ವ್ಯವಸ್ಥೆ ಮತ್ತು ಪ್ರಕ್ರಿಯೆಗಳು ಕಾರಣವೆಂದು ದೂರಿರುವ ಆರ್‌ಬಿಐ, ಇಂತಹ ಅಕ್ರಮ ವ್ಯವಹಾರಗಳ ವಿರುದ್ಧ ಕಟ್ಟೆಚ್ಚರವನ್ನು ವಹಿಸುವಂತೆ ಬ್ಯಾಂಕುಗಳಿಗೆ ಸೂಚಿಸಿದೆ.

ಖಾತೆಗಳಲ್ಲಿ ನಡೆಯುವ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಲು ಬ್ಯಾಂಕುಗಳು ಹಾಲಿ ಬಳಸುತ್ತಿರುವ ವಿಧಾನ ಹಳೆಯದಾಗಿದ್ದು, ವಂಚನೆಗಳ ವಿರುದ್ಧ ಪರಿಣಾಮಕಾರಿಯಾಗಿಲ್ಲ ಎನ್ನುವುದು ಆರ್‌ಬಿಐ ಅಭಿಪ್ರಾಯ.

ಗ್ರಾಹಕರ ಖಾತೆಗಳ ದುರುಪಯೋಗವನ್ನು ತಡೆಯುವಲ್ಲಿ ವಿಫಲವಾದರೆ ಶಿಸ್ತುಕ್ರಮವನ್ನೆದುರಿಸಬೇಕಾಗುತ್ತದೆ ಎಂದು ಅದು ಬ್ಯಾಂಕುಗಳಿಗೆ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News