ಯೇಲ್ ವಿವಿಯಲ್ಲಿ ಜನಾಂಗೀಯ ತಾರತಮ್ಯ

Update: 2016-05-24 17:45 GMT

 ನ್ಯೂಯಾರ್ಕ್, ಮೇ 24: ಅಮೆರಿಕದ ಪ್ರತಿಷ್ಠಿತ ಯೇಲ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಪ್ರಕ್ರಿಯೆಯಲ್ಲಿ ಜನಾಂಗೀಯ ನೆಲೆಯಲ್ಲಿ ತಾರತಮ್ಯವೆಸಲಾಗುತ್ತಿರುವ ಬಗ್ಗೆ ತನಿಖೆ ನಡೆಸಬೇಕೆಂದು ಎರಡು ಭಾರತೀಯ ಅಮೆರಿಕನ್ ಗುಂಪುಗಳು ಸೇರಿದಂತೆ 130 ಏಶ್ಯನ್ ಅಮೆರಿಕನ್ ಸಂಘಟನೆಗಳ ಒಕ್ಕೂಟವು ಆಗ್ರಹಿಸಿದೆ.

 ಅಮೆರಿಕನ್ ಭಾರತೀಯರ ಸಂಘಟನೆಗಳಾದ, ‘ಅಮೆರಿಕನ್ ಸೊಸೈಟಿ ಆಫ್ ಇಂಜಿನಿಯರ್ಸ್‌ ಆಫ್ ನ್ಯಾಶನಲ್ ಕ್ಯಾಪಿಟಲ್ ಚಾರ್ಟರ್’ ಹಾಗೂ ‘ಗ್ಲೋಬಲ್ ಆರ್ಗನೈಸೇಶನ್ ಆಫ್ ಲಾಸ್‌ಏಂಜಲೀಸ್ ಚಾಪ್ಟರ್’, 130ಕ್ಕೂ ಅಧಿಕ ಏಶ್ಯನ್-ಅಮೆರಿಕನ್ ಸಂಘಟನೆಗಳ ಒಕ್ಕೂಟ ‘ಏಶ್ಯನ್-ಅಮೆರಿಕನ್ ಶಿಕ್ಷಣ ಮೈತ್ರಿಕೂಟ ’(ಎಎಸಿಇ)ದ ಜೊತೆ ಕೈಜೋಡಿಸಿ ಯೇಲ್ ವಿವಿ, ಬ್ರೌನ್ ವಿವಿ ಹಾಗೂ ಡರ್ವೌಟ್ ಕಾಲೇಜ್ ವಿರುದ್ಧ ಅಮೆರಿಕನ್ ಶಿಕ್ಷಣ ಹಾಗೂ ನ್ಯಾಯಾಂಗ ಇಲಾಖೆಗೆ ಸೋಮವಾರ ದೂರು ನೀಡಿದೆ.

  ‘‘ಈ ಮೂರು ವಿದ್ಯಾಲಯಗಳು, ತಮ್ಮ ಕಾಲೇಜ್‌ಗಳಲ್ಲಿ ಪ್ರವೇಶ ಕೋರಿ ಅರ್ಜಿ ಸಲ್ಲಿಸುವ ಏಶ್ಯ ಮೂಲದ ವಿದ್ಯಾರ್ಥಿಗಳಿಗೆ ಕಾನೂನುಬಾಹಿರವಾಗಿ ತಾರತಮ್ಯ ಮಾಡುತ್ತಿವೆೆೆ ಹಾಗೂ ಕಾಲೇಜ್ ಪ್ರವೇಶಾತಿಗಾಗಿ ಜನಾಂಗೀಯ ಆಧಾರದಲ್ಲಿ ಮೀಸಲಾತಿ ಕೋಟಾಗಳನ್ನು ಜಾರಿಗೊಳಿಸುವ ಕಾರ್ಯಕ್ರಮವನ್ನು ಗುಪ್ತವಾಗಿ ಅನುಷ್ಠಾನಕ್ಕೆ ತರುತಿದ್ದು, ಇದು ಅಮೆರಿಕದ ಸಂವಿಧಾನಕ್ಕೆ ವಿರುದ್ಧವಾದುದೆಂದು ದೂರಿನಲ್ಲಿ ಆರೋಪಿಸಲಾಗಿದೆ.

ಯೇಲ್ ವಿವಿಯು ಅತ್ಯಂತ ಕಡಿಮೆ ಸಂಖ್ಯೆಯ ಏಶ್ಯನ್ ಮೂಲದ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡುತ್ತಿದೆ ಮಾತ್ರವಲ್ಲ, ತನ್ನ ಕಾನೂನು ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಕುರಿತಾದ ದಾಖಲೆಗಳನ್ನು ನಾಶಪಡಿಸಿದೆಯೆಂದು ಅದು ಆಪಾದಿಸಿದೆ.

 ಕಳೆದ ವರ್ಷದ ಮೇನಲ್ಲಿ 64 ಸಂಘಟನೆಗಳನ್ನೊಳಗೊಂಡ ಏಶ್ಯನ್-ಅಮೆರಿಕನ್ ವಿದ್ಯಾರ್ಥಿಗಳ ಒಕ್ಕೂಟವು ಹಾರ್ವರ್ಡ್ ವಿವಿಯ ವಿರುದ್ಧವೂ ಇದೇ ರೀತಿಯ ದೂರನ್ನು ಸಲ್ಲಿಸಿತ್ತು. ಹಾರ್ವಡ್ ವಿವಿಯು, ಪ್ರವೇಶಾತಿ ಪ್ರಕ್ರಿಯೆಯಲ್ಲಿ ಏಶ್ಯ ಮೂಲದ ವಿದ್ಯಾರ್ಥಿಗಳ ವಿರುದ್ಧ ತಾರತಮ್ಯವೆಸಗುತ್ತಿದ್ದು, ಜನಾಂಗೀಯ ಕಾರಣದಿಂದಾಗಿ ಅದು ಅತ್ಯಂತ ಅರ್ಹ ವಿದ್ಯಾರ್ಥಿಗಳನ್ನು ಪ್ರವೇಶವನ್ನು ನಿರಾಕರಿಸಿದೆಯೆಂದು ಒಕ್ಕೂಟವು ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News