ಹಕ್ಕಾನಿ ಜಾಲದ ವಿರುದ್ಧ ಕ್ರಮ ಕೈಗೊಳ್ಳುವ ತನಕ ಪಾಕ್‌ಗೆ 300 ದ.ಲಕ್ಷ ಡಾಲರ್ ಸೇನಾ ನೆರವಿಗೆ ತಡೆ

Update: 2016-05-24 17:48 GMT

ವಾಶಿಂಗ್ಟನ್, ಮೇ 24: ಹಕ್ಕಾನಿ ಭಯೋತ್ಪಾದಕ ಜಾಲದ ವಿರುದ್ಧ ಪ್ರದರ್ಶನೀಯವಾದ ಕ್ರಮಗಳನ್ನು ಪಾಕಿಸ್ತಾನವು ಕೈಗೊಂಡಿದೆಯೆಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿಯವರು, ಅಮೆರಿಕ ಕಾಂಗ್ರೆಸ್‌ಗೆ ಪ್ರಮಾಣಪತ್ರವನ್ನು ಸಲ್ಲಿಸುವವರೆಗೂ ಆ ದೇಶಕ್ಕೆ 300 ದಶಲಕ್ಷ ಡಾಲರ್‌ಗಳ ಸೇನಾ ನೆರವನ್ನು ಸ್ಥಗಿತಗೊಳಿಸುವ ಶಾಸನಕ್ಕೆ ಸೆನೆಟ್ ಸಚಿವಾಲಯವು ತನ್ನ ಅನುಮೋದನೆಯನ್ನು ನೀಡಿದೆ.

   ಕಳೆದ ವರ್ಷದಂತೆ ಈ ಸಲವೂ ಅಮೆರಿಕ ಸೆನೆಟ್‌ನ ಸಶಸ್ತ್ರ ಸೇವೆಗಳ ಸಮಿತಿಯು ಕಳೆದ ವಾರ ಅಂಗೀಕರಿಸಿದ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆ (ಎನ್‌ಡಿಎಎ)-2017, ಹಕ್ಕಾನಿ ಗುಂಪಿನ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಪಾಕಿಸ್ತಾನಕ್ಕೆ 300 ದಶಲಕ್ಷ ಡಾಲರ್‌ಗಳ ಮೈತ್ರಿಕೂಟ ಬೆಂಬಲ ನಿಧಿಯನ್ನು ತಡೆಹಿಡಿಯುವುದನ್ನು ಮುಂದುವರಿಸಿದೆ. ಆದಾಗ್ಯೂ, ಪಾಕಿಸ್ತಾನಕ್ಕೆ ಭದ್ರತಾ ನೆರವನ್ನು ಮುಂದುವರಿಸುವುದಕ್ಕೆ ಅದು ಸಮ್ಮತಿಯನ್ನು ಸೂಚಿಸಿದೆ.
   ಅಫ್ಘಾನ್-ಪಾಕ್ ಗಡಿಯಲ್ಲಿ ಅಮೆರಿಕದ ವಾಯುಪಡೆ ದಾಳಿಗೆ ಅಫ್ಘಾನ್ ತಾಲಿಬಾನ್ ನಾಯಕ ಮುಲ್ಲಾ ಮನ್ಸೂರ್ ಬಲಿಯಾಗುವುದಕ್ಕಿಂತ ಕೆಲವೇ ದಿನಗಳ ಮೊದಲು ಎನ್‌ಡಿಎಎ-2017 ಕಾಯ್ದೆಯನ್ನು ಅಮೆರಿಕ ರಕ್ಷಣಾ ಸಮಿತಿ ಅಂಗೀಕರಿಸಿತ್ತು. 2001ರ ಸೆಪ್ಟಂಬರ್ 11ರಂದು ನಡೆದ ಭಯೋತ್ಪಾದಕ ದಾಳಿಯಿಂದೀಚೆಗೆ ದಕ್ಷಿಣ ಏಶ್ಯದಲ್ಲಿ ಪಾಕಿಸ್ತಾನವು ಉಗ್ರವಾದದ ವಿರುದ್ಧ ಸಮರದಲ್ಲಿ ಪಾಕಿಸ್ತಾನವು ಪ್ರಮುಖ ಪಾಲುದಾರನಾಗಿದೆಯೆಂದು ಸಮಿತಿ ಹೇಳಿದೆ.
 '' ಪಾಕಿಸ್ತಾನದಲ್ಲಿ ಸ್ಥಿರತೆಯಿಲ್ಲದೆ, ಇಡೀ ಪ್ರದೇಶದಲ್ಲಿ ಸ್ಥಿರತೆಯನ್ನು ಸಾಧಿಸಲು ಸಾಧ್ಯವಿಲ್ಲ. ಬಲಿಷ್ಠ, ಸುಸ್ಥಿರ ಹಾಗೂ ಸುಭದ್ರ ಪಾಕಿಸ್ತಾನದ ಪೋಷಣೆಯು, ಅಮೆರಿಕದ ರಾಷ್ಟ್ರೀಯ ಭದ್ರತಾ ಧ್ಯೇಯಗಳಿಗೆ ಅನುಗಣವಾಗಿದೆ ಎಂದು ವರದಿ ತಿಳಿಸಿದೆ.

 ಡ್ರೋನ್ ದಾಳಿ ಸಮರ್ಥಿಸಿದ ಅಮೆರಿಕ
   ವಾಶಿಂಗ್ಟನ್, ಮೇ 23: ತಾಲಿಬಾನ್ ವರಿಷ್ಠ ಮುಲ್ಲಾ ಅಖ್ತರ್ ಮನ್ಸೂರ್‌ನನ್ನು ಹತ್ಯೆಗೈಯಲು ತನ್ನ ಪ್ರಾಂತದ ಮೇಲೆ ಡ್ರೋನ್ ದಾಳಿ ನಡೆಸಿದ ಅಮೆರಿಕದ ಕ್ರಮದ ಬಗ್ಗೆ ಇಸ್ಲಾಮಾಬಾದ್ ಕಳವಳ ವ್ಯಕ್ತಪಡಿಸಿರುವಂತೆಯೇ, ಒಬಾಮ ಸರಕಾರವು ಮಂಗಳವಾರ ಹೇಳಿಕೆಯೊಂದನ್ನು ನೀಡಿ, ಪಾಕಿಸ್ತಾನದ ಸಾರ್ವಭೌಮತೆಯನ್ನು ಗೌರವಿಸುತ್ತದೆ. ಆದರೆ ತನ್ನ ಪಡೆಗಳ ಮೇಲೆ ಗುರಿಯಿಟ್ಟಿರುವ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ದಾಳಿಗಳನ್ನು ನಡೆಸಲಾಗುವುದೆಂದು ಸ್ಪಷ್ಟಪಡಿಸಿದೆ.
 '' ನಾವು ಖಂಡಿತವಾಗಿಯೂ ಪಾಕಿಸ್ತಾನದ ಪ್ರಾಂತೀಯ ಸಾರ್ವಭೌಮತೆಯನ್ನು ಗೌರವಿಸುತ್ತೇವೆ. ಆದರೆ ನಾವು ಮೊದಲೇ ಹೇಳಿದ ಹಾಗೆ ಅಮೆರಿಕ ಪಡೆಗಳ ವಿರುದ್ಧ ಸಂಚುಹೂಡುವ ಹಾಗೂ ದಾಳಿಗಳನ್ನು ನಡೆಸುವ ಭಯೋತ್ಪಾದಕನನ್ನು ಕಿತ್ತೊಗೆಯಲು ನಾವು ದಾಳಿಗಳನ್ನು ನಡೆಸುವೆವು''ಅಮೆರಿಕ ವಿದೇಶಾಂಗ ಇಲಾಖೆಯ ಉಪವಕ್ತಾರ ಮಾರ್ಕ್ ಟೋನರ್ ತಿಳಿಸಿದ್ದಾರೆ.
   ವಾಶಿಂಗ್ಟನ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು,ಮನ್ಸೂರ್ ಹತ್ಯೆಗೆ ತನ್ನ ನೆಲದಲ್ಲಿ ಡ್ರೋನ್ ದಾಳಿ ನಡೆಸಿದ್ದಕ್ಕೆ ಪಾಕಿಸ್ತಾನ ಆಸಮಾಧಾನ ವ್ಯಕ್ತಪಡಿಸಿರುವ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಅವರು ಹೀಗೆ ಉತ್ತರಿಸಿದುರು. '' ಈ ದಾಳಿಯು, ಅಮೆರಿಕನ್ ಹಾಗೂ ಅಫ್ಘಾನ್ ಪ್ರಜೆಗಳನ್ನು ಗುರಿಯಿಟ್ಟು ದಾಳಿ ನಡೆಸುವವರಿಗೆ ಎಲ್ಲೂ ಸುರಕ್ಷಿತವಾದ ಸ್ವರ್ಗವಿಲ್ಲವೆಂಬ ಸ್ಪಷ್ಟ ಸಂದೇಶವನ್ನು ನೀಡಿದೆ. ಸಂಘರ್ಷಕ್ಕೆ ಶಾಂತಿಯುತ ಪರಿಹಾರವನ್ನು ಅನುಸರಿಸುವುದೇ ತಾಲಿಬಾನ್ ಮುಂದಿರುವ ಏಕೈಕ ಆಯ್ಕೆಯಾಗಿದೆ'' ಎಂದರು. ಆದಾಗ್ಯೂ ಮನ್ಸೂರ್‌ನ ಸಾವಿನಿಂದಾಗಿ ತಾಲಿಬಾನ್ ಸೋತಿದೆಯೆಂದು ಅರ್ಥವಲ್ಲ. ಆದರೆ ಅದು ಉಗ್ರಗಾಮಿ ಗುಂಪಿಗೆ ಸ್ಪಷ್ಟ ಸಂದೇಶವನ್ನು ನೀಡಿದೆಯೆಂದು ಮಾರ್ಕ್ ಟೋನರ್ ತಿಳಿಸಿದ್ದಾರೆ.


 


ಪಾಕಿಸ್ತಾನದಿಂದ ಅಮೆರಿಕ ರಾಯಭಾರಿಗೆ ಬುಲಾವ್

ಡ್ರೋನ್ ದಾಳಿಗೆ ಪ್ರತಿಭಟನೆ

    ಇಸ್ಲಾಮಾಬಾದ್, ಮೇ 24: ಪಾಕಿಸ್ತಾನವು ಮಂಗಳವಾರ ಅಮೆರಿಕದ ರಾಯಭಾರಿಯನ್ನು ಕರೆಸಿಕೊಂಡು, ಕಳೆದ ಶನಿವಾರ ತಾಲಿಬಾನ್ ವರಿಷ್ಠ ಮುಲ್ಲಾ ಉಮರ್‌ನ ಹತ್ಯೆಗೆ ಕಾರಣವಾದ ಡ್ರೋನ್ ದಾಳಿಯನ್ನು ತನ್ನ ನೆಲದಲ್ಲಿ ನಡೆಸಿದ್ದಕ್ಕೆ ಪ್ರತಿಭಟನೆ ವ್ಯಕ್ತಪಡಿಸಿದೆ.
 ವಿದೇಶಾಂಗ ವ್ಯವಹಾರಗಳಿಗೆ ಪ್ರಧಾನಿಯವರ ವಿಶೇಷ ಸಹಾಯಕರಾದ ಸೈಯದ್ ತಾರೀಖ್ ಫಾತೆಮಿ ಶನಿವಾರ, ಪಾಕ್‌ನಲ್ಲಿನ ಅಮೆರಿಕ ರಾಯಭಾರಿ ಡೇವಿಡ್ ಹ್ಯಾಲಿ ಅವರನ್ನು ಕರೆಸಿಕೊಂಡು, ಕಳೆದ ಶನಿವಾರ ಪಾಕ್ ಪ್ರಾಂತದ ಮೇಲೆ ಅಮೆರಿಕ ನಡೆಸಿದ ಡ್ರೋನ್ ದಾಳಿಯ ಬಗ್ಗೆ ತನ್ನ ಆತಂಕವನ್ನು ವ್ಯಕ್ತಪಡಿಸಿದರು. ಅಮೆರಿಕದ ಡ್ರೋನ್ ದಾಳಿಯು, ಪಾಕಿಸ್ತಾನದ ಸಾರ್ವಭೌಮತೆಯ ಉಲ್ಲಂಘನೆಯಾಗಿದೆ ಹಾಗೂ ವಿಶ್ವಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳಿಗೆ ಖಾತರಿಪಡಿಸುವ ಪ್ರಾಂತೀಯ ಭಾವೈಕ್ಯತೆಯ ಮೇಲೆ ನಡೆದ ಅತಿಕ್ರಮಣ ಇದಾಗಿದೆಯೆಂದು ಫಾತೆಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News