ಮೋದಿ ಪ್ರಚಾರ ನಿರ್ವಹಿಸಿದ ಸಿಎಜಿಗೆ ತೆರಿಗೆ ನೋಟಿಸ್

Update: 2016-05-24 17:49 GMT

ಹೊಸದಿಲ್ಲಿ, ಮೇ 24: ನರೇಂದ್ರ ಮೋದಿಯ 2014 ಚುನಾವಣಾ ಪ್ರಚಾರ ನಿಭಾಯಿಸಿದ್ದ ರಾಜಕೀಯ ಸಲಹೆಗಾರ ಪ್ರಶಾಂತ್ ಕಿಶೋರ್ ನೇತೃತ್ವದ ದಿ ಎಸೋಸಿಯೇಶನ್ ಆಫ್ ಸಿಟಿಜನ್ಸ್ ಫಾರ್ ಅಕೌಂಟೇಬಲ್ ಗವರ್ನೆನ್ಸ್ (ಸಿಎಜಿ) ಸಂಸ್ಥೆಗೆ ತೆರಿಗೆ ನೋಟಿಸ್ ಜಾರಿಯಾಗಿದೆ. ಈ ಸಂಸ್ಥೆ 2013ರಲ್ಲಿ ರಚಿತವಾಗಿದ್ದರೆ ಅದರ ಮುಖ್ಯಸ್ಥ ಈಗ ಇಂಡಿಯನ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿ ಸ್ಥಾಪಿಸಿ ನಿತೀಶ್ ಕುಮಾರ್ ಅವರ ಬಿಹಾರ ಚುನಾವಣಾ ಪ್ರಚಾರ ಕಾರ್ಯವನ್ನು ನಿಭಾಯಿಸಿತ್ತು. ಪ್ರಸಕ್ತ ಕಾಂಗ್ರೆಸಿನೊಂದಿಗೆ ಉತ್ತರ ಪ್ರದೇಶ ಹಾಗೂ ಪಂಜಾಬ್ ಚುನಾವಣಾ ಪ್ರಚಾರ ಕಾರ್ಯದ ತಂತ್ರಗಾರಿಕೆಗೆ ಸಂಸ್ಥೆ ಸಹಾಯ ಮಾಡುತ್ತಿದೆ.
   ಕಳೆದ ನಾಲ್ಕು ವರ್ಷಗಳಲ್ಲಿ ಸಂಸ್ಥೆಯ ಆದಾಯ ಹಾಗೂ ಆದಾಯ ಮೂಲಗಳನ್ನು ಘೋಷಿಸಬೇಕೆಂದು ನಾಶಿಕ್‌ನಲ್ಲಿರುವ ಕೇಂದ್ರೀಯ ಅಬಕಾರಿ ಗುಪ್ತಚರ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ.
 ಈ ಬಗ್ಗೆ ನಿರ್ದೇಶನಾಲಯದ ಉಪ ನಿರ್ದೇಶಕ ಸುಶೀಲ್ ಕುಮಾರ್ ಕಾಲೆಯವರನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಕೇಂದ್ರೀಯ ಅಬಕಾರಿ ಗುಪ್ತಚರ ವಿಭಾಗದ ಸುಪರಿಂಟೆಂಡೆಂಟ್ ಎಂ ಡಿ ಪೇಖಾಲೆ ಸಮನ್ಸ್ ಜಾರಿಗೊಳಿಸಿದ್ದು ಅದನ್ನು ಕಂಪೆನಿಯ ಅಹ್ಮದಾಬಾದ್ ವಿಳಾಸಕ್ಕೆ ಕಳುಹಿಸಲಾಗಿತ್ತಲ್ಲದೆ ಸಂಸ್ಥೆಯ ಅಧಿಕಾರಿಗಳು ಮೇ 4ರಂದು ನಿರ್ದೇಶನಾಲಯದೆದುರು ಹಾಜರಾಗಬೇಕೆಂದೂ ಹೇಳಿತ್ತು. ಸಿಎಜಿ ನಿರ್ದೇಶಕ ರಮೇಶ್ ಚಂದ್ರ ವೋರಾ ಅವರನ್ನು ವೈಯಕ್ತಿಕವಾಗಿ ಸೂಕ್ತ ದಾಖಲೆಗಳೊಂದಿಗೆ ಹಾಜರಾಗುವಂತೆ ಹೇಳಲಾಗಿತ್ತಲ್ಲದೆ ಕಂಪೆನಿಯ ಆದಾಯ ಲೆಡ್ಜರ್‌ಗಳನ್ನೂ ಹಾಜರುಪಡಿಸುವಂತೆ ಹೇಳಲಾಗಿತ್ತು.
 
ರಿಜಿಸ್ಟ್ರಾರ್ ಆಫ್ ಕಂಪೆನೀಸ್, ಮುಂಬೈನಲ್ಲಿ ಜುಲೈ 12, 2013ರಂದು ನೋಂದಾಯಿತವಾದ ಈ ಕಂಪೆನಿಯಲ್ಲಿ ವೋರಾ ಹೊರತಾಗಿ ಹಿಮಾಂಶು ಅನಿರುದ್ಧ್ ಸಿಂಹ ಚುಡಾಸಮ ನಿರ್ದೇಶಕರಾಗಿದ್ದಾರೆ. ಆಫ್ರಿಕಾದಲ್ಲಿ ವಿಶ್ವಸಂಸ್ಥೆ ಆಯೋಗದ ಮಾಜಿ ಮುಖ್ಯಸ್ಥರಾಗಿದ್ದ ಮೂವತ್ತೇಳು ವರ್ಷದ ಪ್ರಶಾಂತ್ ಕಿಶೋರ್ ತನ್ನ ಯುವ ತಂಡದ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಿಭಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಲ್ಲದೆ ಬಿಹಾರದಲ್ಲಿ ನಿತೀಶ್ ಜಯದ ಶಿಲ್ಪಿಯೆಂದೂ ಬಣ್ಣಿಸಲ್ಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News