ಬಿಜೆಪಿ ಸರಕಾರವನ್ನು ಕಡೆಗಣಿಸುತ್ತಿರುವ ರಾಜನ್ ವಜಾಕ್ಕೆ ಮೋದಿಗೆ ಮತ್ತೆ ಸ್ವಾಮಿ ಆಗ್ರಹ
ಹೊಸದಿಲ್ಲಿ,ಮೇ 26: ಆರ್‌ಬಿಐ ಗವರ್ನರ್ ರಘುರಾಮ ರಾಜನ್ ವಿರುದ್ಧ ಹೊಸ ಆರೋಪಗಳೊಂದಿಗೆ ಗುರುವಾರ ಮತ್ತೆ ಹೊಸದಾಗಿ ದಾಳಿ ನಡೆಸಿದ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿಯವರು, ಅವರನ್ನು ತಕ್ಷಣವೇ ಸೇವೆಯಿಂದ ಕಿತ್ತೊಗೆಯುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.
ರಾಜನ್ ಬಡ್ಡಿದರವನ್ನು ಹೆಚ್ಚಿಸುವ ಮೂಲಕ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಕೇಡನ್ನುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಸ್ವಾಮಿ,ಬಡ್ಡಿದರ ಹೆಚ್ಚಳ ಮತ್ತು ಅಧಿಕ ಬಡ್ಡಿದರದ ಪರಿಣಾಮವೇನು ಎನ್ನುವುದು ಅವರಿಗೆ ಖಂಡಿತವಾಗಿಯೂ ಗೊತ್ತಿದೆ ಮತ್ತು ಅವರ ನೀತಿಯು ಮೊಂಡುತನದ್ದಾಗಿದೆ. ಹೀಗಾಗಿ ಅವರ ನೀತಿಯು ರಾಷ್ಟ್ರವಿರೋಧಿ ದುರುದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ.
ರಾಜನ್ ಅವರು ಸುರಕ್ಷಿತವಲ್ಲದ ಚಿಕಾಗೋ ವಿವಿಯ ಇ-ಮೇಲ್ ಐಡಿಯನ್ನು ಬಳಸಿ ರಹಸ್ಯ ಮತ್ತು ಸೂಕ್ಷ್ಮ ಹಣಕಾಸು ಮಾಹಿತಿಗಳನ್ನು ಕಳುಹಿಸುತ್ತಿದ್ದಾರೆ ಮತ್ತು ಬಹಿರಂಗವಾಗಿಯೇ ಬಿಜೆಪಿ ಸರಕಾರವನ್ನು ಕಡೆಗಣಿಸುತ್ತಿದ್ದಾರೆ ಎಂದೂ ಸ್ವಾಮಿ ಆರೋಪಿಸಿದ್ದಾರೆ.
ಆರ್‌ಬಿಐ ಗವರ್ನರ್ ವಿರುದ್ಧ ತಾನು ಮಾಡಿರುವ ಆರು ಆರೋಪಗಳು ಮೇಲ್ನೋಟಕ್ಕೆ ನಿಜವಾಗಿವೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಅವರನ್ನು ತಕ್ಷಣವೇ ಹುದ್ದೆಯಿಂದ ಕಿತ್ತು ಹಾಕುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಸರಕಾರದ ಅತ್ಯಂತ ಉನ್ನತ ಮತ್ತು ಸೂಕ್ಷ್ಮಹುದ್ದೆಯನ್ನು ಹೊಂದಿದ್ದರೂ ರಾಜನ್ ತನ್ನ ಗ್ರೀನ್ ಕಾರ್ಡ್ ನವೀಕರಿಸಲು ಅಮೆರಿಕಕ್ಕೆ ಕಡ್ಡಾಯ ಪ್ರವಾಸಗಳನ್ನು ಕೈಗೊಳ್ಳುತ್ತಿರುತ್ತಾರೆ ಎಂದು ಹದಿನೈದು ದಿನಗಳ ಅವಧಿಯಲ್ಲಿ ಮೋದಿಯವರಿಗೆ ಬರೆದಿರುವ ತನ್ನ ಎರಡನೇ ಪತ್ರದಲ್ಲಿ ಸ್ವಾಮಿ ಆರೋಪಿಸಿದ್ದಾರೆ.
ಆರ್‌ಬಿಐ ಗವರ್ನರ್ ಹುದ್ದೆಯು ಅತ್ಯುನ್ನತವಾಗಿದ್ದು,ದೇಶಭಕ್ತಿ ಮತ್ತು ನಮ್ಮ ದೇಶಕ್ಕೆ ಬದ್ಧತೆಯು ಈ ಹುದ್ದೆಗೆ ಅಗತ್ಯವಾಗಿದೆ ಎಂದೂ ಅವರು ಹೇಳಿದ್ದಾರೆ.