ದಿಲ್ಲಿಯ ಹೃದಯಭಾಗದಲ್ಲೇ ಶಸ್ತ್ರಾಸ್ತ್ರ ತರಬೇತಿ ನಡೆಸುತ್ತೇವೆ ಹಿಂದೂ ಸೇನಾ ಸವಾಲು
ಹೊಸದಿಲ್ಲಿ, ಮೇ 27: ಬಲಪಂಥೀಯ ಬಜರಂಗದಳ ಸಂಘಟನೆಯ ಕಾರ್ಯಕರ್ತರಿಗೆ ರೈಫಲ್ ಬಳಕೆ, ಖಡ್ಗ ಮತ್ತು ಲಾಠಿ ತರಬೇತಿ ನೀಡಿ ಆತ್ಮರಕ್ಷಣೆಗೆ ಸಜ್ಜುಗೊಳಿಸುವ ಮತ್ತು ಸ್ಕಲ್ ಕ್ಯಾಪ್ ಧರಿಸಿದ ಕಾರ್ಯಕರ್ತರನ್ನು ಹತ್ಯೆ ಮಾಡುವ ವಿಡಿಯೊ ಈ ವಾರದ ಆರಂಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಸ್‌ನಂತೆ ಹಬ್ಬಿತ್ತು. ಆದರೆ ಅದನ್ನು ಅಕ್ಷರಶಃ ನಿಜಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದಾಗಿ ಹಿಂದೂ ಸೇನಾ ಘೋಷಿಸಿದೆ.
ದಿಲ್ಲಿ ನಗರದ ಮಧ್ಯಭಾಗದಲ್ಲೇ ಇಂಥ ಸಶಸ್ತ್ರ ತರಬೇತಿ ನೀಡುವುದಾಗಿ ಸವಾಲು ಹಾಕಿದೆ. ಸಂಸತ್ ಭವನದಿಂದ ಕೂಗಳತೆ ದೂರದಲ್ಲಿರುವ ಕನ್ನಾಟ್ ಪ್ಯಾಲೇಸ್ ಪ್ರದೇಶದಲ್ಲೇ ಈ ತರಬೇತಿ ಆಯೋಜಿಸುವುದಾಗಿ ಹಿಂದೂ ಸೇನಾ ಪ್ರಕಟಿಸಿದೆ.
ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತ ಈ ಬಗ್ಗೆ ಹೇಳಿಕೆ ನೀಡಿ, ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧ ನಮ್ಮ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಸಲುವಾಗಿ ಈ ತರಬೇತಿ ಎಂದು ಸ್ಪಷ್ಟಪಡಿಸಿದ್ದಾರೆ. ಜೂನ್ 1ರಿಂದ 5ರವರೆಗೆ ಈ ತರಬೇತಿ ನಡೆಯಲಿದೆ. ಆದರೆ ತರಬೇತಿ ನಡೆಯುವ ನಿರ್ದಿಷ್ಟ ಪ್ರದೇಶವನ್ನು ರಹಸ್ಯವಾಗಿ ಇಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿ ಕೂಡಾ ಉಗ್ರಗಾಮಿಯಾಗಬೇಕು, ಇದಕ್ಕಾಗಿ ಸೂಕ್ತ ತರಬೇತಿ ಪಡೆಯಬೇಕು. ಇದು ಯಾರ ಮೇಲಿನ ದಾಳಿಗೂ ನೀಡುತ್ತಿರುವ ತರಬೇತಿಯಲ್ಲ. ಆದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಸಲುವಾಗಿ ಈ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಬಂದೂಕುಗಳಿಗೆ ಗುರಿಯಾಗಿ ಐಸಿಸ್ ಗೊಂಬೆಗಳನ್ನು ಕೂಡಾ ಸಿದ್ಧಪಡಿಸಲಾಗಿದೆ. 20 ರಿಂದ 30 ವರ್ಷದ ಯುವಕರಿಗೆ ಈ ತರಬೇತಿ ನೀಡಲಾಗುತ್ತದೆ. ಈ ತರಬೇತಿಗಾಗಿ 100ಕ್ಕೂ ಹೆಚ್ಚು ಬಂದೂಕುಗಳನ್ನು ಪಡೆಯಲಾಗಿದೆ ಎಂದು ತಿಳಿದುಬಂದಿದೆ.