ಕೇರಳ ಮುಖ್ಯಮಂತ್ರಿಯಿಂದ ಇಂದು ಪ್ರಧಾನಿ, ರಾಷ್ಟ್ರಪತಿ ಭೇಟಿ
ತಿರುವನಂತಪುರಂ, ಮೇ 28: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಯನ್ನು ಭೇಟಿಯಾಗಲಿದ್ದಾರೆ ಹಾಗೂ ವಿತ್ತ ಸಚಿವ ಅರುಣ್ ಜೈಟ್ಲಿಯವರನ್ನೂ ಭೇಟಿಯಾಗಲು ಅವರು ಉದ್ದೇಶಿಸಿದ್ದಾರೆ ಎಂದು ವರದಿಯಾಗಿದೆ. ಮುಖ್ಯಮಂತ್ರಿಯಾದ ಬಳಿಕ ಪಿಣರಾಯಿ ವಿಜಯನ್ ದಿಲ್ಲಿಗೆ ಮೊದಲ ಬಾರಿ ಭೇಟಿ ನೀಡುತ್ತಿದ್ದು ಅವರೊಂದಿಗೆ ಅಧೀನ ಮುಖ್ಯ ಕಾರ್ಯದರ್ಶಿ ನಳಿನಿ ನೆಟ್ಟೋ ಇರುತ್ತಾರೆ. ದಿಲ್ಲಿಯ ಮಳೆಯಾಳಿ ಸಂಘಟನೆಗಳು ನೀಡುತ್ತಿರುವ ಮುಖ್ಯಮಂತ್ರಿಗೆ ಸ್ವಾಗತ ಸಮಾರಂಭ ಏರ್ಪಡಿಸಿದ್ದು ಅದರಲ್ಲಿಯೂ ಮುಖ್ಯಮಂತ್ರಿ ಭಾಗವಹಿಸಲಿದ್ದಾರೆನ್ನಲಾಗಿದೆ.
ಪ್ರಧಾನಿಯನ್ನು ಸಂಜೆ ನಾಲ್ಕು ಗಂಟೆಗೆ ರೇಸ್‌ಕೋರ್ಸ್ನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಲಿದ್ದಾರೆ. ಬೆಳಗ್ಗೆ ಹನ್ನೊಂದು ಗಂಟೆಗೆ ಮುಖ್ಯಮಂತ್ರಿಗೆ ಕೇರಳ ಹೌಸ್‌ನಲ್ಲಿ ಔಪಚಾರಿಕ ಸ್ವಾಗತ ಕಾರ್ಯಕ್ರಮವಿದೆ. ಸಂಜೆ ಆರುಗಂಟೆಗೆ ರಾಷ್ಟ್ರಪತಿ ಪ್ರಣವ್‌ಮುಖರ್ಜಿಯನ್ನು ಭೇಟಿಯಾಗಲಿದ್ದು ಎರಡು ದಿವಸಗಳ ಸಿಪಿಎಂ ಪೊಲಿಟ್‌ಬ್ಯೂರೊ ಸಭೆಯಲ್ಲಿಯೂ ಪಿಣರಾಯಿ ಪಾಲ್ಗೊಳ್ಳಲಿದ್ದಾರೆ. ಕೇರಳ, ಬಂಗಾಳ ಸಹಿತ ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷದ ಪ್ರದರ್ಶನದ ಕುರಿತು ಈ ಸಭೆಯಲ್ಲಿ ಅವಲೋಕನ ನಡೆಯಲಿದೆ. ವಿ.ಎಸ್. ಅಚ್ಯುತಾನಂದನ್‌ರಿಗೆ ಯಾವ ಸ್ಥಾನಮಾನಗಳನ್ನು ನೀಡಬೇಕೆಂದೂ ಈ ಸಭೆಯಲ್ಲಿ ಚರ್ಚಿಸಲಾಗುವುದು.