10ನೆ ತರಗತಿಯ ಸಿಬಿಎಸ್‌ಇ ಫಲಿತಾಂಶ ಪ್ರಕಟ:ಬಾಲಕಿಯರೇ ಮೇಲುಗೈ
ಹೊಸದಿಲ್ಲಿ, ಮೇ 28: ಕೇಂದ್ರೀಯ ಮಾಧ್ಯಮ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ಪಠ್ಯಕ್ರಮದ 10ನೆ ತರಗತಿಯ ಫಲಿತಾಂಶ ಶನಿವಾರ ಪ್ರಕಟಿಸಲಾಗಿದೆ.
ಈ ವರ್ಷ ಒಟ್ಟಾರೆ ಶೇ. 96.36ರಷ್ಟು ಫಲಿತಾಂಶ ದಾಖಲಾಗಿದ್ದು, ಬಾಲಕಿಯರು ಶೇ.96.21 ಹಾಗೂ ಬಾಲಕರು ಶೇ.96.11ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಕಳೆದ ವರ್ಷದ ಸಿಬಿಎಸ್‌ಇ 10ನೆ ತರಗತಿಯ ಪರೀಕ್ಷೆಯಲ್ಲಿ ಶೇ.97.32 ಫಲಿತಾಂಶ ದಾಖಲಾಗಿತ್ತು.
ವಲಯವಾರು ಫಲಿತಾಂಶದಲ್ಲಿ ತಿರುವನಂತಪುರ ಶೇ.99.87ರಷ್ಟು ಫಲಿತಾಂಶದೊಂದಿಗೆ ಮೊದಲ ಸ್ಥಾನ ಪಡೆದರೆ, ಚೆನ್ನೈ ಶೇ.99.69ರಷ್ಟು ಫಲಿತಾಂಶ ದಾಖಲಿಸಿದೆ. ಈ ವರ್ಷ ಸಿಬಿಎಸ್‌ಇ 10ನೆ ತರಗತಿಯ ಪರೀಕ್ಷೆಯಲ್ಲಿ 15,309 ಶಾಲೆಗಳ 14,99,122 ವಿದ್ಯಾರ್ಥಿಗಳು ಹಾಜರಾಗಿದ್ದು, ಇದರಲ್ಲಿ 8,92,685 ಬಾಲಕರು ಹಾಗೂ 6,06,437 ಬಾಲಕಿಯರು ಪರೀಕ್ಷೆ ಬರೆದಿದ್ದರು. 10 ವಲಯಗಳ ಪೈಕಿ ದಿಲ್ಲಿ ವಲಯದಲ್ಲಿ ಗರಿಷ್ಠ 2,91, 371 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಕೇಂದ್ರ ಸರಕಾರದಿಂದ ನಡೆಸಲ್ಪಡುವ ಜವಾಹರ್ ನವೋದಯ ವಿದ್ಯಾಲಯ ಶೇ.98.87 ಹಾಗೂ ಕೇಂದ್ರೀಯ ವಿದ್ಯಾಲಯ ಶೇ.98.87 ಫಲಿತಾಂಶ ದಾಖಲಿಸಿದೆ. ಖಾಸಗಿ ಶಾಲೆಗಳು ಶೇ.97.72, ಸರಕಾರಿ ಶಾಲೆಗಳು ಶೇ. 86.61 ಫಲಿತಾಂಶ ಪಡೆದಿವೆ.