ಲೋಕಸಭಾಧ್ಯಕ್ಷೆಗೆ ರೂ. 48 ಲಕ್ಷದ ಜಾಗ್ವಾರ್ ಕಾರು!
Update: 2016-05-28 22:44 IST
ಹೊಸದಿಲ್ಲಿ, ಮೇ 28: ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್‌ರಿಗಾಗಿ ರೂ.48.25 ಲಕ್ಷ ಬೆಲೆಯ ಜಾಗ್ವಾರ್ ಎಕ್ಸ್ ಇ ಕಾರನ್ನು ಅಧಿಕೃತ ವಾಹನವಾಗಿ ಖರೀದಿಸಲಾಗಿದೆ. ಇದು ವಿಪಕ್ಷ ಕಾಂಗ್ರೆಸ್‌ನ ಹುಬ್ಬುಗಳನ್ನು ಮೇಲೇರುವಂತೆ ಮಾಡಿದ್ದು, ಐಶಾರಾಮಿ ವಾಹನದ ಬಳಕೆಯನ್ನು ಮರು ಪರಿಶೀಲಿಸುವಂತೆ ಅದು ಶುಕ್ರವಾರ ಅವರಿಗೆ ಕರೆ ನೀಡಿದೆ.
ಆದಾಗ್ಯೂ, ಲೋಕಸಭಾಧ್ಯಕ್ಷೆಯ ಭದ್ರತಾ ಅಗತ್ಯವನ್ನು ಪರಿಗಣಿಸಿ ಜಾಗ್ವಾರ್ ಕಾರನ್ನು ಖರೀದಿಸಲಾಗಿದೆಯೆಂದು ಲೋಕಸಭಾ ಕಾರ್ಯಾಲಯ ಸ್ಪಷ್ಟಪಡಿಸಿದೆ.
ದೇಶದ ಮೂರನೆ ಒಂದರಷ್ಟು ಭಾಗ ತೀವ್ರ ಕೃಷಿ ಬಿಕ್ಕಟ್ಟಿನಲ್ಲಿರುವಾಗ ಅಂತಹ ವಾಹನ ಉಪಯೋಗಿಸುವುದು ವಿಶೇಷವಾದೀತೇ ಎಂದು ನಿರ್ಧರಿಸುವುದು ಮಹಾಜನ್‌ರಿಗೆ ಬಿಟ್ಟ ವಿಷಯವೆಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಹೇಳಿದ್ದಾರೆ.
ಭದ್ರತಾ ಕಾರಣಕ್ಕಾಗಿ ಸಲಹೆ ನೀಡಲಾಗಿದ್ದ 4-5 ವಾಹನಗಳಲ್ಲಿ ಜಾಗ್ವಾರ್ ಅತಿ ಕಡಿಮೆಯ ಕಾರಾಗಿತ್ತು ಎಂದು ಲೋಕಸಭಾ ಕಾರ್ಯಾಲಯದ ಕಾರ್ಯದರ್ಶಿ ಡಿ.ಭಲ್ಲಾ ಈ ವಿಷಯವನ್ನು ಹಗುರಾಗಿಸಿದ್ದಾರೆ.