×
Ad

ವೇಮುಲಾ ಆತ್ಮಹತ್ಯೆ: ಸ್ಮಾರಕ ಟೆಂಟ್‌ಗಳನ್ನು ತೆರವುಗೊಳಿಸಿದ ಹೈದರಾಬಾದ್ ವಿ.ವಿ.

Update: 2016-05-28 22:45 IST

 ಹೈದರಾಬಾದ್,ಮೇ 28: ಕಳೆದ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ದಲಿತ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾರ ಸ್ಮರಣಾರ್ಥ ವಿದ್ಯಾರ್ಥಿಗಳು ಸ್ಥಾಪಿಸಿದ್ದ ಟೆಂಟ್‌ಗಳನ್ನು ವಿವಿ ಅಧಿಕಾರಿಗಳು ಶನಿವಾರ ತೆರವುಗೊಳಿಸಿದ ಬಳಿಕ ಹೈದರಾಬಾದ್ ವಿವಿಯಲ್ಲಿ ಪರಿಸ್ಥಿತಿ ಮತ್ತೊಮ್ಮೆ ಬಿಗಡಾಯಿಸಿದೆ.

ವಿವಿಯ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿನ ಎರಡು ಟೆಂಟ್‌ಗಳನ್ನು ನಸುಕಿನ ಎರಡು ಗಂಟೆಯ ಸುಮಾರಿಗೆ ತೆರವುಗೊಳಿಸಿ ವಾಹನದಲ್ಲಿ ಸಾಗಿಸಲಾಗಿದೆ ಎಂದು ಸಾಮಾಜಿಕ ನ್ಯಾಯಕ್ಕಾಗಿ ಜಂಟಿ ಕ್ರಿಯಾ ಸಮಿತಿ(ಜೆಎಸಿ)ಯ ಸದಸ್ಯ ವೈ.ಭಾಸ್ಕರ್ ತಿಳಿಸಿದರು.
ವೇಮುಲಾ ಆತ್ಮಹತ್ಯೆಗೆ ಮುನ್ನ ತಾನು ಇತರ ನಾಲ್ವರು ವಿದ್ಯಾರ್ಥಿಗಳೊಂದಿಗೆ ಧರಣಿ ಕುಳಿತಿದ್ದ ವಿವಿ ಕ್ಯಾಂಪಸ್‌ನಲ್ಲಿಯ ತಾಣವನ್ನು ‘ವೆಲಿವಾಡಾ (ದಲಿತ ಕಾಲನಿ)’ಎಂದು ಬಣ್ಣಿಸಿದ್ದರು. ಅವರ ಆತ್ಮಹತ್ಯೆಯ ಬಳಿಕ ವಿದ್ಯಾರ್ಥಿಗಳು ಅವರ ಸ್ಮರಣಾರ್ಥ ಇಲ್ಲಿ ಟೆಂಟ್‌ಗಳನ್ನು ಸ್ಥಾಪಿಸಿ ವೇಮುಲರ ಚಿತ್ರ,ಪೋಸ್ಟರ್‌ಗಳು ಮತ್ತು ಘೋಷಣೆಗಳನ್ನು ಪ್ರದರ್ಶಿಸಿದ್ದರು.
ಆದರೆ ಸ್ಥಳದಲ್ಲಿರುವ ವೇಮುಲಾರ ಪ್ರತಿಮೆ ಮತ್ತು ಬಿ.ಆರ್.ಅಂಬೇಡ್ಕರ್, ಜ್ಯೋತಿಬಾ ಪುಲೆ ಮತ್ತು ಕಾನ್ಶಿರಾಂ ಅವರ ಚಿತ್ರಗಳಿಗೆ ಅಧಿಕಾರಿಗಳು ಕೈ ಹಚ್ಚಿಲ್ಲ.
ರಜೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಿದ್ದು,ಕ್ಯಾಂಪಸ್‌ನಲ್ಲಿ ಉಳಿದಿರುವ ಸುಮಾರು 40 ವಿದ್ಯಾರ್ಥಿಗಳು ವಿವಿ ಅಧಿಕಾರಿಗಳ ಕ್ರಮವನ್ನು ಪ್ರತಿಭಟಿಸಿ ಧರಣಿಯನ್ನು ನಡೆಸಿದರು.

ಇದು ದಲಿತ ವಿದ್ಯಾರ್ಥಿಗೆ ಮಾಡಿರುವ ಅವಮಾನವಾಗಿದೆ. ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ವಿವಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ನಾವು ಚಿಂತನೆ ನಡೆಸುತ್ತಿದ್ದೇವೆ ಎಂದು ಜೆಎಸಿ ಸದಸ್ಯರೋರ್ವರು ತಿಳಿಸಿದರು.
ಕ್ಯಾಂಪಸ್‌ನಲ್ಲಿಯ ಟೆಂಟ್‌ಗಳು ಮತ್ತು ಸ್ಮಾರಕವನ್ನು 48 ಗಂಟೆಗಳಲ್ಲಿ ತೆರವುಗೊಳಿಸುವಂತೆ ವಿವಿ ಆಡಳಿತವು ಮೇ 20ರಂದು ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಪಿ.ಝುಹೈಲ್ ಅವರಿಗೆ ನೋಟಿಸ್ ನೀಡಿತ್ತು. ವಿದ್ಯಾರ್ಥಿ ನಾಯಕರು ರಜೆಯಲ್ಲಿ ತೆರಳಿರುವುದರಿಂದ ಅದನ್ನು ಸ್ವೀಕರಿಸಲು ವಿದ್ಯಾರ್ಥಿಗಳು ನಿರಾಕರಿಸಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News