×
Ad

ಎಸಿಬಿಯಿಂದ ಭುಜಬಲ್ ಸಹಿತ 11 ಜನರ ವಿರುದ್ಧ ಪ್ರಕರಣ ದಾಖಲು

Update: 2016-05-28 22:46 IST

ಮುಂಬೈ, ಮೇ 28: 203 ಕೋ.ರೂ.ಅಕ್ರಮ ಸಂಪತ್ತು ಗಳಿಕೆ ಆರೋಪದಲ್ಲಿ ಮಹಾರಾಷ್ಟ್ರದ ಮಾಜಿ ಉಪ ಮುಖ್ಯಮಂತ್ರಿ ಛಗನ್ ಭುಜಬಲ್ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರು ಸೇರಿದಂತೆ ಇತರ 11 ಜನರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಬಿ)ವು ಗುರುವಾರ ಹೊಸದಾಗಿ ಪ್ರಕರಣವೊಂದನ್ನು ದಾಖಲಿಸಿದೆ.

ಭುಜಬಲ್ ಜೊತೆಗೆ ಅವರ ಪತ್ನಿ ಮೀನಾ,ಪುತ್ರ ಪಂಕಜ್,ಸೊಸೆ ವಿಶಾಖಾ ಮತ್ತು ಸೋದರನ ಪುತ್ರ ಸಮೀರ್ ಅವರು ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಲೆಕ್ಕಪರಿಶೋಧಕರಾದ ಸುನಿಲ್ ನಾಯ್ಕ ಮತ್ತು ಚಂದ್ರಶೇಖರ ಸರ್ದಾ,ಹವಾಲಾ ಏಜಂಟ್ ಸುರೇಶ ಜಜೋಡಿಯಾ,ಭುಜಬಲ್‌ಗೆ ಸೇರಿದ ಕಂಪೆನಿಗಳ ನಿರ್ದೇಶಕರಾದ ಪ್ರವೀಣ ಕುಮಾರ ಜೈನ್ ಮತ್ತು ಜಗದೀಶ ಪ್ರಸಾದ ಪುರೋಹಿತ್,ಹಣಕಾಸು ಸಲಹೆಗಾರ ಸಂಜೀವ ಜೈನ್ ಮತ್ತು ಸ್ನೇಹಲ್ ಕೋ-ಆಪರೇಟಿವ್ ಲಿ.ನ ಮುಖ್ಯ ಆಡಳಿತ ನಿರ್ದೇಶಕ ಕಪಿಲ್ ಪುರಿ ಅವರು ಇತರ ಆರೋಪಿಗಳಾಗಿದ್ದಾರೆ.
 ಸೆಂಟ್ರಲ್ ಲೈಬ್ರರಿ ಹಗರಣ ಮತ್ತು ಮಹಾರಾಷ್ಟ್ರ ಸದನ ಹಗರಣ ಪ್ರಕರಣಗಳಲ್ಲಿ ಭುಜಬಲ್ ವಿರುದ್ಧದ ವಂಚನೆ,ಫೋರ್ಜರಿ ಮತ್ತು ಭ್ರಷ್ಟಾಚಾರ ಪ್ರಕರಣಗಳ ಸಂದರ್ಭದಲ್ಲಿ ಅಕ್ರಮ ಸಂಪತ್ತು ಪತ್ತೆಯಾದ ಹಿನ್ನೆಲೆಯಲ್ಲಿ ಎಸಿಬಿ ಈ ಪ್ರಕರಣವನ್ನು ದಾಖಲಿಸಿದೆ.
ಭುಜಬಲ್ ಅವರ ನಿವಾಸಗಳು ಮತ್ತು ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದ ಸಂದರ್ಭ ಎಸಿಬಿಯು ಮುಂಬೈ,ಪುಣೆ, ಲೋನಾವಳ ಮತ್ತು ನಾಸಿಕ್‌ಗಳಲ್ಲಿ ಅವರು ಹೊಂದಿರುವ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು ಎಂದು ಪೊಲೀಸ್ ಅಧಿಕಾರಿತಿಳಿಸಿದರು.
ಭುಜಬಲ್ ಅವರು ಕಪ್ಪುಹಣವನ್ನು ಸಕ್ರಮಗೊಳಿಸಲು ತನ್ನ ಕುಟುಂಬ ಸದಸ್ಯರ ಜೊತೆ ಬೋಗಸ್ ಕಂಪೆನಿಗಳನ್ನು ಆರಂಭಿಸಿದ್ದರು ಎಂದು ತನಿಖಾ ತಂಡವು ಹೇಳಿದೆ.
ಬಹುಕೋಟಿ ರೂ.ಗಳ ಮಹಾರಾಷ್ಟ್ರ ಸದನ ನಿರ್ಮಾಣ ಹಗರಣಕ್ಕೆ ಸಂಬಂಧಿಸಿದಂತೆ ಎಸಿಬಿಯು ಈ ವರ್ಷದ ಫೆಬ್ರವರಿಯಲ್ಲಿ ಭುಜಬಲ್ ಮತ್ತು ಸಮೀರ್ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿದ್ದು.ಬಳಿಕ ಜಾರಿ ನಿರ್ದೇಶನಾಲಯವು ಇಬ್ಬರನ್ನೂ ಬಂಧಿಸಿತ್ತು. ಸದ್ಯ ಅವರಿಬ್ಬರೂ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News