ಅನನ್ಯ ಪ್ರತಿಭೆಯ ಆತ್ಮಪ್ರತ್ಯಯ
ಮಾತನಾಡಬಾರದೇನೊ ಮಾರಮಣನೆ...
-ಚಂದನ ವಾಹಿನಿಯಲ್ಲಿ ಹಾಡೊಂದು ಸುಶ್ರಾವ್ಯವಾಗಿ ಕೇಳಿಬರುತ್ತಿತ್ತು. ಸಾಧನಾಕಟ್ ಕೇಶಶೃಂಗಾರದಿಂದ ಕಂಗೊಳಿಸುತ್ತಿದ್ದ ವಿದುಷಿ ತನ್ಮಯವಾಗಿ ಹಾಡುತ್ತಿದ್ದರು. ರಚನೆ:ಬೆಂಗಳೂರು ನಾಗರತ್ನಮ್ಮ ಎಂಬ ಅಡಿಬರಹವಿತ್ತು.
ಹಾಡು ಮತ್ತು ಗಾಯನದಲ್ಲಿನ ವಿರಹದ ಧ್ವನಿಲಯಗಳು ಗೋಕುಲ ನಿರ್ಗಮನದ ರಾಧೆ, ಗೋಪಿಯರ ಚಿರವಿರಹವನ್ನು, ಜಯದೇವನ ‘ಗೀತ ಗೋವಿಂದ’ದ ರಾಧೆಯ ವಿರಹವನ್ನು ನೆನಪಿಗೆ ತಂದು ಮನಸ್ಸು ಆರ್ದ್ರಗೊಂಡಿತು. ಜೊತೆಗೆ ಸುಪ್ತಪ್ರಜ್ಞೆಯಲ್ಲಿ ಅಡಗಿದ್ದ, ಡಿವಿಜಿಯವರ ‘ಜ್ಞಾಪಕಚಿತ್ರ ಶಾಲೆ’ಯೋ ಅಥವಾ ಎಲ್ಲೊ ಓದಿದ ಬೆಂಗಳೂರು ನಾಗರತ್ನಮ್ಮ ಮತ್ತು ನರಹರಿ ರಾಯರ ಹೆಸರುಗಳ ನೆನಪು... ಒಂದು ತೆರೆನ ಗುಂಗು. ಈ ಗುಂಗಿನಲ್ಲಿರುವಾಗಲೇ, ಒಂದೆರಡು ದಿನಗಳ ಆಸುಪಾಸಿನಲ್ಲಿ ವೃತ್ತಿ ಬಂಧು ಆರ್. ಪೂರ್ಣಿಮಾ ನನ್ನ ಕೈಯ್ಯಲ್ಲಿ ಎರಡು ಪುಸ್ತಕಗಳನ್ನಿಟ್ಟರು. ಆ ಪುಸ್ತಕಗಳು:1.ಬೆಂಗಳೂರು ನಾಗರತ್ನಮ್ಮ 2.ಮನದೊಳಗಿನ ಸುಪ್ರಭಾತ ಎಂ.ಎಸ್.ಸುಬ್ಬುಲಕ್ಷ್ಮೀ. ಲೇ: ಜಗದೀಶ್ ಕೊಪ್ಪ.
ಪುಸ್ತಕಗಳನ್ನು ಕಂಡದ್ದೇ ನನಗೆ ಅರಸುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತಾಯಿತು. ಸ್ವತ: ಸಂಗೀತ ವಂಶಜೆಯಾದ ಪೂರ್ಣಿಮಾ ಈಚಿನ ದಿನಗಳಲ್ಲಿ ಪುಸ್ತಕ ಪ್ರಕಾಶನದಲ್ಲಿ ಉತ್ಸುಕರಾಗಿ ತಮಗೆ ಪ್ರಿಯವಾದ ಸಂಗೀತ ಸಾಧಕರ ಕೃತಿಗಳ ಪ್ರಕಟಣೆಯಲ್ಲಿ ಆಸಕ್ತಿ ತಳೆದಿರುವುದು ಕಂಡು ಹಿತವೆನಿಸಿತು.
ಕನ್ನಡದಲ್ಲಿ ರಾಣಿ ಅಬ್ಬಕ್ಕದೇವಿ, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವರಂಥ ವೀರಾಗ್ರಣಿ ಮಹಿಳೆಯರ ಚಾರಿತ್ರಿಕ ಸಂಕಥನಗಳಿವೆ. ಆದರೆ ಸಾಂಸ್ಕೃತಿಕ ಕ್ಷೇತ್ರದ ವೀರವನಿತೆಯರ ಸಂಕಥನಗಳು ಕಡಿಮೆ. ಜಗದೀಶ ಕೊಪ್ಪ ಅವರ ‘ಬೆಂಗಳೂರು ನಾಗರತ್ನಮ್ಮ’ ಅಂಥ ವೀರ ವಿದುಷಿಯೊಬ್ಬಳ ಸಂಗೀತ ಸಂಕಥನ. ಮೇಲ್ನೋಟದ ಓದಿಗೆ ಇದೊಂದು ದೇವದಾಸಿ/ಮಹಾವೇಶ್ಯೆ ಎಂಬ ಹಣೆಪಟ್ಟಿ ಹಚ್ಚಲಾದ ಗಾಯಕಿ/ನರ್ತಕಿಯೊಬ್ಬಳ ಜೀವನ ಚರಿತ್ರೆ ಎಂದು ತೋರಬಹುದಾದರೂ ಆಂತರ್ಯದಲ್ಲಿ ಇದೊಂದು ಉಡಿಯಲ್ಲಿ ನೋವು-ತಲ್ಲಣಗಳ ಬೆಂಕಿಯನ್ನು ಕಟ್ಟಿಕೊಂಡಿರುವ ಕರ್ನಾಟಕ ಸಂಗೀತ ಸಾಂಸ್ಕೃತಿಕ ಗಾಥೆ.
ಈ ಸಾಂಸ್ಕೃತಿಕ ಸಂಕಥನದ ನಾಯಕಿ, ಬೆಂಗಳೂರು ನಾಗರತ್ನಮ್ಮ. ಈಕೆ ಸಂಗೀತ ವಿದುಷಿ, ನಾಟ್ಯ ಪ್ರವೀಣೆ, ಹರಿಕಥೆಯಲ್ಲೂ ಸೈ. ಆದರೆ ‘ದೇವದಾಸಿ’ ಎಂಬ ಪೂರ್ವಪ್ರತ್ಯಯ ಈ ತಾಯಿಯ ವ್ಕಕ್ತಿತ್ವಕ್ಕೆ ಅಂಟಿದ ಮಾಲಿನ್ಯ. ದೇವದಾಸಿ-ದೇವರ ಸೇವೆಗೆ ಮುಡುಪಾದವಳು ಎಂಬ ನೆಪದಲ್ಲಿ ಅಸಹಾಯಕ ಹೆಣ್ಣಮಕ್ಕಳನ್ನು ಪುರುಷ ಪ್ರಧಾನ ಸಮಾಜ ಶೋಷಿಸುತ್ತಿದ್ದ ಅನಾಗರಿಕ ಪದ್ಧತಿ. ನಾಗರತ್ನಮ್ಮ ಅಂಥ ಕೌಟುಂಬಿಕ ಹಿನ್ನೆಲೆಯುಳ್ಳವರು. ದೇವರಲ್ಲಿ ಅಚಲ ಭಕ್ತಿ, ಸಂಗೀತದಲ್ಲಿ ಅಪಾರ ಶ್ರದ್ಧ್ಧೆೆ ಇದ್ದವರು. ಗುರು ದೇವೋಭವ ಎಂದು ನಂಬಿದವರು. ಈ ಕಲಾವಿದೆ ಕಲೆಯ ಉಳಿವಿಗಾಗಿ, ಶೋಷಣೆಗೀಡಾದ ಸಮುದಾಯದ ಉಳಿವಿಗಾಗಿ ‘ದೇವದಾಸಿ’ಯರ ಪರ ಹೋರಾಡಬೇಕಾಗಿ ಬಂದುದು ಇತಿಹಾಸದ ವ್ಯಂಗ್ಯ.
ನಂಜನಗೂಡು ನಾಗರತ್ನಮ್ಮನವರು ಹುಟ್ಟಿದೂರು (ಜನನ: ಕ್ರಿ.ಶ.1878 ನವೆಂಬರ್). ಶ್ರೀಕಂಠೇಶ್ವರ ದೇವಾಲಯದಲ್ಲಿ ನರ್ತಕಿಯಾಗಿ ಸೇವೆ ಸಲ್ಲಿಸುತ್ತಿದ್ದ ತಾಯಿ ಶ್ರೀಮತಿ ಪುಟ್ಟಲಕ್ಷ್ಮಮ್ಮ ದೇವದಾಸಿ, ಆ ಪಟ್ಟಣದ ಪ್ರತಿಷ್ಠಿತರೊಬ್ಬರ ಉಪಪತ್ನಿ. ಈ ತಾಯಿಗೆ ಮಗಳನ್ನು ಗಾಯನ ಕೋಗಿಲೆಯಾಗಿ ಮಾಡುವ ಮಹದಾಶೆ. ಬುದ್ಧಿವಂತಳು ಸೂಕ್ಷ್ಮಮತಿಯೂ ಆದ ನಾಗರತ್ನಳ ಕಲಿಕೆಯ ಪ್ರಗತಿ ಕಂಡು ಕರುಬಿದ ಮೇಲ್ಜಾತಿಯವರು ಗುರು ಗಿರಿ ಭಟ್ಟರ ಕಿವಿ ಕಚ್ಚಿದರು. ನಿನ್ನ ಮಗಳು ನಾಗರತ್ನ ಮೈಸೂರು ಬೀದಿಯಲ್ಲಿ ಸಗಣಿ ಬಾಚುವುದಕ್ಕೇ ಲಾಯಕ್ಕು ಎಂದು ಗುರುಗಳು ಶಿಷ್ಯೆಯನ್ನು ತಿರಸ್ಕರಿಸಿದಾಗ, ‘‘ನನ್ನ ಮಗಳನ್ನು ವಿದುಷಿಯನ್ನಾಗಿ ಮಾಡಿ, ಇದೇ ಮೈಸೂರು ಸಂಸ್ಥಾನದ ದೊರೆಗಳಿಂದ ಕಪ್ಪಕಾಣಿಕೆ ಪಡೆಯುವವರೆಗೆ ನಾನು ಮತ್ತು ನನ್ನ ಮಗಳು ಮೈಸೂರು ನಗರಕ್ಕೆ ಕಾಲಿಡುವುದಿಲ್ಲ’’ ಎಂದು ಶಪಥ ಮಾಡಿದ ತಾಯಿ ಮಗಳಿಗೆ ಶಿಕ್ಷಣ ಕೊಡಿಸಲು ಕಾಂಚೀಪುರಂನತ್ತ ಪಯಣ ಬೆಳೆಸುತ್ತಾರೆ. ಮುಂದಿನದೆಲ್ಲ ಬೆಂಗಳೂರು ನಾಗರತ್ನಳಾಗಿ ಬೆಳೆದ ಧೀರೋದ್ಧಾತ್ತ ಮಗಳ ಯಶೋಗಾಥೆಯೇ ಸರಿ.
ಸಂಗೀತ, ನೃತ್ಯ, ಹರಿಕಥೆಗಳಲ್ಲಿ ಅಸಾಧಾರಣವಾದ ಪ್ರತಿಭೆೆ ಮತ್ತು ಅಷ್ಟೇ ಅಸಾಧಾರಣವಾದ ಆತ್ಮಪ್ರತ್ಯಯ, ಆತ್ಮಶಕ್ತಿ ನಾಗರತ್ನ ಅವರ ವ್ಯಕ್ತಿತ್ವದ ಎರಡು ದಿವ್ಯ ಲಕ್ಷಣಗಳು. ಆ ಕಾಲಕ್ಕೆ ಮದ್ರಾಸಿನ ಪ್ರಸಿದ್ಧ ಗಾಯಕಿಯಾಗಿದ್ದ ವೀಣಾ ಧನಮ್ಮಾಳ್ ಆಶ್ರಯ ಪಡೆದು ಸೌಂದರ್ಯದ ಜೊತೆಗೆ ಸಂಗೀತ, ನೃತ್ಯಗಳ ಮೂಲಕ ಪ್ರವರ್ಧಮಾನಕ್ಕೆ ಬಂದ ನಾಗರತ್ಮಮ್ಮ, ‘ನಿತ್ಯ ಕಲ್ಯಾಣಿ’ಯಲ್ಲಿ, ‘ಮುಕುಂದಮಾಲ ಸರಣಿ ಶ್ಲೋಕಗಳಲ್ಲಿ’ ಹಾಗೂ ದಾಸರ ಪದಗಳ ಗಾಯನದಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕರ್ನಾಟಕ ಸಂಗೀತದ ಅನಭಿಷಕ್ತ ಸಾಮ್ರಾಟಳಾಗಿ ಮೆರೆದರು.
ಇದು ನಾಗರತ್ನಮ್ಮನವರ ಅನನ್ಯ ಪ್ರತಿಭೆಯ ಅಸದೃಶ ಮುುಖವಾಯಿತು. ಅವರ ವ್ಕಕ್ತಿತ್ವದ ದಿವ್ಯಲಕ್ಷಣವೂ ಆತ್ಮಪ್ರತ್ಯಯದ ಸಂಕೇತವೂ ಆಗಿ ಎದ್ದು ಕಾಣುವುದು ಅವರಲ್ಲಿನ ಕಲಾ ಶ್ರದ್ಧೆ, ದೇವರು-ಗುರುಗಳಲ್ಲಿನ ಭಕ್ತಿ, ಅಸಮತೆ-ಅನ್ಯಾಯಗಳ ವಿರುದ್ಧ ಹೋರಾಟದ ಛಲ ಮತ್ತು ಸಮಾಜದ ಸಮಷ್ಠಿಹಿತದಲ್ಲಿನ ವಿನಮ್ರತೆಯಲ್ಲಿ. ಈ ಮಾತಿಗೆ ನಿದರ್ಶನವಾಗಿ ಅವರ ಜೀವನಕ್ರಮದಲ್ಲೇ ಅಂತರ್ಗತವಾಗಿ ಬಂದಿರುವ ಮೂರು ಬೆಳವಣಿಗೆಗಳು ಗಮನಾರ್ಹವಾದವು. ಇವು ವ್ಯಕ್ತಿಗತ ಸ್ವಾತಂತ್ರ್ಯ ಮತ್ತು ಸಮಾಜವನ್ನು ಮುಖಾಮುಖಿಯಾಗಿಸಿ, ಜೀವನ ಚರಿತ್ರೆಯೊಂದಕ್ಕೆ ಸಮಾಜೋಮಾನವ ಶಾಸ್ತ್ರೀಯ ವಿನ್ಯಾಸ ತಂದುಕೊಟ್ಟಿರುವ ಬೆಳವಣಿಗೆಗಳು. ‘ರಾಧಿಕಾ ಸಾಂತ್ವನಮು’ ಎನ್ನುವ ಹದಿನೆಂಟನೆ ಶತಮಾನದ ಶೃಂಗಾರ ಕಾವ್ಯವೊಂದರ ಸಂಪಾದನೆ; ದೇವದಾಸಿ ಪದ್ಧತಿ ನಿಷೇಧಕ್ಕೆ ಆಗ್ರಹ ಹೆಚ್ಚಿದಾಗ ಅನಿವಾರ್ಯವಾಗಿ ದೇವದಾಸಿಯರ ಪರ ನಿಲ್ಲಬೇಕಾದ ಪ್ರಸಂಗ ಮತ್ತು ತ್ಯಾಗರಾಜರ ಸಮಾಧಿಯ ಜೀರ್ಣೋದ್ಧಾರ/ಮಂದಿರ ನಿರ್ಮಾಣ/ವಾರ್ಷಿಕ ಪುಣ್ಯ ತಿಥಿ/ಸಂಗೀತೋತ್ಸವ ವಿವಾದ-ಈ ಮೂರು ಪ್ರಕರಣಗಳು ಸಮಾಜದ ಸ್ಥಾಪಿತ ವೌಲ್ಯಗಳ ವಿರುದ್ಧ ಹೋರಾಟ ನಡೆಸಿದ ನಾಗರತ್ನಮ್ಮನವರ ಆತ್ಮಪ್ರತ್ಯಯ ಮತ್ತು ಆತ್ಮಬಲಗಳನ್ನು ಬೆಳಕಿಗೊಡ್ಡುತ್ತವೆ. ಈ ಹೋರಾಟದ ಪ್ರಕ್ರಿಯೆಯಲ್ಲಿ ಪುರುಷಪ್ರಧಾನ ಸಮಾಜದ ಕುರೂಪಗಳೂ ಬಯಲಾಗುತ್ತವೆ.
ತಂಜಾವೂರನ್ನು ಆಳಿದ ಮರಾಠ ದೊರೆ ಪ್ರತಾಪ ಸಿಂಹನ ಆಸ್ಥಾನದಲ್ಲಿ ನರ್ತಕಿಯಾಗಿದ್ದ ದೇವದಾಸಿಯೊಬ್ಬಳ ಪುತ್ರಿಯಾದ ಮುದ್ದುಪಳಿನಿ ಎಂಬಾಕೆ ರಚಿಸಿದ ಶೃಂಗಾರ ಪ್ರಧಾನ ‘ರಾಧಿಕಾ ಸಾಂತ್ವನಮು’ ಕೃತಿಯನ್ನು ನಾಗರತ್ನಮ್ಮ ಸಂಪಾದಿಸಿ ಪರಿಷ್ಕರಿಸಿ ಪ್ರಕಟಿಸಿದಾಗ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಪುಟ್ಟ ಕೋಲಾಹಲವೇ ಅಗುತ್ತದೆ. ಮಡಿವಂತರು ಅದು ಆಶ್ಲೀಲ ಕಾವ್ಯ, ಮುದ್ದುಪಳಿನಿ ಶೃಂಗಾರ ರಸವನ್ನು ನೆಪವಾಗಿಟ್ಟುಕೊಂಡು ಲೈಂಗಿಕತೆಯ ಹಸಿಬಿಸಿ ಅನುಭವಗಳನ್ನು ಈ ಕಾವ್ಯದಲ್ಲಿ ತುಂಬಿದ್ದಾಳೆ ಎಂದು ಹರಿಹಾಯ್ದರು. ಆ ಕಾಲದ ಸಮಾಜ ಸುಧಾರಣೆ ಚಳವಳಿಯ ಮುಂಚೂಣಿಯಲ್ಲಿದ್ದ ತೆಲುಗಿನ ಪ್ರಸಿದ್ಧ ಕಾದಂಬರಿಕಾರ ವೀರೇಶಲಿಂಗಮ್‌ಪಂತುಲು ನಾಗರತ್ನಮ್ಮನವರ ವಿರುದ್ಧ ತಿರುಗಿಬಿದ್ದರು. ಕೃತಿಯನ್ನು ಮುಟ್ಟುಗೋಲು ಹಾಕುವಂತೆ ಸರಕಾರಕ್ಕೆ ದೂರು ಹೋಯಿತು. ಅಶ್ಲೀಲದ ಆರೋಪಗಳಿಗೆಲ್ಲ ನಾಗರತ್ನಮ್ಮ ದಿಟ್ಟತನದಿಂದ ಉತ್ತರಿಸುತ್ತಾರೆ. ಪಂತುಲು ಅವರ ‘ತಾರಾಶಶಾಂಕ ವಿಜಯಮು’,‘ವೈಜಯಂತಿ ವಿಲಾಸಮು’ ಮೊದಲಾದ ಕೃತಿಗಳಲ್ಲಿರುವುದಕ್ಕಿಂತ ಹೆಚ್ಚು ಅಶ್ಲೀಲವೂ ನಿಂದನೀಯವಾದವು ‘ರಾಧಿಕಾ ಸಾಂತ್ವನಮು’ ಕೃತಿಯಲ್ಲಿ ಇವೆಯಾ? ನಾಚಿಕೆ ಅಥವಾ ಲಜ್ಜೆ ಎನ್ನುವುದು ಸ್ತ್ರೀಯರಿಗೆ ಮಾತ್ರವೇ ಹೊರತು ಅದು ಪುರುಷರಿಗೆ ಅಲ್ಲ ಎನ್ನುವುದು ಅತಾರ್ಕಿಕವಾದುದು. ಮುದ್ದುಪಳಿನಿ ಮುಕ್ತವಾಗಿ ಶೃಂಗಾರರಸವನ್ನು ವರ್ಣಿಸಿದರೆ ಅದು ಲಜ್ಜೆಗೇಡಿತನ. ಆದರೆ ಪುರುಷರು ಅದನ್ನು ಬರೆದರೆ ಶೃಂಗಾರ ಕಾವ್ಯವೇ? ‘ವೈಜಯಂತಿ ವಿಲಾಸಮು’ ಕೃತಿಯಲ್ಲಿನ ಮನ್ಮಥಲೀಲಾ ವಿಲಾಸವು ‘ರಾಧಿಕಾ ಸಾಂತ್ವನಮು’ ಕೃತಿಯನ್ನು ಮೀರಿಸುವಂತಿದೆ ಎಂದು ಸಡ್ಡುಹೊಡೆದು ನಿಲ್ಲುತ್ತಾರೆ. ಅಂತಿಮವಾಗಿ ‘ರಾಧಿಕಾ ಸಾಂತ್ವನಮು’ ಒಂದು ಅಭಿಜಾತ ಕಾವ್ಯವಾಗಿ ಜಯ ಸಾಧಿಸುತ್ತೆ. ಈ ಪ್ರಕರಣದಲ್ಲಿ ಕಲಾಸಕ್ತ ಸ್ತ್ರೀಯರ ಬಗೆಗಿನ ಸಮಾಜದ ಪೂರ್ವಾಗ್ರಹಗಳು, ಕೊಳಕು ಮನಸ್ಸುಗಳು ಬೆಂಗಳೂರು ನಾಗರತ್ನಮ್ಮ ಮದ್ರಾಸ್ ನಗರದ ಪ್ರಖ್ಯಾತ ವೇಶ್ಯೆ ಎಂಬಂಥ ಆರೋಪಗಳಲ್ಲಿ ರಟ್ಟಾಗುತ್ತವೆ. ಹದಿನೆಂಟು ಹತ್ತೊಂಬತ್ತನೆ ಶತಮಾನದ ಭಾರತದಲ್ಲಿ ಒಂದು ಸಾಮಾಜಿಕ ಪಿಡುಗಾಗಿದ್ದ ದೇವದಾಸಿ ಪದ್ಧತಿ ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೂಪಗಳಲ್ಲಿತ್ತು. ತಳಸಮುದಾಯದ ಹೆಣ್ಣಮಕ್ಕಳೇ ಬಲಿಪಶುಯಾಗುತ್ತಿದ್ದ ಈ ಪದ್ಧತಿ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಬೇರೆಯದೇ ಸ್ವರೂಪದ್ದಾಗಿತ್ತು. ಇಲ್ಲಿ ಬ್ರಾಹ್ಮಣ ಸಮುದಾಯದ ಹೆಣ್ಣುಮಕ್ಕಳನ್ನೂ ದೇವಾಲಯಗಳಿಗೆ ದತ್ತು ಪಡೆದುಕೊಂಡು ಅವರನ್ನು ದೇವದಾಸಿ ವೃತ್ತಿಗೆ ಹಚ್ಚುವ ಪರಿಪಾಠವಿತ್ತು. ಈ ಅಮಾಯಕ ಹೆಣ್ಣುಮಕ್ಕಳೆಲ್ಲ ಕೊನೆಗೆ ಸಮಾಜದ ಪ್ರತಿಷ್ಠಿತ ಶ್ರೀಮಂತರ ಉಪಪತ್ನಿಯರಾಗಿ ಬದುಕು ಸವೆಸಬೇಕಾಗುತ್ತಿತ್ತು. ಇದರ ವಿರುದ್ಧ ಭಾರತದಾದ್ಯಂತ ಚಳವಳಿ ಶುರುವಾದಾಗ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ದೇವದಾಸಿಯರ ಉದರಂಭರಣ ಮಾರ್ಗವೂ ಮುಚ್ಚುವಂಥ ಪರಿಸ್ಥಿತಿ ನಿರ್ಮಾಣವಾಯಿತು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ನಾಗರತ್ನಮ್ಮನವರು, ದೇವದಾಸಿಯರೆಂದರೆ ದೇವರ ಅಡಿಯಾಳುಗಳು ಎಂದು ಸರಕಾರ/ನ್ಯಾಯಾಲಯಗಳ ಮೊರೆಹೊಕ್ಕರು. ದೇವದಾಸಿಯೊಬ್ಬಳ ಮಗಳಾದ ಡಾ.ಮುತ್ತುಲಕ್ಷ್ಮೀ ಈ ಹೋರಾಟದಲ್ಲಿ ಜಯಗಳಿಸಿದಾಗ, ದೇವದಾಸಿಯರನ್ನು ಸಮಾಜದ ಸಾಮಾನ್ಯ ವೇಶ್ಯೆಯರ ಜೊತೆ ಸಮೀಕರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ನಾವು ದೇವರ ಸೇವೆ ಮತ್ತು ಸಂಗೀತ ಮತ್ತು ನೃತ್ಯ ಸೇವೆಗಳಿಗಾಗಿ ಬದುಕನ್ನು ಮುಡುಪಾಗಿಟ್ಟ ಪ್ರತ್ಯೇಕ ಸಮುದಾಯ ಎಂದು ಸಮಾಧಾನಪಟ್ಟುಕೊಳ್ಳಬೇಕಾಯಿತು. ಈ ಹೋರಾಟ ಪ್ರಕ್ರಿಯೆಯಲ್ಲಿನ ವಿವರಗಳು ಸಮಾಜ ಶಾಸ್ತ್ರೀಯ ಅಧ್ಯಯನಯೋಗ್ಯವಾಗಿವೆ.
ನಾಗರತ್ನಮ್ಮನವರ ಸಾಧನೆಯ ಶೃಂಗ ಸಂತ ವಾಗ್ಗೇಯಕಾರ ತ್ಯಾಗರಾಜರ ಸಮಾಧಿಯ ಜೀರ್ಣೋದ್ಧಾರ ಮತ್ತು ಅವರ ಪೂಜಾ ಮಂದಿರ ನಿರ್ಮಾಣ. ಭಕ್ತಿಪೂರ್ವಕವಾಗಿ ತನುಮನಧನವನ್ನು ಇದಕ್ಕೆ ಅರ್ಪಿಸುತ್ತಾರೆ. ಮನೆ ಇತ್ಯಾದಿ ಸ್ಥಿರಚರಾಸ್ತಿಗಳನ್ನು -ತಾಯಿಯ ಶಪಥದ ಸಾಕ್ಷಾತ್ಕಾರದಂತಿದ್ದ ಮೈಸೂರು ಅರಸರು ಕೊಟ್ಟಿದ್ದ ಚಿನ್ನದ ಬಳೆಗಳನ್ನೂ-ಮಾರಾಟಮಾಡಿ ಜೀರ್ಣೋದ್ಧಾರ ಕಾರ್ಯ ಮುಗಿಸುತ್ತಾರೆ. ಇದು ಕೇವಲ ಸಮಾಧಿಯ ಜೀರ್ಣೋದ್ಧಾರ ಕಾರ್ಯವಾಗಿರದೆ ತ್ಯಾಗರಾಜರ ಸಂಗೀತದ ಜೀರ್ಣೋದ್ಧಾರವೂ ಅಗುತ್ತದೆ. ಮಂದಿರದಲ್ಲಿ ಪೂಜೆ, ವಾರ್ಷಿಕ ಸಂಗೀತೋತ್ಸವಗಳು ಆರಂಭವಾಗುತ್ತವೆ. ಮಡಿವಂತ ಸಮಾಜದ ಪ್ರತಿರೋಧ ಮತ್ತು ಅಡೆತಡೆಗಳ ಮಧ್ಯೆಯೂ ಎದೆಗುಂದದೆ ನಾಗರತ್ನಮ್ಮನವರು ಇದನ್ನೆಲ್ಲ ಆಗುಮಾಡಿಸುತ್ತಾರೆ. ತ್ಯಾಗರಾಜರ ಪುಣ್ಯತಿಥಿ ಕಾರ್ಯದಲ್ಲಿ ಬ್ರಾಹ್ಮಣೇತರರಿಗೆ ಪಾಲ್ಗೊಳ್ಳುವಿಕೆ ನಿರಾಕರಿಸಲಾಗುತ್ತದೆ. ಬ್ರಾಹ್ಮಣರು ಶ್ರಾದ್ಧದ ಭೋಜನಮಾಡಿ ನಾಗರತ್ನಮ್ಮ ಇರುವ ಸ್ಥಳಕ್ಕೆ ಭೇಟಿಕೊಟ್ಟು ಅವರಿಂದ ದಕ್ಷಿಣೆ ಸ್ವೀಕರಿಸಿ ಹೋಗುತ್ತಾರೆ. ತ್ಯಾಗರಾಜರ ಸಂಗೀತೋತ್ಸವದಲ್ಲಿ ನಾದಸ್ವರ ಕಲಾವಿದರನ್ನು ಅಸ್ಪಶ್ಯರಂತೆ ನಡೆಸಿಕೊಂಡಾಗ ಪ್ರತಿಭಟಿಸುತ್ತಾರೆ. ಅಂದಿನ ಮಡಿವಂತ ಸಮಾಜದ ಎಲ್ಲ ವಿಕಾರಗಳನ್ನು ಲೇಖಕರು ಸವಿವರವಾಗಿ ಚಿತ್ರಿಸಿದ್ದಾರೆ. ಜೀರ್ಣೋದ್ಧಾರ ಪ್ರಕ್ರಿಯೆಯಲ್ಲಿ ನಾಗರತ್ನಮ್ಮ ಸ್ವಂತ ಮನೆಯನ್ನೂ ಮಾರಿ ನಿರ್ವಸತಿಗರಾದಾಗ ತೆಲುಗು ಸಿನೆಮಾ ನಟ ವಿ.ನಾಗಯ್ಯ ಗುರುದಕ್ಷಿಣೆ ರೂಪದಲ್ಲಿ ಅವರಿಗೆ ವಾಸಕ್ಕೆ ಮನೆಯೊಂದನ್ನು ಕಟ್ಟಿಸಿಕೊಡುತ್ತಾರೆ. ‘‘ನಾನು ದೇವದಾಸಿ ಅಂದರೆ ದೇವರ ಅಡಿಯಾಳು...ಈ ಸಮಾಜ ನನ್ನನ್ನು ಕುರಿತು ಯಾವ ಭಾವನೆಯಲ್ಲಿ ನೋಡುತ್ತದೆ ಎಂಬುದು ಯಾವತ್ತೂ ನನಗೆ ಮುಖ್ಯವಾಗಿರಲಿಲ್ಲ. ಅವರವರ ಭಾವಕ್ಕೆ, ಅವರವರ ನೋಟಕ್ಕೆ ಈ ನಾಗರತ್ನಮ್ಮ ವಿಭಿನ್ನವಾಗಿ ಕಂಡಿದ್ದಾಳೆ ಅಷ್ಟೆ’’ ಎನ್ನುವ ಬೆಂಗಳೂರು ನಾಗರತ್ನಮ್ಮನವರನ್ನು ಡಿ.ವಿ.ಜಿ. ‘ರಾಗರತ್ನ-ತ್ಯಾಗರತ್ನವಾಗಿ’ಯೂ ಕಂಡಿದ್ದಾರೆ.
ದೇವದಾಸಿ ಕೌಟುಂಬಿಕ ಹಿನ್ನೆಲೆಯ ವಿಶ್ವವಿಖ್ಯಾತ ಗಾಯಕಿ, ಗಾನ ಕೋಕಿಲೆ ವಿದುಷಿ ಎಂ.ಎಸ್.ಸುಬ್ಬುಲಕ್ಷ್ಮೀಯವರ ಜೀವನ ಚರಿತ್ರೆಯನ್ನು ‘ಬೆಂಗಳೂರು ನಾಗರತ್ನಮ್ಮ’ ಜೀವನ ಚರಿತ್ರೆ ಪಕ್ಕ ಇಟ್ಟು ನೋಡಿದಾಗ, ‘ಎಂಥ ವೈದೃಶ್ಯ!’ ಎಂದು ಉದ್ಗರಿಸುವಂತಾಗುತ್ತದೆ. ತಾಯಿ ರೂಪಿಸುವ ಪಂಜರದಿಂದ ತಪ್ಪಿಸಿಕೊಂಡು ಕೈಹಿಡಿದ ಸದಾಶಿವರ ಪಂಜರಪಕ್ಷಿಯಾಗುವ ಎಂ.ಎಸ್, ಪತಿಯಿಲ್ಲದೆ ‘ತೃಣಮಪಿನಚಲತೆ’ ಎಂದು ನಂಬಿ ಬಾಳಿಬದುಕಿದ ಹಾಡುಹಕ್ಕಿ.
ಸಾಧಕರ ಜೀವನ ಚರಿತ್ರೆ, ಕೇವಲ ವ್ಯಕ್ತಿಯ ಜೀವನ ವೃತ್ತಾಂತವಾಗದೆ ಆ ಕಾಲದ ಸಮಾಜವನ್ನು ಬಿಂಬಿಸುವ ಸಾಮಾಜಿಕ ದಾಖಲೆಯೂ ಆಗುತ್ತದೆ. ಇಂಥ ಪ್ರಯತ್ನದಲ್ಲಿ ಸಫಲರಾಗಿರುವ ಲೇಖಕ ಜಗದೀಶ್ ಕೊಪ್ಪ ಮತ್ತು ಪ್ರಕಾಶಕಿ ಆರ್.ಪೂರ್ಣಿಮಾ ಪ್ರಶಂಸಾರ್ಹರು.
ಭರತ ವಾಕ್ಯ:
ಇದು ಜೀವನ ರಾಗ, ಇದು ಜೀವನ ಸೌಂದರ್ಯ