×
Ad

ಭೂಗತ ಜಗತ್ತಿನ ಸಂಬಂಧ: ಕಾಳ್ಸೆ ವಿರುದ್ಧ ಕ್ರಮಕೈಗೊಳ್ಳಲಾಗದೆ ಕೈ ಹಿಸುಕಿ ಕೊಳ್ಳುತ್ತಿರುವ ಬಿಜೆಪಿ!

Update: 2016-05-29 11:47 IST

ಮುಂಬೈ, ಮೇ 29: ಭ್ರಷ್ಟಾಚಾರ, ಭೂಗತ ಜಗತ್ತಿನೊಂದಿಗೆ ಸಂಬಂಧ ಆರೋಪವನ್ನು ಎದುರಿಸುತ್ತಿರುವ ಮಹಾರಾಷ್ಟ್ರ ಕಂದಾಯ ಸಚಿವ ಏಕನಾಥ್ ಕಾಳ್ಸೆಯಿಂದಾಗಿ ಬಿಜೆಪಿ ನಾಯಕರಲ್ಲಿ ತಲೆನೋವು ಸೃಷ್ಟಿಯಾಗಿದೆ. ನರೇಂದ್ರ ಮೋದಿ ಸರಕಾರ ಎರಡು ವರ್ಷಪೂರ್ತಿಗೊಳಿಸಿದ್ದನ್ನು ಆಚರಿಸಲು ಸಜ್ಜಾಗಿರುವ ಮಹಾರಾಷ್ಟ್ರ ಬಿಜೆಪಿಗೆ ಹಿರಿಯ ನಾಯಕ ಕಾಳ್ಸೆ ವಿರುದ್ಧ ಕೇಳಿ ಬಂದಿರುವ ಆರೋಪ ಬಹು ದೊಡ್ಡ ಹಿನ್ನಡೆಯಾಗಿದೆ.

ಆರೋಪಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಪಕ್ಷದ ಅಧ್ಯಕ್ಷ ಅಮಿತ್ ಶಾ ಪ್ರತಿಕ್ರಿಯಿಸಿದ್ದರೂ ಕಾಳ್ಸೆ ವಿರುದ್ಧ ಕ್ರಮ ಕೈಗೊಳ್ಳಲು ಈವರೆಗೆ ಮುಂದಾಗಿಲ್ಲ. ಇದನ್ನು ಮಹಾರಾಷ್ಟ್ರ ಬಿಜೆಪಿ ನಾಯಕರು ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ರ ನಿರ್ಧಾರಕ್ಕೆ ಬಿಡಲಾಗಿದೆ. ಒಂದು ವೇಳೆ ಏಕನಾಥ್ ಕಾಳ್ಸೆಯ ವಿರುದ್ಧ ಕ್ರಮಕ್ಕೆ ಮುಂದಾದರೆ ಪಕ್ಷ ವಿಭಜನೆಗೊಳ್ಳುವ ಭೀತಿ ಬಿಜೆಪಿಗಿದೆ. ಕಾಳ್ಸೆ ಉತ್ತರ ಮಹಾರಾಷ್ಟ್ರದ ಪ್ರಮುಖ ನಾಯಕನಾಗಿದ್ದು ಸಚಿವ ಸ್ಥಾನದಿಂದ ದೂರವಿಟ್ಟರೆ ಪ್ರತ್ಯಾಘಾತ ಅನುಭವಿಸಬೇಕಾದೀತೆಂದು ಪಕ್ಷ ಹೆದರಿದೆ.

ಪಕ್ಷ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭಾವಿಸಲಾಗಿದ್ದ ಪ್ರಬಲ ದಾವೇದಾರ ಆಗಿದ್ದ ಏಕನಾಥ್ ಕಾಳ್ಸೆಗೆ ಬಿಜೆಪಿ ಪ್ರಮುಖವಾದ ಹತ್ತು ಖಾತೆಗಳನ್ನು ನೀಡಿ ಸಮಾಧಾನ ಪಡಿಸಿತ್ತು. ಪಕ್ಷದ ಬೆಳವಣಿಗೆಯಲ್ಲಿ ದೊಡ್ಡ ಪಾತ್ರ ನಿಭಾಯಿಸಿದ್ದ ಕಾಳ್ಸೆಯನ್ನು ಮೂಲೆಗಿಟ್ಟು ಹೊಸ ತಲೆಮಾರಿನ ದೇವೇಂದ್ರ ಫಡ್ನವೀಸ್‌ರನ್ನು ಪಕ್ಷ ಮುಖ್ಯಮಂತ್ರಿಯನ್ನಾಗಿಸಿತ್ತು. ಸಂಪುಟ ರಚನೆಯ ವೇಳೆ ಕಾಳ್ಸೆಗೆ ರೆವನ್ಯೂ, ಅಬಕಾರಿ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್‌ಬೋರ್ಡ್, ಪ್ರಾಣಿ ಪರಿಪಾಲನೆ, ಹೈನುಗಾರಿಕೆ, ಮೀನುಗಾರಿಕೆ, ಕೃಷಿ ಮುಂತಾದ ಪ್ರಮುಖ ಖಾತೆಗಳನ್ನು ನೀಡಿ ಸಮಧಾನಿಸಲಾಗಿತ್ತು. ಕಾಳ್ಸೆಯನ್ನು ಸಚಿವ ಸ್ಥಾನದಿಂದ ಕಿತ್ತು ಹಾಕುವ ಬದಲು ಸಂಪುಟ ಪುನರ್ರಚನೆ ವೇಳೆ ಅವರ ಕೈಯಲ್ಲಿರುವ ಪ್ರಮುಖ ಖಾತೆಗಳನ್ನು ಕಿತ್ತುಕೊಳ್ಳುವ ಯೋಚನೆಯನ್ನು ಪಕ್ಷ ಹೊಂದಿದೆ ಎನ್ನಲಾಗುತ್ತಿದೆ. ಹೀಗಾದರೆ ಕಂದಾಯ,ಅಬಕಾರಿ ಖಾತೆಗಳು ಕಾಳ್ಸೆಯ ಕೈತಪ್ಪಲಿದೆ. ಭೂ ವ್ಯವಹಾರದಲ್ಲಿ ಕಾಳ್ಸೆ ದಾವೂದ್‌ನೊಂದಿಗೆ ಸಂಬಂಧಹೊಂದಿದ್ದಾರೆ ಎಂದು ಆರೋಪವಿದೆ. ದಾವೂದ್ ಪತ್ನಿ ಮೆಹಜಬೀನ್‌ರ  ನಾಲ್ಕು ನಂಬರ್‌ಗಳಿಂದ ಕಾಳ್ಸೆಯ ಮೊಬೈಲ್‌ಗೆ ಹಲವು ಬಾರಿ ಕರೆಗಳು ಬಂದಿವೆ ಎಂದು ಹಾಕರ್‌ಗಳು ಬಹಿರಂಗಪಡಿಸಿದ್ದರು.

ನಗರದ ಉದ್ಯಮಿಯೊಬ್ಬರಿಂದ ಕಾಳ್ಸೆಯ ಪಿಎ ಮೂವತ್ತು ಕೋಟಿ ರೂಪಾಯಿ ಲಂಚ ಕೇಳಿದ ಆರೋಪ ಎದುರಿಸುತ್ತಿದ್ದಾರೆ. ಈ ಲಂಚ ಪ್ರಕರಣ ಜಮೀನು ವಿಲೇವಾರಿ ವಿಚಾರದಲ್ಲಿ ಆಗಿತ್ತು ಎನ್ನಲಾಗಿದೆ. ಹೀಗೆ ಹಲವು ಆರೋಪಗಳು ಕಾಳ್ಸೆಯ ವಿರುದ್ಧ ಕೇಳಿ ಬಂದಿದ್ದರೂ ಬಿಜೆಪಿ ನಾಯಕತ್ವ ಏನೂ ಮಾಡಲಾಗದ ಸ್ಥಿತಿಯಲ್ಲಿದೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News