ರಾಜ್ಯಸಭಾ ಚುನಾವಣೆ: ಬಿಜೆಪಿಯ ಆರು ಅಭ್ಯರ್ಥಿಗಳ ಪಟ್ಟಿ ಪ್ರಕಟ

Update: 2016-05-30 18:29 GMT

ಹೊಸದಿಲ್ಲಿ,ಮೇ 30: ಬಿಜೆಪಿಯು ರೈಲ್ವೆ ಸಚಿವ ಸುರೇಶ ಪ್ರಭು ಅವರನ್ನು ಆಂಧ್ರಪ್ರದೇಶದಿಂದ ತನ್ನ ರಾಜ್ಯಸಭಾ ಅಭ್ಯರ್ಥಿಯಾಗಿ ಸೋಮವಾರ ನಾಮಕರಣಗೊಳಿಸಿದೆ. ಇದೇ ವೇಳೆ ಖ್ಯಾತ ಪತ್ರಕರ್ತ ಎಂ.ಜೆ.ಅಕ್ಬರ್ ಅವರನ್ನು ಮಧ್ಯಪ್ರದೇಶದಿಂದ ಮತ್ತು ಪಕ್ಷದ ಉಪಾಧ್ಯಕ್ಷ ವಿನಯ ಸಹಸ್ರಬುದ್ಧೆ ಅವರನ್ನು ಮಹಾರಾಷ್ಟ್ರದಿಂದ ತನ್ನ ರಾಜ್ಯಸಭಾ ಅಭ್ಯರ್ಥಿಗಳನ್ನಾಗಿ ಬಿಜೆಪಿ ಹೆಸರಿಸಿದೆ.

ಸೋಮವಾರ ಹೊರಬಿದ್ದಿರುವ ಆರು ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ ಮಾಧವ ಅವರ ಹೆಸರು ಇಲ್ಲ. ಕೆಲವು ದಿನಗಳಿಂದಲೂ ಅವರು ಮೇಲ್ಮನೆಗೆ ತೆರಳಲಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿದ್ದವು. ಶೀಘ್ರವೇ ಪಕ್ಷದ ಪುನರ್‌ರಚನೆ ನಡೆಯಲಿದ್ದು,ರಾಮ ಮಾಧವ ಅವರು ಇನ್ನೂ ದೊಡ್ಡ ಹುದ್ದೆಯನ್ನು ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಮಹಾರಾಷ್ಟ್ರದಿಂದ ವಿಕಾಸ ಮಹಾತ್ಮೆ,ಉತ್ತರ ಪ್ರದೇಶದಿಂದ ಶಿವಪ್ರತಾಪ ಶುಕ್ಲಾ ಮತ್ತು ಜಾರ್ಖಂಡ್‌ನಿಂದ ಮಹೇಶ ಪೋದ್ದಾರ್ ಅವರು ಬಿಜೆಪಿಯ ಪಟ್ಟಿಯಲ್ಲಿರು ವ ಇತರ ಮೂವರು ಅಭ್ಯರ್ಥಿಗಳಾಗಿದ್ದಾರೆ.

ಬಿಜೆಪಿ ತನ್ನ 12 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರವಿವಾರ ಪ್ರಕಟಿಸಿತ್ತು. ರಾಜ್ಯಸಭೆಯ 57 ಸ್ಥಾನಗಳಿಗಾಗಿ ದ್ವೈವಾರ್ಷಿಕ ಚುನಾವಣೆ ಜೂ.11ರಂದು ನಡೆಯಲಿದ್ದು,ಮಂಗಳವಾರ ನಾಮಪತ್ರಗಳನ್ನು ಸಲ್ಲಿಸಲು ಅಂತಿಮ ದಿನವಾಗಿದೆ. ಕಾಂಗ್ರೆಸ್ ಸದಸ್ಯ ಪ್ರವೀಣ ರಾಷ್ಟ್ರಪಾಲ್ ಅವರ ನಿಧನದಿಂದಾಗಿ ತೆರವಾಗಿರುವ ಗುಜರಾತಿನ ಒಂದು ಸ್ಥಾನಕ್ಕೂ ಅಂದು ಉಪಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News