ತಂದೆಯನ್ನೇ ಕೊಂದ ಮಗನಿಗೆ ನ್ಯಾಯಾಂಗ ಬಂಧನ
ಅಲಪ್ಪುಝಾ,ಮೇ 31: ಚೆಂಗನ್ನೂರ ಕೊಲೆ ಪ್ರಕರಣದ ಆರೋಪಿ ಶೆರಿನ್ ಜಾನ್(36)ಗೆ ಚೆಂಗನ್ನೂರ ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿದೆ.
ತನ್ನ ಎನ್ನಾರೈ ತಂದೆ ಜಾಯ್ ವಿ.ಜಾನ್(68) ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾಗಿ ಶೆರಿನ್ ತಪ್ಪೊಪ್ಪಿಕೊಂಡ ನಂತರ ಪೊಲೀಸರು ಸೋಮವಾರ ಬೆಳಿಗ್ಗೆ ಆತನನ್ನು ಅಧಿಕೃತವಾಗಿ ಬಂಧಿಸಿದ್ದರು. ತನಿಖಾ ತಂಡವು ಜಾನ್ ಅವರ ಅಂಗಾಂಗಗಳನ್ನು ಚಂಗನಶ್ಶೇರಿ-ಮಡಕ್ಕುಮೂಡು ಪ್ರದೇಶದಿಂದ,ರುಂಡವನ್ನು ಚಿಂಗವನಂ ಟ್ರಾವಂಕೂರು ಇಲೆಕ್ಟ್ರೋ ಕೆಮಿಕಲ್ಸ್ ಮತ್ತು ಕಾಲು ಹಾಗೂ ಎಡಗೈಯನ್ನು ಪುಲಿಕೀಲಿನ ಪಂಬಾ ಮತ್ತು ಪದನಾಡಿನಿಂದ ವಶಪಡಿಸಿಕೊಂಡಿತ್ತು. ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಅಶೋಕ ಕುಮಾರ್ ಅವರು ಪ್ರಕರಣವನ್ನು ಎಳೆಎಳೆಯಾಗಿ ವಿವರಿಸಿದರು.
ಐಟಿ ಉದ್ಯೋಗಿಯಾಗಿದ್ದ ಶೆರಿನ್ ಹುಟ್ಟಿದ್ದು ಮತ್ತು ಬೆಳೆದಿದ್ದು ಅಮೆರಿಕದಲ್ಲಿ. ಭಾರತೀಯ ಮೂಲದ ಅಮೆರಿಕನ್ ಪೌರತ್ವ ಹೊಂದಿರುವ ಆತ 2013ರಲ್ಲಿ ಬೆಂಗಳೂರು ಮತ್ತು ಕೇರಳಗಳಲ್ಲಿ ಐಟಿ ಸಲಹೆಗಾರನಾಗಿ ಪ್ರಮುಖ ಐಟಿ ಕಂಪನಿಯೊಂದನ್ನು ಸೇರಿದ್ದ. ಆಗಿನಿಂದಲೂ ಆತ ಚೆಂಗನ್ನೂರಿನ ಮಂಗಳಂ ಉಳತ್ತಿಲ್‌ನಲ್ಲಿರುವ ಕುಟುಂಬದ ಮನೆಯಲ್ಲಿ ವಾಸವಾಗಿದ್ದ. ಮೇ 19ರಂದು ತಂದೆ ಜಾಯ್ ವಿ.ಜಾನ್,ತಾಯಿ ಮರಿಯಮ್ಮ ಜಾನ್,ಸೋದರ ಡಾ.ಡೇವಿಡ್ ಜಾನ್ ಮತ್ತು ಸೋದರಿ ಡಾ.ಶೆರ್ಲಿನ್ ಅವರು ಅಮೆರಿಕದಿಂದ ಚೆಂಗನ್ನೂರಿಗೆ ಆಗಮಿಸಿದ್ದು, ಸ್ವತಃ ಶೆರಿನ್ ಅವರನ್ನು ನೆಡುಂಬಶ್ಶೇರಿ ವಿಮಾನ ನಿಲ್ದಾಣದಿಂದ ಮನೆಗೆ ಕರೆದುಕೊಂಡು ಬಂದಿದ್ದ. ಆದರೆ ತಾವು ಅಮೆರಿಕಕ್ಕೆ ಮರಳುವವರೆಗೆ ಮನೆಯಿಂದ ದೂರವಿರುವಂತೆ ತಂದೆ ಆತನಿಗೆ ತಾಕೀತು ಮಾಡಿದ್ದರು. ಇಷ್ಟಾದ ಬಳಿಕ ಆರೋಪಿಯು ತಿರುವಳ್ಳದಲ್ಲಿ ದೊಡ್ಡ ಹೋಟೆಲ್ಲೊಂದರಲ್ಲಿ ರೂಮ್ ಮಾಡಿಕೊಂಡಿದ್ದ. ಜಾಯ್ ಅವರದು ಅತ್ಯಂತ ಯೋಜಿತ ರೀತಿಯಲ್ಲಿ ನಡೆಸಿದ ಕೊಲೆಯಾಗಿದ್ದು, ಅಪರೂಪದಲ್ಲಿಯೇ ಅಪರೂಪದ ಪ್ರಕರಣವಾಗಿದೆ ಎಂದು ಕುಮಾರ್ ತಿಳಿಸಿದರು.
ಬಾಲ್ಯದಿಂದಲೂ ತಂದೆ ತನ್ನನ್ನು ಕಡೆಗಣಿಸಿದ್ದು,ತಮ್ಮ ಮತ್ತು ತಂಗಿಗೆ ವಿಶೇಷ ಪ್ರೀತಿಯನ್ನು ತೋರಿಸುತ್ತಿದ್ದರು. ತನ್ನ ಅಗತ್ಯಕ್ಕೂ ಹಣ ನೀಡುತ್ತಿರಲಿಲ್ಲ ಮತ್ತು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸದಂತೆ ಸದಾ ತನ್ನನ್ನು ಪ್ರಶ್ನಿಸುತ್ತಲೇ ಇರುತ್ತಿದ್ದರು. ಆದರೆ ತನ್ನ ಒಡಹುಟ್ಟಿದವರು ತಮಗೆ ಬೇಕಾದ್ದುದೆಲ್ಲವನ್ನು ಪಡೆಯುತ್ತಿದ್ದರು. ಅವರಿಂದ ಬೇಸತ್ತು ಹೋಗಿದ್ದ ತಾನು ಅಮೆರಿಕವನ್ನು ತೊರೆದು ಇಲ್ಲಿಗೆ ಬಂದಿದ್ದೆ. ಆದರೆ ಚೆಂಗನ್ನೂರಿನಲ್ಲಿಯ ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಕುಟುಂಬದ ಹಣಕಾಸು ವ್ಯವಹಾರವನ್ನು ನೋಡಿಕೊಳ್ಳಲು ಓರ್ವ ಮ್ಯಾನೇಜರ್‌ನನ್ನು ಅವರು ನೇಮಿಸಿದ್ದರು. ತನಗೆ ಹಣ ಬೇಕಾದರೆ ಬಿಲ್‌ಗಳನ್ನು ತೋರಿಸಿದ ಬಳಿಕವೇ ಮ್ಯಾನೇಜರ್ ಬಳಿಯಿಂದ ಪಡೆದುಕೊಳ್ಳಬೇಕಾಗಿತ್ತು. ದಂದುವೆಚ್ಚ ಮಾಡುತ್ತೇನೆಂದು ತಂದೆ ತನ್ನನ್ನು ಹಲವು ಬಾರಿ ಥಳಿಸಿದ್ದೂ ಇದೆ. ತಾನು ವಿರೋಧಿಸಿದರೆ ಆಸ್ತಿಯಲ್ಲಿ ಒಂದು ಪೈಸೆಯನ್ನೂ ನೀಡುವುದಿಲ್ಲ ಮತ್ತು ತನ್ನ ಪಾಲನ್ನು ಅನಾಥಾಶ್ರಮಗಳಿಗೆ ದಾನ ಮಾಡುವುದಾಗಿ ಬೆದರಿಸುತ್ತಿದ್ದರು. ಹೀಗಾಗಿ ತನ್ನ ಆಸ್ತಿಯ ಪಾಲನ್ನು ಪಡೆಯಲು ಅವರನ್ನು ಕೊಲ್ಲುವುದು ತನಗೆ ಅನಿವಾರ್ಯವಾಗಿತ್ತು ಎಂದು ಶೆರಿನ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಮೇ 25ರಂದು ಬೆಳಿಗ್ಗೆ ಎಂಟು ಗಂಟೆಗೆ ಶೆರಿನ್ ಮತ್ತು ಜಾಯ್ ಏರ್ ಕಂಡಿಶನರ್ ದುರಸ್ತಿ ಮಾಡಿಸಲೆಂದು ತಮ್ಮ ಸ್ಕೋಡಾ ಕಾರಿನಲ್ಲಿ ತಿರುವನಂತಪುರಕ್ಕೆ ತೆರಳಿದ್ದರು. ಆದರೆ ಕಾರ್ಯವಾಗದ್ದರಿಂದ ವಾಪಸ್ ಬರುತ್ತಿದ್ದು ಶೆರಿನ್ ಕಾರು ಚಲಾಯಿಸುತ್ತಿದ್ದ. ತಂದೆ ಅಮೆರಿಕದಿಂದ ತಂದಿದ್ದ ರಿವಾಲ್ವರ್ ಮತ್ತು ಹರಿತವಾದ ಆಯುಧವನ್ನು ಆತ ಕಾರಿನಲ್ಲಿಯೇ ಇಟ್ಟುಕೊಂಡಿದ್ದ. ಸಂದರ್ಭ ಸಾಧಿಸಿ ಜಾಯ್ ಅವರನ್ನು ಗುಂಡಿಟ್ಟು ಕೊಂದು ಬಳಿಕ ಅಂಗಾಂಗಗಳನ್ನು ತುಂಡರಿಸಿ ಬೇರೆ ಬೇರೆ ಕಡೆಗಳಲ್ಲಿ ಎಸೆದಿದ್ದ ಎಂದು ಎಸ್‌ಪಿ ತಿಳಿಸಿದರು.