×
Ad

ಅಪಹೃತ ಕೇರಳದ ಕ್ರೈಸ್ತ ಧರ್ಮಗುರುವಿನ ವಿಮೋಚನೆ

Update: 2016-06-01 22:03 IST

 ಉದಕಮಂಡಲಂ(ತ.ನಾ),ಜೂ.1: 10 ಲಕ್ಷ.ರೂ.ಒತ್ತೆಹಣಕ್ಕಾಗಿ ಎರಡು ದಿನಗಳ ಹಿಂದೆ ಇಲ್ಲಿ ಅಪಹರಿಸಲ್ಪಟ್ಟಿದ್ದ ಕೇರಳದ ಕ್ರೈಸ್ತ ಧರ್ಮಗುರುವನ್ನು ಬುಧವಾರ ಸಮೀಪದ ಗುಡಲೂರಿನಿಂದ ರಕ್ಷಿಸಿರುವ ಪೊಲೀಸರು ಎಂಟು ಜನ ಅಪಹರಣಕಾರರನ್ನು ಬಂಧಿಸಿದ್ದಾರೆ.

ಕೊಲ್ಲಂ ನಿವಾಸಿಯಾಗಿರುವ ಕ್ರೈಸ್ತ ಧರ್ಮಗುರು ಫಾ.ಜೋಸೆಫ್ ಜಾರ್ಜ್ ಅವರು ಮೇ.27ರಂದು ತನ್ನ ಕುಟುಂಬದೊಂದಿಗೆ ಇಲ್ಲಿಗೆ ಆಗಮಿಸಿದ್ದರು. ಆಗಿನಿಂದಲೂ ಅಪಹರಣಕಾರರು ಅವರ ಮೇಲೆ ಕಣ್ಣಿರಿಸಿದ್ದು,ಬಳಿಕ ಅವರನ್ನು ಅಪಹರಿಸಿದ್ದರು. ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಿ 10 ಲ.ರೂ.ಒತ್ತೆಹಣಕ್ಕೆ ಬೇಡಿಕೆಯಿಟ್ಟಿದ್ದ ಅಪಹರಣಕಾರರು ಜಾರ್ಜ್‌ರನ್ನು ಗುಡಲೂರಿನ ರಹಸ್ಯ ತಾಣದಲ್ಲಿರಿಸಿದ್ದರು.
ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗಾಗಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿದ್ದರು. ಪೊಲೀಸರ ಸೂಚನೆಯಂತೆ ಇಂದು ಗುಡಲೂರಿನ ದೇವರಸೋಲೈ ಎಂಬಲ್ಲಿ ಜಾರ್ಜ್ ಕುಟುಂಬದವರು ಅಪಹರಣಕಾರರಿಗೆ ಹಣ ನೀಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ,ಜಾರ್ಜ್‌ರನ್ನು ಬಂಧಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಸೈತಂಬಿ ಎಂಬಾತನ ನೇತೃತ್ವದ ಈ ಗ್ಯಾಂಗಿನ ಸದಸ್ಯರು ಹೆಚ್ಚೇನೂ ಪರಿಚಿತವಲ್ಲದ ಮಕ್ಕಳ್ ತಮಿಳ್ ದೇಶಂ ಹೆಸರಿನ ರಾಜಕೀಯ ಸಂಘಟನೆಯ ಕಾರ್ಯಕರ್ತರೆನ್ನಲಾಗಿದೆ. ಅಸೈತಂಬಿ ಕೆಲವು ವರ್ಷಗಳ ಹಿಂದೆ ಎಡಿಎಂಕೆ ಕೌನ್ಸಿಲರ್‌ವೋರ್ವರ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News