ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಪಟ್ಟ ಉಳಿಸಿಕೊಂಡ ಭಾರತ
ಹೊಸದಿಲ್ಲಿ, ಜೂ.1: ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಪಟ್ಟ ಉಳಿಸಿಕೊಳ್ಳಲು ಭಾರತ ಜನವರಿಯಿಂದ ಮಾರ್ಚ್‌ವರೆಗೆ ಸಾಕಷ್ಟು ಕಸರತ್ತು ನಡೆಸಿದೆ. ಮುಂದಿನ ವಾರ ಅಮೆರಿಕದಲ್ಲಿ ಹೂಡಿಕೆದಾರರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುವ ಕಾರ್ಯಕ್ರಮವಿದ್ದು, ಇದಕ್ಕೆ ಸಕಾರಾತ್ಮಕ ವೇದಿಕೆ ಒದಗಿಸುವಲ್ಲಿ ಈ ಸಾಧನೆ ಮಹತ್ವದ್ದಾಗಿದೆ.
ಏಷ್ಯಾದ ಮೂರನೆ ಅತೀದೊಡ್ಡ ಆರ್ಥಿಕತೆಗೆ ಪುನಶ್ಚೇತನ ನೀಡುವ ಭರವಸೆಯೊಂದಿಗೆ ಎರಡು ವರ್ಷ ಹಿಂದೆ ಅಧಿಕಾರಕ್ಕೆ ಬಂದ ಮೋದಿ, ರಕ್ಷಣೆ ಹಾಗೂ ಮೂಲ ಸೌಕರ್ಯ ಮೇಲಿನ ವೆಚ್ಚವನ್ನು ಹೆಚ್ಚಿಸಿದರು. ಕಡಿಮೆ ಬಡ್ಡಿದರ ಪರಿಣಾಮವಾಗಿ ಗ್ರಾಹಕರ ಬೇಡಿಕೆಯೂ ಹೆಚ್ಚಿತು. ಪ್ರಗತಿಪರ ನೀತಿಗಳು, ಜಿಡಿಪಿ ದರ ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿ ಶೇ.7.9ರಷ್ಟು ಹೆಚ್ಚಲು ಇದು ಕಾರಣವಾಯಿತು. ಡಿಸೆಂಬರ್ ತ್ರೈಮಾಸಿಕದಲ್ಲಿ ಇದು ಶೇ.7.2ರಷ್ಟಿತ್ತು.
ಪ್ರಗತಿಗೆ ನಿರೀಕ್ಷೆಗೂ ಮೀರಿದ ವೇಗ ಸಿಕ್ಕಿದೆ. ಬೇಡಿಕೆ ಹೆಚ್ಚುತ್ತಿದೆ ಎಂದು ಯೆಸ್ ಬ್ಯಾಂಕ್ ಅಧ್ಯಕ್ಷೆ ಶುಭದಾ ರಾವ್ ಹೇಳುತ್ತಾರೆ. ಭಾರತದ ಪ್ರಗತಿದರ ಏಷ್ಯಾದ ದೈತ್ಯ ಆರ್ಥಿಕತೆಯಾದ ಚೀನಾವನ್ನು ಮೀರಿದೆ. ಚೀನಾದ ಪ್ರಗತಿದರ ಶೇಕಡ 6.7ರಷ್ಟಿದ್ದು, ಇದು ಏಳು ವರ್ಷಗಳಲ್ಲೇ ಕನಿಷ್ಠ.
ಮೋದಿ ಸರಕಾರ ಕಾರ್ಪೊರೇಟ್ ಬಂಡವಾಳ ವೆಚ್ಚವನ್ನು ಉತ್ತೇಜಿಸಲು ಪ್ರಯತ್ನಿಸಿದ್ದರೂ, ವಾರ್ಷಿಕ ಹೂಡಿಕೆ ಪ್ರಮಾಣ ಮಾತ್ರ ವಾರ್ಷಿಕ ಸರಾಸರಿಯಾದ ಶೇ.1.9ರಿಂದ ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ. 1.2ಕ್ಕೆ ಕುಸಿಯಿತು.
ಮೋದಿ ಜೂನ್ 7 ಹಾಗೂ 8ರಂದು ಅಮೆರಿಕದ ಕಂಪನಿಗಳ ಮುಖ್ಯಸ್ಥರನ್ನು ಭೇಟಿ ಮಾಡಲಿದ್ದು ಪರಿಣಾಮಕಾರಿ ಪ್ರಗತಿದರದ ಮೂಲಕ ಪ್ರಭಾವ ಬೀರುವ ನಿರೀಕ್ಷೆ ಇದೆ.