×
Ad

ಕೇಂದ್ರವನ್ನು ಹೊಣೆಯಾಗಿಸಿದ ಶಿವಸೇನೆ

Update: 2016-06-01 22:05 IST

ಮುಂಬೈ,ಜೂ.1: ವಾರ್ಧಾ ಜಿಲ್ಲೆಯ ಪುಲ್ಗಾಂವ್‌ನಲ್ಲಿಯ ಕೇಂದ್ರ ಶಸ್ತ್ರಾಗಾರದಲ್ಲಿ ಸಂಭವಿಸಿದ ಬೃಹತ್ ಬೆಂಕಿ ಅವಘಡವನ್ನು ಏನೋ ಒಂದು ರೀತಿಯಲ್ಲಿ ‘ಅಸಹಜ’ವಾಗಿದೆ ಎಂದು ಬಣ್ಣಿಸಿರುವ ಶಿವಸೇನೆಯು, ಇದರ ಹಿಂದೆ ಒಳಸಂಚು ಇರುವ ಶಂಕೆಯನ್ನು ವ್ಯಕ್ತಪಡಿಸಿದೆ. ಜೀವಹಾನಿ ಮತ್ತು ಅಲ್ಲಿ ದಾಸ್ತಾನಿರಿಸಲಾಗಿದ್ದ ಭಾರೀ ಪ್ರಮಾಣದ ಮದ್ದುಗುಂಡುಗಳ ನಷ್ಟದ ಹೊಣೆಯನ್ನು ಹೊತ್ತುಕೊಳ್ಳುವಂತೆ ಅದು ಕೇಂದ್ರವನ್ನು ಆಗ್ರಹಿಸಿದೆ.

ಬೆಂಕಿಯಿಂದಾಗಿ ಭಾರೀ ಪ್ರಮಾಣದ ಮದ್ದುಗುಂಡುಗಳ ದಾಸ್ತಾನು ನಾಶಗೊಂಡಿರುವುದು ಪಾಕಿಸ್ತಾನ ಮತ್ತು ಚೀನಾಗಳಂತಹ ನಮ್ಮ ಶತ್ರುಗಳಿಗೆ ಸಂತಸವನ್ನುಂಟು ಮಾಡಿರಬೇಕು. ಯುದ್ಧದಲ್ಲಿಯೂ ಇಷ್ಟು ಹಾನಿಯಾಗುವುದಿಲ್ಲ. ನಮ್ಮ ಸರಕಾರವು ಸಾವುಗಳ ಬಗ್ಗೆ ದುಃಖ ವ್ಯಕ್ತಪಡಿಸುತ್ತದೆ ಮತ್ತು ವಿಚಾರಣೆಗಳಿಗೆ ಆದೇಶಿಸುತ್ತದೆ ಅಷ್ಟೇ. ದೇಶದ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಅಸಡ್ಡೆಯು ನಾಚಿಕೆಗೇಡಿತನವಾಗಿದೆ ಎಂದು ತನ್ನ ಮುಖವಾಣಿ ‘ಸಾಮ್ನಾ’ದ ಬುಧವಾರದ ಸಂಚಿಕೆಯ ಸಂಪಾದಕೀಯ ಲೇಖನದಲ್ಲಿ ಶಿವಸೇನೆಯು ಹೇಳಿದೆ.
  ಗಡಿಯಲ್ಲಿ ಹೋರಾಡುತ್ತಿರುವ ಸೇನಾ ಸಿಬ್ಬಂದಿಗಾಗಿ ಸಾಕಷ್ಟು ಶಸ್ತ್ರಾಸ್ತ್ರಗಳಿಲ್ಲದಿದ್ದರೆ ಯಾರು ಹೊಣೆ? ಸರಕಾರವು ತನ್ನ ಹೊಣೆಗಾರಿಕೆಗಳನ್ನು ಕೊಡವಿಕೊಳ್ಳಲಾಗದು. ಈ ಬೆಂಕಿ ಅವಘಡವು ಸಾಮಾನ್ಯವಾದುದಲ್ಲ ಮತ್ತು ಹಲವಾರು ಶಂಕೆಗಳನ್ನು ಹಾಗೂ ಪ್ರಶ್ನೆಗಳನ್ನು ಎತ್ತಿದೆ ಎಂದು ಅದು ಹೇಳಿದೆ.

ಪುಲ್ಗಾಂವ್‌ನಲ್ಲಿರುವ ದೇಶದ ಅತ್ಯಂತ ಬೃಹತ್ ಶಸ್ತ್ರಾಗಾರದಲ್ಲಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದ ಭಾರೀ ಬೆಂಕಿಗೆ ಕನಿಷ್ಠ 18 ಸೇನಾ ಸಿಬ್ಬಂದಿಬಲಿಯಾಗಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News