ಯುವ ಪ್ರತಿಭೆ ಸರ್ಫರಾಝ್ ಖಾನ್ ಗೆ ವಿರಾಟ್ ಪ್ರೋತ್ಸಾಹ, ಸಲಹೆ
ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 2016 ಐಪಿಎಲ್ ಅಂತಿಮ ಪಂದ್ಯದ ಬಳಿಕ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ 18 ವರ್ಷ ಪ್ರಾಯದ ಆಟಗಾರ ಮತ್ತು ವರ್ಷದ ಯುವ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದಿರುವ ಸರ್ಫರಾಝ್ ಖಾನ್ ಅವರಿಗೆ ತಂಡದ ಕಪ್ತಾನ ವಿರಾಟ್ ಕೊಹ್ಲಿ ಒಂದು ಬ್ಯಾಟ್ ಮತ್ತು ಗ್ಲೊವ್ಸ್ ಜೋಡಿಯೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಪಂದ್ಯಾವಳಿಯ ಬಹುತೇಕ ಭಾಗದಲ್ಲಿ ಸರ್ಫರಾಝ್ ಅವರಿಗೆ ಆಡುವ ಅವಕಾಶವೇ ಸಿಕ್ಕಿರಲಿಲ್ಲ. ಮೊದಲ ಐದು ಪಂದ್ಯಗಳಲ್ಲಿ ಮಾತ್ರ ಅವರು ಆಡಿದ್ದರು. ತಂಡಕ್ಕೆ ಆಡಲು ಆಯ್ಕೆಯಾಗುವ ಮೊದಲು ಸರ್ಫರಾಜ್ ಫಿಟ್ನೆಸ್ ವಿಭಾಗದಲ್ಲಿ ಇನ್ನೂ ಪರಿಶ್ರಮ ಹಾಕಬೇಕು ಮತ್ತು ಕ್ಷೇತ್ರ ರಕ್ಷಣೆಯನ್ನೂ ಸುಧಾರಿಸಿಕೊಳ್ಳಬೇಕು ಎಂದು ಕೊಹ್ಲಿ ಹೇಳಿದ್ದರು. ಸರ್ಫರಾಝ್ ಅವರಿಗೆ ಆಟಿಟ್ಯೂಡ್(ಅಹಂ) ಸಮಸ್ಯೆಯೂ ಇತ್ತು. ಅದೇ ಕಾರಣಕ್ಕಾಗಿ ಅವರಿಗೆ ಆಡುವ ಅವಕಾಶ ಸಿಗಲಿಲ್ಲ ಎನ್ನುವ ಮಾತುಗಳೂ ಕೇಳಿ ಬಂದಿದ್ದವು.
ವಿರಾಟ್ ಕೊಹ್ಲಿ ನನಗೆ ಕಠಿಣ ಪರಿಶ್ರಮ ಪಡಲು ಹೇಳಿದ್ದಾರೆ. ನನ್ನ ಗುರಿಯನ್ನು ತಲುಪಲು ಅವರು ನನಗೆ ಬಿಲ್ಲು ಮತ್ತು ಬಾಣ ಕೊಟ್ಟಿದ್ದಾರೆ ಎಂದೇ ಅನಿಸುತ್ತದೆ. ಇದು ನನಗೆ ಬಹಳ ದೊಡ್ಡ ಉಡುಗೊರೆ ಎಂದು ಸರ್ಫರಾಝ್ ಹೇಳಿದ್ದಾರೆ. ಸರ್ಫರಾಝ್ ಅವರಿಗೆ ಕೊಹ್ಲಿ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಇದೇ ಕಾರಣದಿಂದ ಐಪಿಎಲ್ ಫೈನಲ್ ಬಳಿಕ ಅವರಿಗೆ ಉಡುಗೊರೆ ಕೊಟ್ಟಿದ್ದಾರೆ. ಈಗ ಸರ್ಫರಾಝ್ ವಿರಾಟ್ ಕೊಹ್ಲಿ ಸಲಹೆ ನಿಟ್ಟಿನಲ್ಲಿ ಕಾರ್ಯಗತರಾಗಿದ್ದಾರೆ. ತೂಕ ಇಳಿಸಿಕೊಳ್ಳಲು ಕಠಿಣ ಫಿಟ್ನೆಸ್ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಬೆಂಗಳೂರು ತಂಡದ ನಮ್ಮ ತರಬೇತುದಾರರಾಗಿದ್ದ ಶಂಕರ್ ಬಸು ನನಗೆ ಫಿಟ್ನೆಸ್ ಕಾರ್ಯಕ್ರಮವೊಂದನ್ನು ಇಮೇಲ್ ಮಾಡಿದ್ದಾರೆ. ಅದನ್ನು ನಾನು ಕಠಿಣವಾಗಿ ಅಳವಡಿಸಿಕೊಳ್ಳಲಿದ್ದೇನೆ ಎಂದು ಸರ್ಫರಾಝ್ ಹೇಳಿದ್ದಾರೆ.
ಕೃಪೆ: www.dnaindia.com