×
Ad

ಟಾಗೋರರ ಅಪ್ರಕಟಿತ ಕವಿತೆಗಳ ಸಂಗ್ರಹ ಶೀಘ್ರ ಬಿಡುಗಡೆ

Update: 2016-06-02 23:04 IST

ಕೋಲ್ಕತಾ, ಜೂ.2: ಹಸ್ತಾಕ್ಷರವನ್ನು ನೀಡುವಾಗ ರವೀಂದ್ರನಾಥ ಟಾಗೋರರು ಬರೆದಿದ್ದ, ಅಪ್ರಕಟಿತ ಹನಿಗವನಗಳ ಸಂಗ್ರಹವೊಂದು ಮೊದಲ ಬಾರಿಗೆ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದೆ.
ಟಾಗೋರರ ಆಶ್ರಮವಾಗಿದ್ದ ಶಾಂತಿನಿಕೇತನದ ರವೀಂದ್ರ ಭವನದ ಪತ್ರಾಗಾರದಲ್ಲಿ ಹುದುಗಿಕೊಂಡಿದ್ದ ಈ ರತ್ನನಿಧಿಯನ್ನು ಕ್ಯೂರೇಟರ್ ಹಾಗೂ ಕವಿ ನೀಲಾಂಜನ ಬ್ಯಾನರ್ಜಿ ಸಂಗ್ರಹಿಸಿ ಸಂಪಾದಿಸಿದ್ದಾರೆ.
‘ನಾಕಿಂಗ್ಸ್ ಎಟ್ ಮೈ ಹಾರ್ಟ್’ ಎಂಬ ಈ ಸಂಕಲನವು ಸುಮಾರು 81 ಹಸ್ತಾಕ್ಷರ-ಕವನಗಳನ್ನೊಳಗೊಂಡಿದ್ದು ಅದನ್ನು ಶೀಘ್ರದಲ್ಲೇ ‘ರೋಲಿ ಬುಕ್ಸ್’ ಬಿಡುಗಡೆಗೊಳಿಸಲಿದೆ.
ಇವು ಅತ್ಯಂತ ಸಣ್ಣ ಕವಿತೆಗಳು ಅಥವಾ ದ್ವಿಪದಿಗಳಾಗಿವೆ. ಟಾಗೋರರು ಜಪಾನಿ ಹಾಯ್ಕುಗಳ ಮಾದರಿಯ ಕವಿತೆಗಳ ನಿಸ್ಸಂದಿಗ್ಧತೆ, ಆಳ, ಶಕ್ತಿ ಹಾಗೂ ತೀವ್ರತೆಗಳಿಂದ ಪ್ರಭಾವಿತರಾಗಿದ್ದರೆಂದು ಬ್ಯಾನರ್ಜಿ ಹೇಳಿದ್ದಾರೆ.
.................
ಕಿರುಕುಳಕ್ಕೆ ಪ್ರತಿಭಟನೆ
ಬಾಲಕಿ-ತಾಯಿಗೆ ಥಳಿತ
ಮಾಣಿಕ್ ಚಾಕ್, (ಪ.ಬಂ), ಜೂ.2: ಮಾಲ್ಡಾ ಜಿಲ್ಲೆಯ ಮಾಣಿಕ್‌ಚಾಕ್‌ನಲ್ಲಿ 9ನೆ ತರಗತಿಯ ಬಾಲಕಿಯೊಬ್ಬಳಿಗೆ ಸ್ಥಳೀಯ ಯುವಕನೊಬ್ಬನು ಕಿರುಕುಳ ನೀಡುತ್ತಿದ್ದುದನ್ನು ಪ್ರತಿಭಟಿಸಿದ ಬಾಲಕಿ, ಆಕೆಯ ತಾಯಿ ಹಾಗೂ ಸ್ಥಳೀಯ ಗ್ರಾಮಪಂಚಾಯತ್‌ನ ಸದಸ್ಯನೊಬ್ಬನನ್ನು ಮಾರಣಾಂತಿಕವಾಗಿ ಥಳಿಸಿದ ಘಟನೆ ಇಂದು ವರದಿಯಾಗಿದೆ.
ನೂರ್ ಅಲಿ(20) ಎಂಬಾತನು ಕಳೆದೊಂದು ವರ್ಷದಿಂದ ಬಾಲಕಿಗೆ ಸತತ ಕಿರುಕುಳ ನೀಡುತ್ತಿದ್ದನು ಹಾಗೂ ಹಿಂಬಾಲಿಸುತ್ತಿದ್ದನೆನ್ನಲಾಗಿದೆ. ಆ ಬಗ್ಗೆ ದೂರು ನೀಡಲು ಬಾಲಕಿ ಹಾಗೂ ಅವಳ ತಾಯಿ ನೂರ್‌ನ ಮನೆಗೆ ಹೋಗಿದ್ದರು. ಆ ವೇಳೆ,ಯುವಕನ ಕುಟುಂಬದ ಸದಸ್ಯರು ಅವರಿಬ್ಬರನ್ನು ಸರಳು ಹಾಗೂ ದೊಣ್ಣೆಗಳಿಂದ ಥಳಿಸಿದರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಥಳೀಯ ಗ್ರಾಮಪಂಚಾಯತ್ ಸದಸ್ಯ ಆಯುಷ್ ಕರಣಿ ಎಂಬವರು ಮಧ್ಯಪ್ರವೇಶಿಸಿ, ದಾಳಿಯನ್ನು ತಡೆಯಲು ಯತ್ನಿಸಿದಾಗ, ಮಹಿಳೆಯರು ಸೇರಿದಂತೆ ನೂರ್‌ನ ಕುಟುಂಬಿಕರು ಅವರನ್ನೂ ಥಳಿಸಿದರೆಂದು ಅವರು ಹೇಳಿದ್ದಾರೆ.
ಗಾಯಗೊಂಡಿರುವ ಮೂವರನ್ನೂ ಮಾಣಿಕ್ ಚಾಕ್ ಗ್ರಾಮೀಣ ಆಸ್ಪತ್ರೆಗೆ ಒಯ್ಯಲಾಗಿದೆ. ಆರೋಪಿ ಯುವಕ ಹಾಗೂ ಆತನ ಕುಟುಂಬ ಸದಸ್ಯರು ತಲೆಮಾರೆಸಿಕೊಂಡಿದ್ದಾರೆಂದು ಅಧಿಕಾರಿ ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News