×
Ad

ಕಾಂಟ್ರಾಕ್ಟ್ ನೀಡಿದ್ದ ಆರೋಪಿ ಶರಣು

Update: 2016-06-02 23:09 IST

ಪಾಟ್ನಾ, ಜೂ.2: ಕಳೆದ ತಿಂಗಳು ನಡೆದ ಬಿಹಾರದ ಪತ್ರಕರ್ತನೊಬ್ಬನ ಕೊಲೆಯ ಪ್ರಮುಖ ಶಂಕಿತನೊಬ್ಬ ಸಿವಾನ್‌ನ ನ್ಯಾಯಾಲಯವೊಂದಕ್ಕೆ ಶರಣಾಗಿದ್ದಾನೆ.

ಮೇ.13ರಂದು ಅಜ್ಞಾತ ವ್ಯಕ್ತಿಗಳಿಂದ ಹತ್ಯೆಗೊಳಗಾಗಿದ್ದ ಹಿಂದಿ ಪತ್ರಿಕೆಯೊಂದರ ಬ್ಯುರೊ ಮುಖ್ಯಸ್ಥ ರಾಜ್‌ದೇವ್ ರಂಜನ್ ಎಂಬವರ ಪ್ರಕರಣಕ್ಕೆ ಸಂಬಂಧಿಸಿ ಲಡಾನ ಮಿಯಾ ಎಂಬಾತ ಬೇಕಾದವನಾಗಿದ್ದನು.
ಮಿಯಾ, ಅಪಹರಣ ಹಾಗೂ ಕೊಲೆ ಸಹಿತ ಹಲವು ಆರೋಪಗಳಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಕಾರಾಗೃಹದಲ್ಲಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಹಾಗೂ ಆರ್‌ಜೆಡಿ ಶಾಸಕ, ಮುಹಮ್ಮದ್ ಶಬಾಬುದ್ದೀನ್‌ರ ಸಹಚರನಾಗಿದ್ದಾನೆ.
ರಂಜನ್‌ರ ಹತ್ಯೆಗೆ ಸಂಬಂಧಿಸಿ ಮೇ 25ರಂದು ಪೊಲೀಸರು ಐವರನ್ನು ಬಂಧಿಸಿದ್ದರು. ಪತ್ರಕರ್ತನಿಗೆ ಗುಂಡುಹೊಡೆದವನು ತಾನೆಂದು ತಪ್ಪೊಪ್ಪಿಕೊಂಡಿದ್ದಾನೆಂದು ಪೊಲೀಸರು ಪ್ರತಿಪಾದಿಸುತ್ತಿರುವ ರೋಹಿತ್ ಕುಮಾರ್ ಎಂಬಾತನಿಂದ ಅಪರಾಧಕ್ಕೆ ಬಳಸಲಾಗಿದ್ದ ನಾಡ ಪಿಸ್ತೂಲೊಂದನ್ನು ವಶಪಡಿಸಿಕೊಳ್ಳಲಾಗಿತ್ತು.

ಎಪ್ರಿಲ್ ಅಂತ್ಯದ ವೇಳೆ ಸಿವಾನ್ ಬಂದಿಖಾನೆಯಿಂದ ಬಿಡುಗಡೆಗೊಂಡಿದ್ದ ಕ್ರಿಮಿನಲ್ ಮಿಯಾ, ರಂಜನ್‌ರ ಕೊಲೆಗೆ ಕಾಂಟ್ರಾಕ್ಟ್ ನೀಡಿದ್ದನೆಂಬುದು ವಿಚಾರಣೆಯ ವೇಳೆ ಬಹಿರಂಗಕ್ಕೆ ಬಂದಿತ್ತೆಂದು ಪೊಲೀಸರು ತಿಳಿಸಿದ್ದಾರೆ.
ರಂಜನ್‌ರ ಹತ್ಯೆಗಾಗಿ ಮಿಯಾ ರೂ.15 ಸಾವಿರವನ್ನು ಕುಮಾರ್‌ಗೆ ನೀಡಿದ್ದನು ಹಾಗೂ ಇನ್ನೊಬ್ಬ ಆರೋಪಿಗೆ ಮಾವನ ಆಸ್ತಿಯ ಸಂಬಂಧದ ವಿವಾದ ಬಗೆಹರಿಸಲು ಸಹಕರಿಸುವ ಭರವಸೆ ನೀಡಿದ್ದನೆಂದು ಆರೋಪಿಗಳು ಬಾಯಿ ಬಿಟ್ಟಿದ್ದರೆಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News