×
Ad

ಮಥುರಾ ಹಿಂಸಾಚಾರ: ರಾಜಕೀಯ ಆರೋಪ-ಪ್ರತ್ಯಾರೋಪ

Update: 2016-06-04 22:31 IST

ಮಥುರಾ, ಜೂ.4: ಮಥುರಾದ ಹೃದಯ ಭಾಗದಲ್ಲಿರುವ ವಿಸ್ತಾರವಾದ ಉದ್ಯಾನವನಕ್ಕೆ ಪ್ರವೇಶಿಸಿದ ಸುಮಾರು ಒಂದು ಸಾವಿರ ಪೊಲೀಸರ ಮೇಲೆ ಅಡಗು ದಾಳಿಗಳು ನಡೆದವು. ಮರಗಳ ಮೇಲಿನಿಂದ ಅವರ ಮೇಲೆ ಗುಂಡಿನ ಮಳೆ ಸುರಿಯಿತು. ನೆಲದಲ್ಲಿ ಸುಮಾರು 3 ಸಾವಿರದಷ್ಟಿದ್ದ ಅತಿಕ್ರಮಣಕಾರರ ಭೀಕರ ಗುಂಪೊಂದು ಖಡ್ಗ, ದೊಣ್ಣೆ ಹಾಗೂ ಗ್ರೆನೇಡ್‌ಗಳನ್ನು ಉಪಯೋಗಿಸಿ ಜೇನುನೊಣಗಳಂತೆ ಪೊಲೀಸರ ಮೇಲೆರಗಿದರು. ಗ್ಯಾಸ್ ಸಿಲಿಂಡರ್‌ಗಳಿಗೆ ಬೆಂಕಿ ಹಚ್ಚಿದಾಗ ಜ್ವಾಲೆಗಳು ಭುಗಿಲೆದ್ದವು. ಎರಡು ವರ್ಷಗಳ ಹಿಂದೆ ತಾವು ಝಂಡಾ ಊರಿದ್ದ ಜವಾಹರಬಾಗನ್ನು ಅತಿಕ್ರಮಣಕಾರರು ತೆರವುಗೊಳಿಸಬೇಕಾದರೆ 2 ತಾಸು ಹಿಡಿಯಿತು.

24 ಮಂದಿ ಹಿಂಸಾಚಾರಕ್ಕೆ ಬಲಿಯಾದರು. ಅವರಲ್ಲಿಬ್ಬರು ಪೊಲೀಸ್ ಅಧಿಕಾರಿಗಳಾದರೆ, ಉಳಿದವರು, ಸ್ವಯಂಘೋಷಿತ ‘ಸ್ವಾಧೀನ್ ಭಾರತ್ ವಿಧಿಕ್ ಸತ್ಯಾಗ್ರಹ್’ ಎಂಬ ಪಂಥವೊಂದರ ಸದಸ್ಯರು. ತಾವು ರಾಜಕೀಯ ಹಾಗೂ ಸಾಮಾಜಿಕ ಕ್ರಾಂತಿಕಾರಿಗಳೆಂದು ಹೇಳಿಕೊಳ್ಳುತ್ತಿರುವ ಅವರು, ಚುನಾವಣೆಗಳ ರದ್ದತಿ ಹಾಗೂ ಪ್ರತಿಯೊಬ್ಬನಿಗೆ ಅಗ್ಗದ ಇಂಧನಕ್ಕಾಗಿ ತಾವು ಹೋರಾಡುತ್ತಿದ್ದೇವೆಂದು ಪ್ರತಿಪಾದಿಸುತ್ತಿದ್ದಾರೆ.
ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಹಾಗೂ ಮುಂದಿನ ಪ್ರಧಾನಿ ಯಾರೆಂದು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಉತ್ತರಪ್ರದೇಶದಲ್ಲಿ ಈ ದುರಂತವು ತಕ್ಷಣವೇ ರಾಜಕೀಯದೊಂದಿಗೆ ಬೆರಕೆಯಾಗಿದೆ.


ತಾನು ಮುಖ್ಯಮಂತ್ರಿ ಅಖಿಲೇಶ್ ಯಾದವ್‌ಗೆ ದೂರವಾಣಿ ಕರೆ ಮಾಡಿ ಕೇಂದ್ರದಿಂದ ಸರ್ವಸಾಧ್ಯ ನೆರವಿನ ಭರವಸೆ ನೀಡಿದ್ದೇನೆಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಟ್ವೀಟಿಸಿದ್ದರು. ಆದರೆ, ಅವರ ಸಹಾಯಕ ಕಿರೇನ್ ರಿಜಿಜು, ಈ ಅನಾಹುತ ಒಂದು ‘ವೈಫಲ್ಯ’ವಾಗಿದೆ. ಅದೇಕಾಯಿತೆಂಬ ಕುರಿತು ರಾಜ್ಯ ಸರಕಾರ ತನಿಖೆ ನಡೆಸಬೇಕೆಂದಿದ್ದಾರೆ. ಉತ್ತರಪ್ರದೇಶದ ಬಿಜೆಪಿ ಅಧ್ಯಕ್ಷ ಕೇಶವ ಪ್ರಸಾದ್ ವೌರ್ಯ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಈ ಪಂಥಕ್ಕೆ ಮುಖ್ಯಮಂತ್ರಿಯ ಚಿಕ್ಕಪ್ಪ ಹಾಗೂ ಸಚಿವ ಶಿವಪಾಲ್ ಯಾದವ್‌ರ ಆಶ್ರಯವಿದೆಯೆಂದು ಆರೋ ಪಿಸಿದ್ದಾರೆ. ಅದಕ್ಕೆ ತಿರುಗೇಟು ನೀಡಿರುವ ಯಾದವ್, ‘ಆರೋಪ ಸಾಬೀತುಪಡಿಸಿ, ಇಲ್ಲವೇ ಬಹಿರಂಗವಾಗಿ ಕ್ಷಮೆ ಯಾಚಿಸಿ’ ಎಂದು ಸವಾಲು ಹಾಕಿದ್ದಾರೆ.
ಪಕ್ಷಪಾತರಹಿತ ತನಿಖೆಯ ಪಣ ತೊಟ್ಟಿರುವ ಮುಖ್ಯಮಂತ್ರಿ, ಪ್ರಮಾದವೊಂದು ಸಂಭವಿಸಿದೆ. ಪೊಲೀಸರು ಸರಿಯಾದ ಸನ್ನದ್ಧತೆ ಮಾಡಿಕೊಂಡಿರಲಿಲ್ಲ ಎಂದಿದ್ದಾರೆ.
ತಮ್ಮ ಜಾತಿಯವರನ್ನು ಓಲೈಸಲು ಮುಖ್ಯಮಂತ್ರಿ ಹಾಗೂ ಅವರ ಕುಟುಂಬಿಕರ ಒತ್ತಾಸೆಯಂತೆ, ಪೊಲೀಸ್ ಪಡೆಯಲ್ಲಿ ಯಾದವರನ್ನು ಅಳತೆ ಮೀರಿ ನೇಮಕ ಮಾಡಿಕೊಂಡಿರುವುದೇ ಯಾದವರ ಪ್ರಾಬಲ್ಯದ ಈ ಪಂಥವು ಅನೇಕ ವರ್ಷಗಳಿಂದ ಬೆಳೆದು ಬರಲು ಅವಕಾಶ ನೀಡಿತೆಂದು ಬಿಜೆಪಿಯ ಇತರ ನಾಯಕರು ಆರೋಪಿಸಿದ್ದಾರೆ.
ಆದರೆ, ಒಂದಂತೂ ಸ್ಪಷ್ಟ. ಆ ಪಂಥವು ಸಂಗ್ರಹಿಸಿರುವ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಪೊಲೀಸರು ಅಥವಾ ಆಡಳಿತಾಧಿ ಕಾರಿಗಳ ಗಮನಕ್ಕೆ ಬಾರದೆ ಸಂಗ್ರಹಿಸುವುದು ಭಾರೀ ಕಷ್ಟ. ಅದರ ಬಳಿ ಭಾರೀ ಶಸ್ತ್ರಾಸ್ತ್ರಗಳಿರುವುದು ಈ ಹಿಂದಿನ ತೆರವು ಪ್ರಯತ್ನಗಳ ವೇಳೆಯೇ ಸಾಬೀತಾಗಿತ್ತು.
ಮಥುರೆಯ ಸಂಸದೆ ಹೇಮಾಮಾಲಿನಿಯವರ ಕಾರಣದಿಂದಾಗಿ ಬಿಜೆಪಿ ಭಾರೀ ಹಿನ್ನಡೆ ಕಂಡಿದೆ. ಹಿಂಸಾಚಾರ ನಡೆದ ಕೆಲವೇ ತಾಸುಗಳ ಬಳಿಕ, ಸಂಸದೆ, ತನ್ನ ಇತ್ತೀಚಿನ ಚಿತ್ರದ ತನ್ನ ಫೊಟೊಗಳನ್ನು ಟ್ವೀಟರ್‌ಗೆ ಹಾಕಿದ್ದರು. ಬಳಿಕ ಅವುಗಳನ್ನು ಹೇಮಮಾಲಿನಿ, ಅಳಿಸಿದ್ದು, ತಾನು ಮಥುರೆಗೆ ಹೋಗುತ್ತಿದ್ದೇನೆಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News