ಗೋಧಿ ಬಣ್ಣ, ಸಾಧಾರಣ ಮೈಕಟ್ಟು
‘ಅ ಲ್ಝೆಮಿರ್’ ಕಾಯಿಲೆಯನ್ನು ವಸ್ತುವಾಗಿ ಟ್ಟುಕೊಂಡು ಬಂದ ಚಿತ್ರಗಳು ಒಂದೆರಡೇನೂ ಅಲ್ಲ. ಕೆಲವು ಚಿತ್ರಗಳು ಅಲ್ಝೆಮಿರ್ ಕಾಯಿಲೆ ಪೀಡಿತರ ಕುರಿತಂತೆ ಜಾಗೃತಿಗಾಗಿ ಮಾಡಿರುವಂತಹದು. ಇದೇ ಸಂದರ್ಭದಲ್ಲಿ ಅಲ್ಝೆಮಿರ್ ಕಾಯಿಲೆಗಳ ಜೊತೆ ಜೊತೆಗೆ ಮನುಷ್ಯ ಸಂಬಂಧಗಳನ್ನು ಪರಿಚಯ ಮಾಡಿಸುವ ಹತ್ತು ಹಲವು ಯಶಸ್ವೀ ಚಿತ್ರಗಳು ಹಲವು ಭಾಷೆಗಳಲ್ಲಿ ಮೂಡಿ ಬಂದಿವೆ. ಮಲಯಾಳಂನಲ್ಲಿ ‘ತನ್ಮಾತ್ರ’ ಚಿತ್ರದಲ್ಲಿ ಅಲ್ಝೆಮಿರ್ ಕಾಯಿಲೆ ಪೀಡಿತನ ಮೊದಲ ಹಂತದಿಂದ ಕೊನೆಯ ಹಂತದವರೆಗಿನ ಬದಲಾವಣೆಗಳನ್ನು ಮೋಹನ್‌ಲಾಲ್ ಅತ್ಯದ್ಭುತವಾಗಿ ಕಟ್ಟಿಕೊಟ್ಟಿದ್ದರು. ಬಹುಶಃ ಭಾರತೀಯ ಚಿತ್ರಗಳಲ್ಲಿ ಅಲ್ಝೆಮಿರ್ ಕಾಯಿಲೆಯನ್ನು ವಸ್ತುವಾಗಿಟ್ಟುಕೊಂಡು ಬಂದ ಅತ್ಯುತ್ತಮ ಚಿತ್ರ ‘ತನ್ಮಾತ್ರಂ’. ಹಲವು ಪ್ರಶಸ್ತಿಗಳನ್ನೂ ಈ ಚಿತ್ರ ತನ್ನದಾಗಿಸಿಕೊಂಡಿತ್ತು. ಅಲ್ಝೆಮಿರ್ ಕಾಯಿಲೆ, ಆ ಕಾಯಿಲೆ ಪೀಡಿತನ ಸುತ್ತಮುತ್ತಲಿರುವ ಸಂಬಂಧಗಳ ಕೊಂಡಿಯ ಗಟ್ಟಿತನವನ್ನು ಪರೀಕ್ಷಿಸುತ್ತದೆ.
ಇದೀಗ ಕನ್ನಡದಲ್ಲಿ ಬಿಡುಗಡೆಯಾಗಿರುವ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಕೇವಲ ಅಲ್ಝೆಮಿರ್ ಕಾಯಿಲೆ ಪೀಡಿತ ವೃದ್ಧರೊಬ್ಬರ ಕತೆ ಮಾತ್ರವಲ್ಲ. ಅವನ ಮಗನ ಕತೆಯೂ ಹೌದು. ಯಾಕೆಂದರೆ ಅವನಿಗೆ ತಿಳಿಯದಂತೆಯೇ ಆತನೂ ಒಂದು ಮರೆವಿನ ಕಾಯಿಲೆಗೀಡಾಗಿದ್ದ. ತಾನು ಮರೆತದ್ದು ಒಂದೊಂದಾಗಿ ನೆನಪಿಗೆ ಬರಬೇಕಾದರೆ, ಆತನ ಅಲ್ಝೆಮಿರ್ ಕಾಯಿಲೆಪೀಡಿತ ತಂದೆ ಇದ್ದಕ್ಕಿದ್ದಂತೆಯೇ ಕಾಣೆಯಾಗಬೇಕಾಗುತ್ತದೆ. ತಂದೆಯನ್ನು ಮಗ ಹುಡುಕುವ ಆಟ ಶುರುವಾಗುತ್ತದೆ. ಹುಡುಕುತ್ತಾ ಹೋದಂತೆಯೇ ಅವನಿಗೆ ಅರಿವಾಗುತ್ತಾ ಹೋಗುತ್ತದೆ ‘‘ಅಲ್ಝೆಮಿರ್ ಕಾಯಿಲೆ ಬಂದಿರುವುದು ತಂದೆಗೇ ಆಗಿದ್ದರೂ, ನಿಜಕ್ಕೂ ಮರೆವು ಬಂದಿರುವುದು ತನಗೆ’’ ಎನ್ನುವುದು. ತಂದೆಯನ್ನು ಹುಡುಕುವ ಅವನ ಕೆಲಸ ಹೊರಗಿನಿಂದ ಮಾತ್ರವಲ್ಲ, ಒಳಗಿನಿಂದಲೂ ನಡೆಯುತ್ತದೆ. ತಂದೆಯನ್ನು ಹುಡುಕುತ್ತಾ ಹುಡುಕುತ್ತಾ, ಅವನಿಗೆ ಗೊತ್ತಿಲ್ಲದ ಹೊಸ ಹೃದಯವಂತ ತಂದೆಯ ಪರಿಚಯವಾಗುತ್ತದೆ. ತನ್ನ ಬದುಕಿನಲ್ಲಿ ಕೈ ಹಿಡಿದು ನಡೆಸಿದ, ತನ್ನ ಪ್ರಶ್ನೆಗಳಿಗೆ ಒಂದಿನಿತು ಮುನಿಸು ತೋರದೆ ಉತ್ತರಿಸುತ್ತಾ ತನ್ನನ್ನು ಬೆಳೆಸಿದ ತಂದೆಯ ನೆನಪುಗಳು ಒಂದೊಂದಾಗಿ ಜೀವಂತವಾಗುತ್ತಾ ಹೋಗುತ್ತದೆ.
ನಿರ್ದೇಶಕ ಹೇಮಂತ್ ರಾವ್ ‘ಅಲ್ಝೆಮಿರ್’ ಕಾಯಿಲೆಯನ್ನು ನೆಪವಾಗಿಟ್ಟುಕೊಂಡು ತಂದೆ-ಮಕ್ಕಳ ಸಂಬಂಧವನ್ನು ಶೋಧಿಸುವ ಕೆಲಸ ಮಾಡಿದ್ದಾರೆ. ಇಲ್ಲಿ ಮರೆವಿನ ಕಾಯಿಲೆಯಿಂದ ಕಳೆದು ಹೋಗಿರುವುದು ಕೇವಲ ವೆಂಕೋಬರಾವ್ ಮಾತ್ರವಲ್ಲ. ಎಲ್ಲರೂ ಬೇರೆ ಬೇರೆ ಕಾರಣಗಳಿಂದ ಕಳೆದುಹೋಗಿದ್ದಾರೆ. ತಾವು ಎಲ್ಲಿದ್ದೇವೆ, ಎಲ್ಲಿಗೆ ತಲುಪಬೇಕು ಎನ್ನುವ ದಾರಿ ತಿಳಿಯದೆ ತಡಕಾಡುತ್ತಿದ್ದಾರೆ. ಚಿತ್ರದ ಕೊನೆಯಲ್ಲಿ ಇದು ವೆಂಕೋಬರಾವ್‌ನ ಮಗ ಶಿವನಿಗೂ ಅರ್ಥವಾಗುತ್ತದೆ. ಕ್ರಿಮಿನಲ್‌ಗಳ ಜಾಲದೊಳಗೆ ಒದ್ದಾಡಿ ಅಂತಿಮ ಸಾವಿನ ಕ್ಷಣದಲ್ಲಿ ರೌಡಿ ರಂಗನಿಗೂ ಅರ್ಥವಾಗುತ್ತದೆ. ಶಿವ (ರಕ್ಷಿತ್ ಶೆಟ್ಟಿ) ದೊಡ್ಡ ಕಂಪೆನಿಯ ಮುಖ್ಯಸ್ಥ. ಇವನ ತಂದೆ ಅಲ್ಝೆಮಿರ್ ಕಾಯಿಲೆ ಪೀಡಿತ ವೆಂಕೋಬರಾವ್(ಅನಂತನಾಗ್) ಈತನ ಬದುಕಿಗೆ ಒಂದು ತೊಡರು.
ಅಂತಿಮವಾಗಿ ತಂದೆಯನ್ನು ವೃದ್ಧಾಶ್ರಮದೊಳಗೆ ಬಿಟ್ಟು, ಪ್ರತಿ ತಿಂಗಳು ಹಣ ಕಳುಹಿಸಿ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಾನೆ. ಹೀಗಿರುವಾಗಲೇಒಂದು ದಿನ ಆತನ ತಂದೆ ಕಾಣೆಯಾ ಗುತ್ತಾರೆ. ಮಗ ಕಂಗಾಲಾಗುತ್ತಾನೆ. ಆಶ್ರಮದ ವೃದ್ಧೆ ಸಹನಾ(ಶ್ರುತಿ ಹರಿಹರನ್) ಮತ್ತು ಈತ ಅವನಿಗಾಗಿ ನಗರದಲ್ಲಿಡೀ ಹುಡುಕಾಡುವ ಕೆಲಸದಲ್ಲಿ ತೊಡಗುತ್ತಾರೆ. ಈ ಹುಡುಕಾಟದ ದಾರಿಯಲ್ಲಿ ಆತನಿಗೆ ತನ್ನ ತಂದೆಯ ವ್ಯಕ್ತಿತ್ವ, ಜೀವನ, ಜಗತ್ತು ಪರಿಚಯವಾಗುತ್ತಾ ಹೋಗುತ್ತದೆ. ತಾನು ಈ ಹಿಂದೆಯೇ ಏನನ್ನೋ ಕಳೆದುಕೊಂಡಿರುವುದು ಅವನ ಅರಿವಿಗೆ ಬರುತ್ತದೆ. ಇದೇ ಸಂದರ್ಭದಲ್ಲಿ ಒಂದು ಕ್ರಿಮಿನಲ್ ಗ್ಯಾಂಗ್‌ನ ಕತೆಯೂ ಇದರಲ್ಲಿ ಸೇರಿಕೊಂಡು ಬಿಡುತ್ತದೆ. ವೆಂಕೋಬರಾವ್ ಮತ್ತು ಈ ಕ್ರಿಮಿನಲ್ ಗ್ಯಾಂಗ್‌ನ ಕೈಗೆ ಸಿಗುವುದು, ವೆಂಕೋಬರಾವ್‌ನ ಮಗುವಿನ ಮುಗ್ಧತೆ ರೌಡಿ ಮಂಜನ ಮನಸ್ಸನ್ನು ಸಣ್ಣಗೆ ಕದಡಿಸುವುದು, ಅಂತಿಮವಾಗಿ ಎನ್‌ಕೌಂಟರ್‌ನಲ್ಲಿ ಸಾಯುವ ಸಂದರ್ಭದಲ್ಲಿ ಆತನ ಪಾಯಶ್ಚಿತ ಪ್ರೇಕ್ಷಕರ ಮನಸ್ಸನ್ನು ದ್ರವವಾಗಿಸುತ್ತದೆ.
ಚಿತ್ರದ ಕೊನೆಯಲ್ಲಿ ಮಗ ತನ್ನ ತಂದೆಯನ್ನು ಗಳಿಸುತ್ತಾನೆಯೇ, ತಾನು ಕಳೆದುಕೊಂಡದ್ದನ್ನು ಪಡೆದುಕೊಳ್ಳುತ್ತಾನೆಯೇ ಎನ್ನುವುದೇ ಕ್ಲೈಮಾಕ್ಸ್. ವೆಂಕೋಬರಾವ್ ಪಾತ್ರದಲ್ಲಿ ಅನಂತನಾಗ್ ಅಭಿನಯ ಚಿತ್ರದ ಹೆಗ್ಗಳಿಕೆ. ಪಾತ್ರಕ್ಕೆ ಬೇಕಾದ ಮುಗ್ಧತೆ, ನಿರ್ಲಿಪ್ತತೆಯನ್ನು ಮೈತುಂಬಾ ಆವಾಹಿಸಿಕೊಂಡು ನಟಿಸಿದ್ದಾರೆ. ಮಗನಾಗಿ ರಕ್ಷಿತ್ ಶೆಟ್ಟಿ ಕೂಡ ಇದಕ್ಕೆ ಹೊರತಲ್ಲ. ಸ್ವಾರ್ಥಿ ಮಗನ ಗಡಸು ವ್ಯಕ್ತಿತ್ವ ಅವನ ಚಲನ ವಲನದಲ್ಲಿ ಅತ್ಯಂತ ಸಹಜವಾಗಿ ಮೂಡಿ ಬಂದಿದೆ. ಸಹನಾ ಪಾತ್ರದ ಸುಕೋಮಲತೆಗೆ ಶೃತಿ ಹರಿಹರನ್ ಪೂರಕವಾಗಿದ್ದಾರೆ. ರೌಡಿ ಮಂಜನ ಪಾತ್ರದಲ್ಲಿ ವಶಿಷ್ಠ ಚಿತ್ರಕ್ಕೆ ಮತ್ತೊಂದು ಮಗ್ಗುಲನ್ನು ನೀಡುತ್ತಾರೆ. ಸರಳವಾದ ವಸ್ತುವನ್ನು ಇಟ್ಟುಕೊಂಡು, ಎಲ್ಲೂ ಅನಗತ್ಯ ಎಳೆಯದೆ, ಪ್ರೇಕ್ಷಕರಿಗೆ ರುಚಿಸುವ ಆಹ್ಲಾದಕರ ಭಾಷೆಯಲ್ಲಿ ಕಟ್ಟಿಕೊಟ್ಟ ನಿರ್ದೇಶಕರ ಪ್ರಯತ್ನ ಅಭಿನಂದನಾರ್ಹ.
ಇತ್ತೀಚೆಗೆ ಕನ್ನಡ ಚಿತ್ರೋದ್ಯಮಕ್ಕೆ ಹೊಸ ಹುಡುಗರು, ಹೊಸ ಆಲೋಚನೆಗಳೊಂದಿಗೆ, ಹೊಸ ಭಾಷೆ, ತಂತ್ರಗಳ ಜೊತೆಗೆ ಕಾಲಿಡತೊಡಗಿದ್ದಾರೆ. ತಿಥಿ, ಯೂಟರ್ನ್, ಗೋಧಿ ಬಣ್ಣ ಇವೆಲ್ಲವೂ ಹೊಸ ಯೋಚನೆಗಳ ಫಲ. ಕನ್ನಡ ಚಿತ್ರಗಳನ್ನು ನೋಡುವವರಿಲ್ಲ ಎನ್ನುವ ಕೆಲ ಹಿರಿಯರ ಕೊರಗಿಗೆ ಉತ್ತರವಾಗಿ, ಈ ಹುಡುಗರು ಹುಟ್ಟಿಕೊಂಡಿದ್ದಾರೆ. ವಿಭಿನ್ನ ಪ್ರಯತ್ನಕ್ಕೆ ಖಂಡಿತ ಪ್ರೇಕ್ಷಕರು ಸ್ಪಂದಿಸುತ್ತಾರೆ ಎನ್ನುವುದನ್ನು ಈ ಯುವಕರು ತೋರಿಸಿಕೊಡುತ್ತಿದ್ದಾರೆ. ಇವರಿಂದ ಕನ್ನಡ ಚಿತ್ರೋದ್ಯಮ ಹೊಸ ಚೈತನ್ಯವನ್ನು ಪಡೆದುಕೊಳ್ಳುತ್ತಿದೆ. ಗೋಧಿ ಬಣ್ಣ....ಕ್ಕೆ ಮಾರು ಹೋಗಿರುವ ಪ್ರೇಕ್ಷಕರೇ ಇದಕ್ಕೆ ಸಾಕ್ಷಿ.