×
Ad

ಪೊಲೀಸ್ ದೂರು ದಾಖಲಿಸಿದ ಅಮೀರ್ ಖಾನ್ ಪತ್ನಿ ಕಿರಣ್

Update: 2016-06-05 13:01 IST

ಮುಂಬೈ: ತಮ್ಮ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ನಿರ್ವಹಿಸುತ್ತಿದ್ದಾರೆ ಎಂದು ಚಿತ್ರ ನಿರ್ದೇಶಕಿ ಮತ್ತು ನಟ ಅಮೀರ್ ಖಾನ್ ಅವರ ಪತ್ನಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಖಾತೆ ಮೂಲಕ ನನ್ನ ಸ್ನೇಹಿತರು ಹಾಗೂ ಕುಟುಂಬ ವರ್ಗದ ಜತೆ ಸಂವಾದ (ಚಾಟಿಂಗ್) ನಡೆಸುತ್ತಿದ್ದಾರೆ ಎಂದು ದೂರು ನೀಡಲಾಗಿದೆ.
ನಕಲಿ ಖಾತೆ ತೆರೆದ ಹಾಗೂ ಐಡೆಂಟಿಟಿ ಕಳ್ಳತನ ಪ್ರಕರಣ ಕುರಿತು ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚುವರಿ ಪೊಲೀಸ್ ಕಮಿಷನರ್ ಕೆಎಂಎಂ ಪ್ರಸನ್ನ, ಪ್ರಕರಣ ದಾಖಲಾಗಿರುವುದನ್ನು ಖಚಿತಪಡಿಸಿದ್ದಾರೆ. ಆದರೆ ಈ ಬಗ್ಗೆ ವಿವರ ನೀಡಲು ನಿರಾಕರಿಸಿದ್ದು, ಇದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ವಿವರ ಬಹಿರಂಗಪಡಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿವರ ಪಡೆಯಲು ಕಿರಣ್ ರಾವ್ ಅವರನ್ನು ಸಂಪರ್ಕಿಸಿದಾಗ ಕೂಡಾ ಪ್ರತಿಸ್ಪಂದನೆ ನೀಡಲು ನಿರಾಕರಿಸಿದ್ದಾರೆ. ಗುರುವಾರ ಕಿರಣ್ ರಾವ್ ಲಿಖಿತ ದೂರನ್ನು ಸೈಬರ್ ಠಾಣೆಯಲ್ಲಿ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಸ್ನೇಹಿತರು ಇತ್ತೀಚೆಗೆ ಸರಣಿ ಸಂವಾದ ನಡೆಸಿರುವ ಬಗ್ಗೆ ಕೇಳಿದಾಗ, ಕಿರಣ್ ರಾವ್ ಕಕ್ಕಾಬಿಕ್ಕಿಯಾದರು. ತಕ್ಷಣ ಫೇಸ್ ಬುಕ್ ಲಾಗ್ ಇನ್ ಮಾಡಿದಾಗ, ತಮ್ಮ ಭಾವಚಿತ್ರವನ್ನು ಯಾರೋ ಅಪ್ಲೋಡ್ ಮಾಡಿ, ಕಿರಣ್ ರಾವ್ ಹೆಸರಿನಲ್ಲಿ ನಕಲಿ ಖಾತೆ ನಿರ್ವಹಿಸುತ್ತಿರುವುದು ಗಮನಕ್ಕೆ ಬಂತು ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.
ಯಾವ ಐಪಿ ಅಡ್ರೆಸ್ ನಿಂದ ಇದನ್ನು ನಿರ್ವಹಿಸಲಾಗುತ್ತಿದೆ ಎಂದು ಸುಲಭವಾಗಿ ತಿಳಿಯಬಹುದಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News