×
Ad

ಬಿಜೆಪಿ ಆಡಳಿತದ ಗೋವಾದಲ್ಲಿ ಗಾಂಧಿಜಯಂತಿಗೆ ಇನ್ನು ರಜೆ ಇಲ್ಲ

Update: 2016-06-05 15:49 IST

ಪಣಜಿ: ಗಾಂಧಿ ಜಯಂತಿಗೆ ಇದ್ದ ಸಾರ್ವತ್ರಿಕ ರಜೆಯನ್ನು ರದ್ದುಪಡಿಸಲು ಗೋವಾದ ಬಿಜೆಪಿ ಸರಕಾರ ನಿರ್ಧರಿಸಿದೆ. ಇದು ದೇಶಾದ್ಯಂತ ವಿವಾದಕ್ಕೆ ಕಾರಣವಾಗುವ ಸೂಚನೆಗಳು ಕಂಡು ಬಂದಿವೆ. ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಹುಟ್ಟುಹಬ್ಬವಾದ ಅಕ್ಟೋಬರ್ 2ರಂದು ಇದ್ದ ರಜೆಯನ್ನು ರದ್ದು ಮಾಡಲು ಪ್ರಸಕ್ತ ವರ್ಷದಿಂದ ನಿರ್ಧರಿಸಿದ್ದು, ಹೊಸ ಅಧಿಕೃತ ರಜೆ ಪಟ್ಟಿ ಬಿಡುಗಡೆ ಮಾಡಿದೆ.
ಸರಕಾರದ ಈ ನಿರ್ಧಾರಕ್ಕೆ ಕೆಲ ಶಾಸಕರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ವಾಣಿಜ್ಯ ಹಾಗೂ ಕೈಗಾರಿಕಾ ರಜೆ ಪಟ್ಟಿಯಿಂದ ಗಾಂಧಿ ಜಯಂತಿಯನ್ನು ಕಿತ್ತು ಹಾಕುವ ನಿರ್ಧಾರ, ಲಂಡನ್ ನಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಅನಾವರಣಗೊಳಿಸಿದ ದಿನವೇ ಬಂದಿರುವುದು ಕಾಕತಾಳೀಯವೆನಿಸಿದೆ.
ದಶಕಗಳ ಕಾಲದಿಂದಲೂ ಗಾಂಧಿಜಯಂತಿಯನ್ನು ದೇಶಾದ್ಯಂತ ಆಚರಿಸುತ್ತಾ ಬರಲಾಗುತ್ತಿದೆ. ದೇಶಕ್ಕೆ ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಸಾಧಕನಿಗೆ ಗೌರವ ಸಂಪರ್ಕಿಸಲು ಗಾಂಧಿಜಯಂತಿ ಆಚರಿಸಲಾಗುತ್ತಿದೆ.
ಗಾಂಧಿ ಜಯಂತಿಯ ರಜೆ ರದ್ದುಪಡಿಸಲು ಏನು ಕಾರಣ ಎನ್ನುವುದನ್ನು ಗೋವಾ ಸರಕಾರ ಬಹಿರಂಗಪಡಿಸಿಲ್ಲವಾದರೂ, ಸಾಮಾನ್ಯ ಆಡಳಿತ ವಿಭಾಗದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಇದಕ್ಕೆ ಸರಕಾರ ಅನುಮೋದನೆ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್   ಲಭ್ಯರಿಲ್ಲ.
ಲಂಡನ್ ನ ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಈ ದಿನ ಸರಕಾರ ಇಂಥ ನಿರ್ಧಾರ ಕೈಗೊಂಡಿರುವುದು ಅಚ್ಚರಿ ತಂದಿದೆ ಎಂದು ವಿರೋಧ ಪಕ್ಷದಲ್ಲಿರುವ ಪಕ್ಷೇತರ ಶಾಸಕ ವಿಜಯ್ ಸರದೇಸಾಯಿ ಅಭಿಪ್ರಾಯಪಟ್ಟಿದ್ದಾರೆ.
ಗೋವಾದ ಏಕೈಕ ರಾಜ್ಯಸಭಾ ಸದಸ್ಯ ಶಾಂತಾರಾಮ ನಾಯಕ್ ಕೂಡಾ ಈ ನಿರ್ಧಾರವನ್ನು ಖಂಡಿಸಿದ್ದಾರೆ. ಇದು ರಾಷ್ಟ್ರಪಿತನಿಗೆ ಮಾಡಿರುವ ಅವಮಾನ ಎಂದು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News