‘ರಾಜದ್ರೋಹ’ ಕಾನೂನು ಬಳಕೆ ಸರಕಾರಕ್ಕೆ ಶೋಭೆಯಲ್ಲ
ಜೂನ್ ನಾಲ್ಕರಂದು ರಾಜ್ಯ ಸರಕಾರ ಬೆವರೊರೆಸಿಕೊಂಡದ್ದು ನಾಡಿನ ಜನತೆ ನೋಡಿದ್ದಾರೆ. ತಳಸ್ತರದ ಪೊಲೀಸರ ಪ್ರತಿಭಟನೆಯ ವದಂತಿಗೇ ಸರಕಾರ ತತ್ತರಿಸಿತ್ತು. ಇದು ಸಹಜವೂ ಕೂಡ. ಯಾಕೆಂದರೆ ಉಳಿದೆಲ್ಲ ಸೇವೆಗಳಿಗಿಂತ ಭಿನ್ನವಾದುದು ಪೊಲೀಸರ ಸೇವೆ. ಉಳಿದ ಸೇವೆಗಳಿಗೆ ಜನಸಾಮಾನ್ಯರ ಬದುಕಿನ ಜೊತೆಗೆ ಸಂಬಂಧವಿದ್ದರೆ, ಪೊಲೀಸರ ಸೇವೆಗೆ, ಪ್ರಭುತ್ವದ ಜೊತೆಗೆ ನೇರ ಸಂಬಂಧವಿದೆ. ಪ್ರಭುತ್ವ ಅದೆಷ್ಟೇ ಜನಪರವಾಗಿರಲಿ, ಪೊಲೀಸ್ ಮತ್ತು ಸೇನೆ ಅದರ ನೆರಳಾಗಿ ಹಿಂಬಾಲಿಸುತ್ತಿರುತ್ತದೆ. ಪೊಲೀಸರ ಸೇವೆಯ ಅಂತಿಮ ಗುಣ ಪ್ರಭುತ್ವದ ರಕ್ಷಣೆಯೇ ಹೊರತು ಜನರ ರಕ್ಷಣೆಯಲ್ಲ. ಪ್ರಭುತ್ವ ಜನರದ್ದಾಗಿರುವುದರಿಂದ ಪೊಲೀಸರ ಸೇವೆಯೂ ಜನರದ್ದು ಎಂದು ಗುರುತಿಸಬಹುದು. ಪ್ರಭುತ್ವ ಜನರ ಜೊತೆಗೆ ಸಂಬಂಧವನ್ನು ಕಳೆದುಕೊಂಡರೆ ಪೊಲೀಸರೂ ಶ್ರೀಸಾಮಾನ್ಯರ ಜೊತೆಗಿನ ಸಂಬಂಧವನ್ನು ಕಳಚಿಕೊಳ್ಳುತ್ತಾರೆ. ತುರ್ತು ಪರಿಸ್ಥಿತಿ ಘೋಷಣೆಯಾದಾಗ ಪೊಲೀಸರು ಹೇಗೆ ಜನರ ಮೇಲೆ ದೌರ್ಜನ್ಯವನ್ನು ಮೆರೆದರು ಎನ್ನುವುದನ್ನು ಈ ದೃಷ್ಟಿಯಿಂದ ನಾವು ನೋಡಬೇಕಾಗುತ್ತದೆ. ಅದೇನೇ ಇರಲಿ. ಜೂನ್ ನಾಲ್ಕರಂದು ಪೊಲೀಸರು ಪ್ರತಿಭಟನೆ ಮಾಡದೇ ಇದ್ದುದರಿಂದ ಸಮಸ್ಯೆ ಸುಲಭದಲ್ಲಿ ಪರಿಹಾರವಾಯಿತು. ಸರಕಾರದ ಬೆದರಿಕೆಗೆ ಮಣಿದೋ ಅಥವಾ ಇನ್ನಿತರ ಕಾರಣದಿಂದಲೋ ಪ್ರತಿಭಟನೆ ನಡೆಯಲಿಲ್ಲ. ಒಂದು ವೇಳೆ ಪ್ರತಿಭಟನೆ ನಡೆದಿದ್ದೇ ಆಗಿದ್ದರೆ ವ್ಯವಸ್ಥೆ ಅರಾಜಕವಾಗುತ್ತಿತ್ತು. ಇದನ್ನು ನಾವು ಒಪ್ಪಿಕೊಳ್ಳಲೇಬೇಕು.
ಪ್ರತಿಭಟನೆ ನಡೆಯಲಿಲ್ಲ ಎನ್ನುವುದು ನಿಜವೇ ಆಗಿದ್ದರೂ, ಬರೇ ಪ್ರತಿಭಟನೆಯ ವದಂತಿ ಪೊಲೀಸರ ಸಮಸ್ಯೆಗಳನ್ನು ಸರಕಾರಕ್ಕೆ ಮತ್ತು ಮೇಲಧಿಕಾರಿಗಳಿಗೆ ಸಣ್ಣ ಪ್ರಮಾಣದಲ್ಲಿ ತಲುಪಿಸಿದೆ ಎನ್ನುವುದನ್ನು ನಾವು ಮರೆಯುವ ಹಾಗಿಲ್ಲ. ರಾಜ್ಯದಲ್ಲಿ ಮೊದಲ ಬಾರಿಗೆ ತಳಸ್ತರದ ಪೊಲೀಸರ ಸಮಸ್ಯೆಗಳ ಬಗ್ಗೆ ಸರಕಾರ ಗಂಭೀರವಾಗಿ ತೆಗೆದುಕೊಳ್ಳುವಂತಾಯಿತು. ಎಲ್ಲಕ್ಕಿಂತ ಮುಖ್ಯವಾಗಿ, ಈ ಪ್ರತಿಭಟನೆ ಸರಕಾರದ ವಿರುದ್ಧ ನಡೆದಿದೆ ಎನ್ನುವುದಕ್ಕಿಂತ ಪೊಲೀಸ್ ಪೇದೆಗಳು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ನಡೆದಿದೆ. ಪೊಲೀಸರು ಪ್ರತಿಭಟನೆ ನಡೆಸುವಂತಿಲ್ಲ, ಸಂಘಟನೆ ಸಂಘಟಿಸುವಂತಿಲ್ಲ, ಬೀದಿಗಿಳಿಯುವಂತಿಲ್ಲ. ತಮಗೆ ಬೇಕಾದ ಹಾಗೆ ರಜೆ ಮಾಡುವಂತಿಲ್ಲ. ಇವೆಲ್ಲ ಅವರ ಕೆಲಸದ ಗುಣಲಕ್ಷಣಗಳು. ಆದರೆ ಇದನ್ನೇ ಬಳಸಿಕೊಂಡು ಅಧಿಕಾರಿಗಳು ಅವರನ್ನು ತಮ್ಮ ಮೂಗಿನ ನೇರಕ್ಕೆ ಕುಣಿಸುತ್ತಿದ್ದುದು ಸುಳ್ಳಲ್ಲ. ತಮಗಾಗದ ಪೊಲೀಸರ ಮೇಲೆ ಅಧಿಕಾರಿಗಳು ಸೇಡು ತೀರಿಸಿಕೊಳ್ಳುವುದು, ಅವರ ಭಡ್ತಿಗೆ ಅಡ್ಡಗಾಲು ಹಾಕುವುದು, ತಮಗೆ ಉದ್ದಂಡ ಬೀಳದ ಪೊಲೀಸರ ಮೇಲೆ ಸೇಡು ತೀರಿಸಿಕೊಳ್ಳುವುದು ಇಲಾಖೆಯಲ್ಲಿ ಸಾಮಾನ್ಯವಾಗಿತ್ತು. ಇದರ ವಿರುದ್ಧ ಯಾವುದೇ ರೀತಿಯಲ್ಲಿ ಅಸಮಾಧಾನ ವ್ಯಕ್ತಪಡಿಸುವಂತಹ ಸ್ಥಿತಿ ಪೊಲೀಸರಿಗಿರಲಿಲ್ಲ. ಯಾಕೆಂದರೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿದರೂ ಅದು ಅವರಿಗೆ ಮುಳುವಾಗುತ್ತಿತ್ತು.
ತಮ್ಮ ಸಮಸ್ಯೆಗಳನ್ನು ಸರಕಾರಕ್ಕೆ ತಲುಪಿಸಿದರೂ ಅವರು ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾದಂತಹ ವಾತಾವರಣ ಇಲಾಖೆಯಲ್ಲಿದೆ. ಒಂದು ರೀತಿಯಲ್ಲಿ ಅವರು ಉಸಿರುಗಟ್ಟುವ ಸ್ಥಿತಿಯಲ್ಲಿದ್ದಾರೆ. ಆದುದರಿಂದಲೇ, ಸದ್ಯದ ಸಂಘರ್ಷವನ್ನು ಮೇಲಧಿಕಾರಿಗಳು ಮತ್ತು ಕೆಳ ಅಧಿಕಾರಿಗಳ ನಡುವಿನ ಸಂಘರ್ಷವೆಂದೇ ಕರೆಯಬೇಕು. ಆದರೆ ಪೊಲೀಸ್ ಇಲಾಖೆಯಲ್ಲಿ ತಳಸ್ತರದ ಪೊಲೀಸರ ಅನಿವಾರ್ಯತೆ ಎಷ್ಟು ಎನ್ನುವುದು ಕಳೆದ ಒಂದು ವಾರದ ಬೆಳವಣಿಗೆಗಳಲ್ಲಿ ಸರಕಾರಕ್ಕೂ, ಮೇಲಧಿಕಾರಿಗಳಿಗೂ ಅರ್ಥವಾಗಿದೆ. ಸರಕಾರ ತನ್ನ ಅಧಿಕಾರವನ್ನು ಬಳಸಿ ಅವರ ಪ್ರತಿಭಟನೆಯ ಸದ್ದಡಗಿಸಿರಬಹುದು. ಆದರೆ ಅವರ ಬೇಡಿಕೆಗಳನ್ನು ಗಂಭೀರವಾಗಿ ಸ್ವೀಕರಿಸುವ ಹಂತಕ್ಕೆ ಬಂದಿರುವುದಂತೂ ಸತ್ಯ. ಇದೇ ಸಂದರ್ಭದಲ್ಲಿ ಮೇಲಧಿಕಾರಿಗಳು ತಳಸ್ತರದ ಪೊಲೀಸರ ಬಗ್ಗೆ ಒಂದಿಷ್ಟು ಗಮನ ಹರಿಸುವುದಕ್ಕೂ ತೊಡಗಿದ್ದಾರೆ. ಪೊಲೀಸ್ ಪೇದೆಗಳಿಗೂ ವ್ಯಕ್ತಿತ್ವವಿದೆ ಎನ್ನುವುದನ್ನು ಒಪ್ಪಿಕೊಳ್ಳುವುದಕ್ಕೆ ಒಂದಿಷ್ಟು ಮನಸ್ಸು ಮಾಡಿದ್ದಾರೆ. ಇದು ಎಷ್ಟರವರೆಗೆ ಎನ್ನುವುದನ್ನು ಕಾಲವೇ ಹೇಳಬೇಕು.
ಆದರೆ, ಪೊಲೀಸರ ಈ ಪ್ರತಿಭಟನೆ ಇಂದು ಅಡಗಿರಬಹುದು. ಆದರೆ ಸರಕಾರ ಮತ್ತು ಮೇಲಧಿಕಾರಿಗಳು ಅವರ ಭಾವನೆಗಳಿಗೆ ಸ್ಪಂದಿಸದೇ ಇದ್ದರೆ, ಮುಂದೆಂದಾದರೂ ಮತ್ತೆ ಸಿಡಿಯಬಹುದು ಎನ್ನುವುದನ್ನೂ ನಿರಾಕರಿಸಲಾಗುವುದಿಲ್ಲ. ಆದುದರಿಂದ, ಪೊಲೀಸರ ಎಲ್ಲ ಬೇಡಿಕೆಗಳಲ್ಲದಿದ್ದರೂ ಮೂಲಭೂತ ಬೇಡಿಕೆಗಳಿಗೆ ಸ್ಪಂದಿಸಿ ಅದನ್ನು ಈಡೇರಿಸುವುದಕ್ಕೆ ಸರಕಾರ ಮನ ಮಾಡಬೇಕು. ಇದೇ ಸಂದರ್ಭದಲ್ಲಿ ಮೇಲಧಿಕಾರಿಗಳು ಪೊಲೀಸರ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವರೊಂದಿಗೆ ವ್ಯವಹರಿಸಬೇಕು. ಅವರನ್ನು ತಮ್ಮ ಗುಲಾಮರು ಎನ್ನುವಂತೆ ನಡೆಸಿಕೊಳ್ಳದೆ ವ್ಯವಸ್ಥೆಯ ಬಹುಮುಖ್ಯ ಅಂಗ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಕೆಲಸದ ಸಂದರ್ಭದಲ್ಲಿ ಅವರ ಘನತೆಗೆ, ಅವರ ಸ್ವಂತಿಕೆಗೆ ಧಕ್ಕೆ ತರದಂತೆ ನೋಡಿಕೊಳ್ಳಬೇಕು.
ಇದೇ ಸಂದರ್ಭದಲ್ಲಿ ಈ ಪ್ರತಿಭಟನೆಯ ವದಂತಿಯನ್ನು ಹರಡಿದಾತ ಪೊಲೀಸ್ ಇಲಾಖೆಯ ಮೇಲಧಿಕಾರಿಗಳೊಂದಿಗೆ ಅಸಮಾಧಾನ ಹೊಂದಿದ ಮಾಜಿ ಸಿಬ್ಬಂದಿ ಪೊಲೀಸ್ ಇಲಾಖೆಯನ್ನು ಮತ್ತು ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿ ಸೇಡು ತೀರಿಸುವುದೂ ಆತನ ಉದ್ದೇಶವಾಗಿರಬಹುದು. ಆತನ ಉದ್ದೇಶ ಏನೇ ಇರಲಿ, ಅದಕ್ಕೆ ಅಷ್ಟು ತೀವ್ರವಾದ ಪ್ರತಿಕ್ರಿಯೆ ಸಿಗುವುದಕ್ಕೆ ಕಾರಣ, ಪೊಲೀಸರು ಹತ್ತು ಹಲವು ಒತ್ತಡಗಳಲ್ಲಿ ಸಿಲುಕಿಕೊಂಡಿರುವುದು. ಸಾಮಾಜಿಕ ತಾಣಗಳೂ ಇದಕ್ಕೆ ಬೆಂಕಿ ಸುರಿದವು. ಇದೇ ಸಂದರ್ಭದಲ್ಲಿ, ಪ್ರತಿಭಟನೆಯ ವದಂತಿಯನ್ನು ಹರಡಿದ, ಅದಕ್ಕೆ ಕುಮ್ಮಕ್ಕು ನೀಡಿದಾತ ಸರಕಾರದ ವಿರುದ್ಧ ದಂಗೆಯ ಮಾತನ್ನೂ ಆಡಿದ್ದಾನೆ. ಇದನ್ನೇ ಮುಂದಿಟ್ಟುಕೊಂಡು ಇದೀಗ ಸರಕಾರ ಆತನ ಮೇಲೆ ‘ರಾಜದ್ರೋಹ’ದ ಪ್ರಕರಣವನ್ನು ದಾಖಲಿಸಲು ಮುಂದಾಗಿದೆ. ಆತ ಮಾಡಿರುವುದು ಕಾನೂನು ವಿರೋಧಿ, ಜನ ವಿರೋಧಿ, ಸರಕಾರ ವಿರೋಧಿ ಕೃತ್ಯವೇ ಆಗಿರಬಹುದು. ಆದರೆ ರಾಜದ್ರೋಹದಂತಹ ಪ್ರಕರಣವನ್ನು ದಾಖಲಿಸುವ ಮೊದಲು ರಾಜ್ಯ ಸರಕಾರ ಆಲೋಚಿಸಬೇಕಾಗಿದೆ.
ಈಗಾಗಲೇ ಕೇಂದ್ರದಲ್ಲಿ ಬಿಜೆಪಿ ಸರಕಾರ ಈ ರಾಜದ್ರೋಹ ಪ್ರಕರಣವನ್ನು ತನ್ನ ವಿರೋಧಿಗಳೆಲ್ಲರ ಮೇಲೆ ದಾಖಲಿಸುತ್ತಾ ಕುಖ್ಯಾತವಾಗಿದೆ. ಸರಕಾರದ ವಿರುದ್ಧ ಮಾತನಾಡಿದ ವಿದ್ಯಾರ್ಥಿಗಳ ಮೇಲೂ ಮೋದಿ ಸರಕಾರ ರಾಜದ್ರೋಹ ಪ್ರಕರಣ ದಾಖಲಿಸಿದೆ. ಇದೀಗ ಅದೇ ದಾರಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಮುನ್ನಡೆಯುವುದು ಸರಿಯಲ್ಲ. ಪೊಲೀಸರು ನಡೆಸಲುದ್ದೇಶಿಸಿದ ಪ್ರತಿಭಟನೆಯ ಹಿಂದೆ ಕೇವಲ ಈ ಆರೋಪಿಯಷ್ಟೇ ಇರುವುದಲ್ಲ. ಸರಕಾರ ಮತ್ತು ಮೇಲಧಿಕಾರಿಗಳ ಪಾಲೂ ಅಷ್ಟೇ ಇದೆ. ಶಶಿಧರ್ ಬೇರೇನೇ ಕ್ರಮ ತೆಗೆದುಕೊಳ್ಳಲಿ. ಆದರೆ ಜನಪರ ಸರಕಾರವೆಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಸರಕಾರ, ಬ್ರಿಟಿಷರ ಕಾಲದ ರಾಜದ್ರೋಹ ಕಾಯ್ದೆಯನ್ನು ತಮ್ಮದೇ ಪ್ರಜೆಗಳ ಮೇಲೆ ಬಳಸುವುದು ಸರಿಯಲ್ಲ. ಆದುದರಿಂದ ಸರಕಾರ ಪ್ರತಿಭಟನೆಯನ್ನು ದಮನಿಸುವ ಭರದಲ್ಲಿ, ಸರ್ವಾಧಿಕಾರಿ ಧೋರಣೆಯನ್ನು ತಳೆಯಬಾರದು. ಪ್ರತಿಭಟನೆ ಪ್ರಜಾಸತ್ತೆಯ ಒಂದು ಭಾಗವೆಂದು ಸ್ವೀಕರಿಸಿ, ಪೊಲೀಸ್ ಇಲಾಖೆಗಳ ಸುಧಾರಣೆಗೆ ಇದನ್ನು ನೆಪವಾಗಿ ಬಳಸಿಕೊಳ್ಳಬೇಕು.