ನೈಜರ್: ಬೊಕೊ ಹರಾಮ್‌ನಿಂದ 32 ಸೈನಿಕರ ಹತ್ಯೆ
ನಿಯಾಮೆ,ಜೂ.5: ನೈಜೀರಿಯಾ ದೇಶಕ್ಕೆ ತಾಗಿಕೊಂಡಿರುವ ತನ್ನ ಗಡಿ ಸಮೀಪದ ಸೇನಾ ಠಾಣೆಯ ಮೇಲೆ ದಾಳಿ ನಡೆಸಿದ ಬೊಕೊ ಹರಾಮ್ ಉಗ್ರರು ಕನಿಷ್ಠ 32 ಮಂದಿ ಸೈನಿಕರನ್ನು ಹತ್ಯೆಗೈದಿರುವುದಾಗಿ ನೈಜರ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ. ಶುಕ್ರವಾರ ರಾತ್ರಿ ನಡೆದ ಈ ಭೀಕರ ದಾಳಿಯಲ್ಲಿ ಇತರ 67 ಮಂದಿ ಸೈನಿಕರು ಗಾಯಗೊಂಡಿದ್ದಾರೆ. ಆದಾಗ್ಯೂ, ಶನಿವಾರ ಬೆಳಗ್ಗೆ ಪ್ರಬಲವಾದ ಪ್ರತಿದಾಳಿ ನಡೆಸಿದ ಸೇನಾಪಡೆಗಳು, ಮಿಲಿಟರಿ ಠಾಣೆಯನ್ನು ಮರುವಶಪಡಿಸಿಕೊಂಡಿವೆ.
ಬೊಕೊ ಹರಾಮ್ ಉಗ್ರರು ಸಮೀಪದ ಪಟ್ಟಣವಾದ ಬೊಸ್ಸೊದಲ್ಲಿ, ಹಲವಾರು ಮನೆಗಳು ಹಾಗೂ ಅಂಗಡಿಮುಂಗಟ್ಟೆಗಳಿಗೆ ಬೆಂಕಿ ಹಚ್ಚಿದ್ದಾರೆ. ಶನಿವಾರ ಮುಂಜಾನೆ 4:00 ಗಂಟೆಯವರೆಗೂ ನಗರದಲ್ಲಿ ಹಿಂಸಾತಾಂಡವ ನಡೆಸಿದ ಅವರು, ಆನಂತರ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗಿದ್ದಾರೆ. ಇದೀಗ ನೈಜರ್‌ನ ಭೂ ಹಾಗೂ ವಾಯುಪಡೆಗಳು ಇಡೀ ಪ್ರದೇಶವನ್ನು ಸ್ವಾದೀಪಡಿಸಿಕೊಂಡಿರುವುದಾಗಿ ಬೊಸ್ಸೊ ನಗರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ ದೇಶದಲ್ಲಿ ಅಭದ್ರತೆ ಹಾಗೂ ಹಿಂಸಾಚಾರ ಉಲ್ಬಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ನೈಜರ್ ರಾಜಧಾನಿ ನಿಯಾಮೆದಲ್ಲಿ ಶನಿವಾರ ನೂರಾರು ಮಂದಿ ಪ್ರತಿಭಟನಾ ಮೆರವಣಿಗೆ ನಡೆಸಿದರು.