×
Ad

‘ಉಡ್ತಾ ಪಂಜಾಬ್’ ವಿವಾದ ನಿರ್ಮಾಪಕರು ಹೈಕೋರ್ಟ್‌ಗೆ

Update: 2016-06-08 22:48 IST


ಮುಂಬೈ, ಜೂ.8: ಪಂಜಾಬ್‌ನಲ್ಲಿ ಯುವಕರು ಹೇಗೆ ಮಾದಕ ವಸ್ತು ವ್ಯಸನಕ್ಕೆ ಬಲಿಯಾಗುತ್ತಿದ್ದರೆಂಬ ಕತೆಯನ್ನೊಳಗೊಂಡ ಬಾಲಿವುಡ್ ಚಿತ್ರ ‘ಉಡ್ತಾ ಪಂಜಾಬ್’ ವಿವಾದಕ್ಕೊಳಗಾಗಿದೆ. ಈ ನಡುವೆಯೇ ಸೆನ್ಸಾರ್ ಮಂಡಳಿಯ ಪರಾಮರ್ಶೆ ಸಮಿತಿಯ ಚಲನಚಿತ್ರಕ್ಕೆ ಕತ್ತರಿ ಹಾಕುವಂತೆ ಹಾಗೂ ಅದರಲ್ಲಿರುವ ‘ಪಂಜಾಬ್’ ಎಂಬ ಉಲ್ಲೇಖವನ್ನು ತೆಗೆದುಹಾಕುವಂತೆ ಸಲಹೆ ನೀಡಿ ಹೊರಡಿಸಿರುವ ಆದೇಶದ ಪ್ರತಿಯೊಂದನ್ನು ಯಾಚಿಸಿ, ನಿರ್ಮಾಪಕರು ಬಾಂಬೆ ಹೈಕೋರ್ಟ್‌ನ ಮೆಟ್ಟಿಲೇರಿದ್ದಾರೆ.
ಸರಕಾರ ಅಥವಾ ಸೆನ್ಸಾರ್ ಮಂಡಳಿಯ ಇದುವರೆಗೆ ಆದೇಶದ ಪ್ರತಿಯನ್ನು ನಿರ್ಮಾಪಕರಿಗೆ ನೀಡಿಲ್ಲ. ಆದೇಶದ ಪ್ರತಿ ದೊರೆಯದೆ, ಸಮಿತಿಯು ಮೇ 3ರಂದು ಸಲಹೆ ನೀಡಿರುವ ತಿದ್ದುಪಡಿಗಳನ್ನು ಮಾಡಲು ಹೇಗೆ ಸಾಧ್ಯವೆಂದು ಅರ್ಜಿ ಪ್ರಶ್ನಿಸಿದೆ.
ಚಿತ್ರವು ಜೂ.17ರಂದು ಬಿಡುಗಡೆಗೊಳ್ಳುವುದು ನಿಗದಿಯಾಗಿದೆ.
ಚಲನಚಿತ್ರದಲ್ಲಿರುವ ‘ಆಕ್ಷೇಪಾರ್ಹ’ ದೃಶ್ಯಗಳು ಹಾಗೂ ಸಂಭಾಷಣೆಗಳ ಕುರಿತು ಪರಾಮರ್ಶೆ ಸಮಿತಿಯ ನಿರ್ಧಾರದ ಪ್ರತಿಯೊಂದನ್ನು ಒದಗಿಸುವಂತೆ ಸರಕಾರ ಹಾಗೂ ಸೆನ್ಸಾರ್ ಮಂಡಳಿಗೆ ಆದೇಶ ನೀಡುವಂತೆ ಕೋರಿ, ಅನುರಾಗ್ ಕಶ್ಯಪ್ ಸ್ಥಾಪಿಸಿರುವ ನಿರ್ಮಾಣ ಮತ್ತು ಹಂಚಿಕೆ ಸಂಸ್ಥೆ ಪ್ಯಾಂಟಂ ಫಿಲ್ಮ್ಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ನಾಯ್ಕ ನಾಯ್ಕ ಆ್ಯಂಡ್ ಕೊ ಕಾನೂನು ಸಂಸ್ಥೆಯ ಮೂಲಕ ದಾಖಲಿಸಲಾಗಿರುವ ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಸಿ.ಧರ್ಮಾಧಿಕಾರಿ ನೇತೃತ್ವದ ಪೀಠವೊಂದು ಇಂದು ಅಪರಾಹ್ನ ನಡೆಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News