ನರೇಂದ್ರ ಮೋದಿಗೆ ರೈತನ ಸಂದೇಶ
ಅದು ಜುಲೈ 2014, ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ 60 ದಿನಗಳಷ್ಟೇ ಕಳೆದಿತ್ತು. ಮೋದಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ 86ನೆ ಸ್ಥಾಪನಾ ದಿನದ ಆಚರಣೆಯ ಸಂದರ್ಭದಲ್ಲಿ ದಿಲ್ಲಿಯಲ್ಲಿ ಕೃಷಿ ಸಂಶೋಧಕರು ಮತ್ತು ವಿಜ್ಞಾನಿಗಳನ್ನು ಸಂಬೋಧಿಸಿ ಮಾತನಾಡುತ್ತಿದ್ದರು. ಅದು ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಪಾಲ್ಗೊಂಡ ಮೊದಲ ಸಾರ್ವಜನಿಕ ಕಾರ್ಯಕ್ರಮವಾಗಿತ್ತು. ರಾಜಕೀಯ ಉದ್ಘೋಷಗಳ ಹೊರತಾಗಿ ಬೇರೇನೂ ಇಲ್ಲದ ಆ ಭಾಷಣದ ಮಧ್ಯೆ ಮೋದಿ ಭಾರತದ ರೈತರಿಗೆ ಎದ್ದುನಿಂತು ಗೌರವ ಸೂಚಿಸಲು ತಿಳಿಸಿದರು. ಇದೇ ವೇಳೆ ಮೋದಿ, ಕೇವಲ ಪಂಚತಾರಾ ಹೊಟೇಲ್‌ಗಳ ವಿಚಾರಗೋಷ್ಠಿಗಳ ಕೋಣೆಗಳಲ್ಲಿ ಕುಳಿತು ಇದ್ಯಾಕೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಯೋಚಿಸುತ್ತಾ ಸಮಯ ಕಳೆದರೆ ಸಾಲದು, ಈ ಸಮಸ್ಯೆಗಳಿಂದ ಹೇಗೆ ಹೊರಗೆ ಬರಬಹುದು ಎಂಬುದನ್ನೂ ಯೋಚಿಸುವುದು ಮುಖ್ಯ ಎಂದು ವಿಜ್ಞಾನಿಗಳಿಗೆ ತಾಕೀತು ಮಾಡಿದ್ದರು. ಮೋದಿ ಈ ಮಾತನ್ನು ಹಿಂದಿನ ಸರಕಾರದತ್ತ ಗುರಿಯಿಟ್ಟು ಹೇಳಿದ್ದರು, ಹಿಂದಿನ ಸರಕಾರ ಭಾರತದ ರೈತಾಪಿ ವರ್ಗವನ್ನು ಕಡೆಗಣಿಸಿದೆ ಎಂಬ ಆರೋಪವನ್ನು ಎದುರಿಸಿತ್ತು. ಮೋದಿ ರೈತರ ನಾಯಕ ಎಂಬ ಗುರುತನ್ನು ಪಡೆಯಲು ಬಯಸಿದ್ದರು. ತಮ್ಮ ಭಾಷಣದಲ್ಲಿ ಹಲವು ವಿಷಯಗಳ ಮಧ್ಯೆ ಮೋದಿ ಒಂದು ಪಂಚ್‌ಲೈನ್ ಸೇರಿಸಿದ್ದರು, ‘ಪರ್ ಡ್ರಾಪ್ ಮೋರ್ ಕ್ರಾಪ್’ (ಪ್ರತೀ ಹನಿಗೆ ಹೆಚ್ಚು ಬೆಳೆ), ಈ ವಾಕ್ಯವನ್ನು ಮರುದಿನ ಎಲ್ಲಾ ಪತ್ರಿಕೆಗಳು ಮೊದಲ ಪುಟದಲ್ಲಿ ಪ್ರಕಟಿಸಿದ್ದವು. ಎರಡು ವರ್ಷಗಳ ನಂತರ ತಮಿಳುನಾಡಿನ ಈರೋಡ್‌ನಲ್ಲಿರುವ ಗಟ್ಟವಾಡಿ ಗ್ರಾಮದ ಗದ್ದೆಯಲ್ಲಿ ಕುಳಿತು ನಾನು ಗೊಂದಲಮಯ ಭಾವನೆಯೊಂದಿಗೆ ಕುಳಿತಿದ್ದೇನೆ. ಅದಕ್ಕೆ ಕಾರಣ, ಬಜೆಟ್‌ನಲ್ಲಿ ಕಡಿಮೆ ಅನುದಾನ.
ವಿಜ್ಞಾನಿಗಳಿಗೆ ತಾಕೀತು ಮಾಡಿದ ಹೊರತಾಗಿಯೂ ಬಜೆಟ್‌ನಲ್ಲಿ ಕೃಷಿ ಸಂಶೋಧನೆಗೆ ನೀಡಿದ ಹಣ ಮಾತ್ರ ಅತ್ಯಂತ ಕಡಿಮೆ. ಬರಗಾಲವನ್ನು ಸಹಿಸಬಲ್ಲಂತಹ ಕೆಲವೊಂದು ದೇಶೀಯ ಬೆಳೆಗಳ ವಿಧಗಳಿವೆ, ಆದರೆ ಭಾರತದ ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳು ಈ ನಿಟ್ಟಿನಲ್ಲಿ ಗಂಭೀರವಾಗಿ ಸಂಶೋಧನೆಯನ್ನು ನಡೆಸಲು ಸಾಕಷ್ಟು ಬಂಡವಾಳವನ್ನು ಹೊಂದಿಲ್ಲ. ಈ ದೇಶೀಯ ತಳಿಗಳ ಸಂಶೋಧನೆಗಳಿಗೆ ಸರಕಾರದಿಂದ ಸಿಗುವ ಅತ್ಯಲ್ಪಪ್ರೋತ್ಸಾಹ ಕೂಡಾ ನಾವೀಗ ಅನುಭವಿಸುತ್ತಿರುವ ಹವಾಮಾನ ವೈಪರೀತ್ಯದ ಸಮಸ್ಯೆಯನ್ನು ಸಾಕಷ್ಟು ಮಟ್ಟಿಗೆ ಎದುರಿಸಲು ಸಹಕಾರಿಯಾಗುತ್ತದೆ. ಆದರೆ ನಾವು ನೋಡುತ್ತಿರುವುದೇನೆಂದರೆ ಸಾರ್ವಜನಿಕ ವಲಯದ ಸಂಶೋಧನೆಯನ್ನು ಬಲಹೀನಗೊಳಿಸುವ ವ್ಯವಸ್ಥೆ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳ ಹಿತಾಸಕ್ತಿಯನ್ನು ಕಾಯುವ ಪ್ರಯತ್ನಗಳು.
ಬರಗಾಲದ ಸಮಯದಲ್ಲಿ ಭೇಟಿಯಿಲ್ಲ
ದೇಶವೇ ಇತ್ತೀಚೆಗೆ ಕಂಡ ಅತ್ಯಂತ ಭೀಕರ ಕ್ಷಾಮದಿಂದ ಪೀಡಿತವಾಗಿದ್ದಾಗ, ತಮ್ಮ ಬಿಡುವಿಲ್ಲದ ವಿದೇಶ ಪ್ರಯಾಣಗಳು ಮತ್ತು ಚುನಾವಣಾ ಭಾಷಣಗಾರಿಕೆಯಲ್ಲಿ ವ್ಯಸ್ತವಾಗಿದ್ದ ಪ್ರಧಾನ ಮಂತ್ರಿಯವರಿಗೆ ನನ್ನದೂ ಸೇರಿದಂತೆ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಮಯಾವಕಾಶವೇ ಸಿಗಲಿಲ್ಲ. ಸಾರ್ವಜನಿಕ ರೇಡಿಯೊದಲ್ಲಿ ಭಾಷಣಗಳನ್ನು ಬಿಗಿಯುವುದು ಒಂದು ಕಡೆಯಾದರೆ ನಿಜವಾಗಿಯೂ ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಇನ್ನೊಂದು ಕಡೆ. ಇದೇ ವೇಳೆ ಗ್ರಾಮೀಣ ಪ್ರದೇಶದತ್ತ ತುರ್ತಾಗಿ ಗಮನಹರಿಸುವ ಅಗತ್ಯವಿದೆ ಎಂದು ಸರ್ವೋಚ್ಛ ನ್ಯಾಯಾಲಯ ಜ್ಞಾಪಿಸಬೇಕಾಗಿ ಬಂತು.
ಕನಿಷ್ಠ ಬೆಂಬಲ ಬೆಲೆಯಲ್ಲಿ ಅಸಮರ್ಪಕ ಏರಿಕೆ ಮತ್ತು ಕಡಿಮೆ ಕೃಷಿ ಆದಾಯ
ನನ್ನ ಮಟ್ಟಿಗೆ ಇವೆಲ್ಲದಕ್ಕಿಂತಲೂ ಭಾರತೀಯ ಜನತಾ ಪಕ್ಷ ಚುನಾವಣೆಯ ಸಮಯದಲ್ಲಿ-ಕನಿಷ್ಠ ಬೆಂಬಲ ಬೆಲೆಯನ್ನು ದರಕ್ಕಿಂತ ಶೇ. 50ರಷ್ಟು ಏರಿಸುವುದಾಗಿ ನೀಡಿರುವ ಭರವಸೆ ಮುಖ್ಯವಾಗಿದೆ. ಕೆಲವು ದಿನಗಳ ಹಿಂದೆ ಕನಿಷ್ಠ ಬೆಂಬಲ ಬೆಲೆಯನ್ನು ಶೇ. 4.5 ಏರಿಸುವ ಮೂಲಕ ಅವರು ಈ ಭರವಸೆಯ ವ್ಯಂಗ್ಯವಾಡಿದರು.
ಸರಕಾರ ಹೇಗೆ ಕನಿಷ್ಟ ಬೆಂಬಲ ಬೆಲೆಯನ್ನು ನಿರ್ಧರಿಸುತ್ತದೆ? ಅದಕ್ಕುತ್ತರ ಕೃಷಿ ವೆಚ್ಚ ಮತ್ತು ದರ ಆಯೋಗದ (ಸಿಎಸಿಪಿ) ಬಳಿಯಿದೆ. ಅವರು ರಾಷ್ಟ್ರೀಯ ಕನಿಷ್ಟ ಬೆಂಬಲ ಬೆಲೆಯ ಲೆಕ್ಕಾಚಾರ ಮಾಡುತ್ತಾರೆ, ಇದು ಕೇವಲ 25 ಬೆಳೆಗಳಿಗೆ ಮಾತ್ರ ಅನ್ವಯವಾಗುತ್ತದೆ. ಇದನ್ನು ನಡೆಸುವ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಮತ್ತು ಪ್ರಶ್ನಾರ್ಹವಾಗಿದೆ, ಮುಖ್ಯವಾಗಿ ಕಾರ್ಮಿಕರ ವ್ಯತ್ಯಾಸ ಮತ್ತು ವೆಚ್ಚವು ಪ್ರತೀ ಪ್ರದೇಶಕ್ಕೆ ಭಿನ್ನವಾಗಿರುವಾಗ ಎಲ್ಲಾ ರಾಜ್ಯಗಳಿಗೂ ಒಂದೇ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುವುದು. ಪ್ರಧಾನಿಯವರ ಮಾತಿನಲ್ಲೇ ಹೇಳುವುದಾದರೆ, ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತ ಜನರ ತಂಡ ವಾಸ್ತವ ಅಂಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಭತ್ತಕ್ಕೆ ಕನಿಷ್ಠ ಬೆಲೆಯನ್ನು ನಿಗದಿಪಡಿಸಿದಂತೆ. ಸಿಎಸಿಪಿಯ ಕಾರ್ಯವೈಖರಿ ಯಾವಾಗಲೂ ಸರಕಾರದ ಖಜಾನೆಯನ್ನು ತೃಪ್ತಿಪಡಿಸುತ್ತದೆಯೇ ಹೊರತು ರೈತರದ್ದಲ್ಲ. ಇದು ಅಕ್ಕಿಗೆ ಘೋಷಿಸಲಾಗಿರುವ ಬೆಂಬಲ ಬೆಲೆಯಿಂದಲೂ ಸ್ಪಷ್ಟವಾಗುತ್ತದೆ.
ಕಡಿಮೆ ಬೆಲೆಯ ಹೊರತಾಗಿಯೂ ರೈತ ಭತ್ತ ಅಥವಾ ಗೋಧಿಯನ್ನು ಯಾಕೆ ಬೆಳೆಯುತ್ತಾನೆ ಎಂಬುದಕ್ಕೆ ಕಾರಣವಿದೆ. ಯಾಕೆಂದರೆ ಆತ ಅಥವಾ ಆಕೆಗೆ ತಮ್ಮ ಬೆಳೆಯನ್ನು ಸರಕಾರವು ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿಸುತ್ತದೆ ಎಂಬುವುದು ಖಚಿತವಿರುತ್ತದೆ. ಆದರೆ ಎಣ್ಣೆಬೀಜಗಳು ಮತ್ತು ಧಾನ್ಯಗಳು ಬಹಳಷ್ಟು ಬಾರಿ ಬಹಿರಂಗ ಮಾರುಕಟ್ಟೆಯಲ್ಲಿ ಮಾರಲ್ಪಡುತ್ತವೆ ಮತ್ತು ಇವುಗಳನ್ನು ಖರೀದಿಸುವ ಬಗ್ಗೆ ಸರಕಾರದಿಂದ ಯಾವುದೇ ಖಚಿತತೆಯಿಲ್ಲ. ರೈತರಿಗೆ ಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ಯಾರಾದರೂ ಹೇಳಿದರೆ (ಆ ಮೂಲಕ ಆಮದು ಮಾಡಿಕೊಳ್ಳುವ ಹೊರೆಯನ್ನು ಕಡಿಮೆ ಮಾಡಬಹುದು) ಅದು ವಾಸ್ತವಕ್ಕಿಂತ ಅತ್ಯಂತ ದೂರವಾದ ವಾದ.
ತೀವ್ರ ನೋವುಂಟು ಮಾಡುವ ವಿಷಯವೆಂದರೆ ಇವರು ಒಂದು ಕಡೆ ಕೃಷಿ ಆದಾಯವನ್ನು ದುಪ್ಪಟ್ಟುಗೊಳಿಸುವ ಮಾತುಗಳನ್ನು ಆಡುತ್ತಾರೆ ಮತ್ತು ಇನ್ನೊಂದು ಕಡೆ ಕನಿಷ್ಠ ಬೆಂಬಲ ಬೆಲೆಗೆ ಮುಂದೆ ದಾರಿಯೇ ಇರದಂತಾಗಿದೆ. ಅದು ನಿಮ್ಮನ್ನು ಯೋಚನೆಗೆ ಹಚ್ಚುತ್ತದೆ. ಈ ದೇಶದಲ್ಲಿ ಸರಾಸರಿ ಕೃಷಿ ಆದಾಯ ಮಾಸಿಕ ರೂ. 6000ದ ಸುತ್ತ ಗಿರಕಿ ಹೊಡೆಯುತ್ತದೆ. 2022ರ ವೇಳೆಗೆ ಯಾವುದೋ ಮಂತ್ರದಂಡವನ್ನು ಬಳಸಿ ಸರಕಾರ ಈ ಆದಾಯವನ್ನು ದುಪ್ಪಟ್ಟುಗೊಳಿಸಿದರೂ ಆಗಲೂ ಅದು ಕೇವಲ ರೂ. 12,000 ಮಾತ್ರ ಆಗಲು ಸಾಧ್ಯ.
ಕೃಷಿ ಆದಾಯವನ್ನು ದುಪ್ಪಟ್ಟುಗೊಳಿಸಲಾಗುವುದು ಎಂಬ ಭರವಸೆ ಕೇವಲ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟಿಸುವಂತಹ ವಿಷಯವಾಗಿದೆಯೇ ಹೊರತು, ಬೇರೆ ಯಾವ ಉದ್ದೇಶವನ್ನೂ ಅದು ಸಾಧಿಸುವುದಿಲ್ಲ. ಮೋದಿ ರೈತರಿಗೆ ಎದ್ದುನಿಂತು ನೀಡಿದ ಅಭಿನಂದನೆ ಕೇವಲ ಕ್ರೂರ ವ್ಯಂಗ್ಯವೇ?