×
Ad

ಸೂತ್ರದ ಗೊಂಬೆ ಅನುಪಮಾ ಶೆಣೈ

Update: 2016-06-09 23:49 IST

 ಈ ಹಿಂದೆ ಡಿ. ಕೆ. ರವಿ ಅವರ ಆತ್ಮಹತ್ಯೆ ಪ್ರಕರಣ ರಾಜಕೀಯವಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆ ಚರ್ಚೆ, ಗೊಂದಲಕ್ಕೆ ಅವರೊಳಗಿನ ಪ್ರಚಾರ ಪ್ರಿಯತೆಯೂ ಒಂದು ಕಾರಣವಾಗಿತ್ತು. ತನ್ನ ವೈಯಕ್ತಿಕ ಬದುಕನ್ನು ಕರ್ತವ್ಯದ ಜೊತೆಗೆ ಕಲಸು ಮೇಲೋಗರ ಮಾಡಿದ ಪರಿಣಾಮವಾಗಿ ಅವರು ಅವರಿಗೇ ತಿಳಿಯದಂತೆ ದುರಂತದ ಹಾದಿ ಹಿಡಿಯುವಂತಾಯಿತು. ಅನಗತ್ಯ ಮಾಧ್ಯಮ ಪ್ರಚಾರ, ಆರ್ಥಿಕ ವ್ಯವಹಾರಗಳಲ್ಲಿ ಸೋಲು, ಪ್ರೇಮ ಇವೆಲ್ಲವುಗಳ ತಿಕ್ಕಾಟ ಅವರನ್ನು ಆತ್ಮಹತ್ಯೆಯೆಡೆಗೆ ದೂಡಿತು. ಒಬ್ಬ ಐಎಎಸ್ ಅಧಿಕಾರಿ ಹೇಗಿರಬೇಕು ಮತ್ತು ಹೇಗಿರಬಾರದು ಎನ್ನುವ ಎರಡೂ ಪ್ರಕಾರಗಳಿಗೆ ಅವರು ಉದಾಹರಣೆಯಾಗಿದ್ದಾರೆ.

 ಇದೀಗ ಡಿವೈಎಸ್‌ಪಿ ಅನುಪಮಾ ಶೆಣೈ ತನ್ನ ವೃತ್ತಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ತಾಣಗಳಲ್ಲಿ ಮಾಡುತ್ತಿರುವ ರಾದ್ಧಾಂತಗಳು ಬೇಡ ಬೇಡವೆಂದರೂ ಡಿ.ಕೆ. ರವಿಯವರನ್ನು ನೆನಪಿಸುತ್ತವೆ. ಆರಂಭದಲ್ಲಿ ರಾಜೀನಾಮೆ ನೀಡುವ ಮೂಲಕ ಹುತಾತ್ಮ ಚಿತ್ರವೊಂದನ್ನು ಕೊಟ್ಟ ಶೆಣೈ, ಆ ಬಳಿಕ ಸಾಮಾಜಿಕ ತಾಣಗಳಲ್ಲಿ ನಡೆದುಕೊಂಡ ರೀತಿ ಮತ್ತು ಸಾರ್ವಜನಿಕವಾಗಿ ಅವರ ವರ್ತನೆ ಇವೆಲ್ಲವೂ ಪೊಲೀಸ್ ಅಧಿಕಾರಿಯೊಬ್ಬರ ಗಾಂಭೀರ್ಯಕ್ಕೆ ತಕ್ಕುದಲ್ಲ. ಯಾವುದೋ ಒಬ್ಬ ರಾಜಕಾರಣಿ ಅಥವಾ ಆತನ ಹಿಂಬಾಲಕರು ಈ ಥರ ವರ್ತಿಸಿದ್ದಿದ್ದರೆ ಅದನ್ನು ಸಹಜವಾಗಿ ತೆಗೆದುಕೊಳ್ಳಬಹುದಿತ್ತು. ಆದರೆ ಇಲ್ಲಿ ಶೆಣೈ ಅವರೇ ಒಬ್ಬ ರಾಜಕೀಯ ವ್ಯಕ್ತಿಯಂತೆ ನಡೆದುಕೊಂಡಿದ್ದಾರೆ. ಅಂತಿಮವಾಗಿ, ತಮ್ಮೆಲ್ಲ ಕೃತ್ಯಗಳ ಕುರಿತಂತೆ ಯಾವ ಸ್ಪಷ್ಟೀಕರಣವನ್ನೂ ನೀಡದೆ ಉಡಾಫೆಯ ಹೇಳಿಕೆ ನೀಡಿದ್ದಾರೆ. ‘‘ಫೇಸ್‌ಬುಕ್‌ನಲ್ಲಿರುವ ಖಾತೆಯೇ ನನ್ನದಲ್ಲ’’ ಎಂದು ಸಾರಿಸಿ ಬಿಡಲು ಯತ್ನಿಸಿದ್ದಾರೆ. ಶೆಣೈ ಅವರ ಈ ಉಡಾಫೆಯಿಂದಾಗಿ ಯಾವ ರಾಜಕಾರಣಿಗಳ ವಿರುದ್ಧ ಅವರು ಸೆಣಸಲು ಹೊರಟರೋ ಅವರಿಗೇ ಇದರ ಲಾಭ ಆಗುವಂತಾಗಿದೆ. ಇಷ್ಟಕ್ಕೂ ನಡೆದಿರುವುದಾದರೂ ಏನು? ಎನ್ನುವುದನ್ನೇ ಅನುಪಮಾ ಶೆಣೈ ಸ್ಪಷ್ಟವಾಗಿ ಹೇಳುತ್ತಿಲ್ಲ. 

ತನ್ನ ಮೇಲೆ ರಾಜಕೀಯ ಒತ್ತಡ ಬಂದಿದೆ, ಕೊಲೆ ಬೆದರಿಕೆ ಬಂದಿದೆ, ಎಂಬಿತ್ಯಾದಿಯಾಗಿ ಸುತ್ತಿ ಬಳಸಿಯೇ ಅವರು ಹೇಳುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳಾದವರಿಗೆ ಕೊಲೆ ಬೆದರಿಕೆ ಬರುವುದು, ರಾಜಕೀಯ ಒತ್ತಡ ಬರುವುದು ತೀರಾ ಸಹಜ. ಖಾಕಿ ವೃತ್ತಿಯಲ್ಲಿರುವ ಎಲ್ಲರೂ ಇದನ್ನು ಒಂದಲ್ಲ ಒಂದು ದಿನ ಎದುರಿಸಲೇ ಬೇಕಾಗುತ್ತದೆ. ಹಾಗೆಂದು ಎಲ್ಲರೂ ರಾಜೀನಾಮೆ ಕೊಡಲು ಹೊರಟಿದ್ದರೆ, ಇಂದು ಪೊಲೀಸ್ ಇಲಾಖೆಯೇ ಇರುತ್ತಿರಲಿಲ್ಲ. ಆ ಇಲಾಖೆಯ ಸ್ವರೂಪವೇ ಅಂತಹದು. ಅದು ರಾಜಕಾರಣಿಗಳ ಹಿಡಿತದಿಂದ ಸಂಪೂರ್ಣ ಸ್ವತಂತ್ರವಾಗುವುದಕ್ಕೆ ಸಾಧ್ಯವಿಲ್ಲ. ಸಾಧ್ಯವಿರಬಾರದೂ ಕೂಡ. ಯಾಕೆಂದರೆ, ಪ್ರಜಾತಂತ್ರದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ಸ್ವತಂತ್ರವಾಗಿರುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಜನಪ್ರತಿನಿಧಿಗಳ ಆದೇಶಗಳಿಗೆ ತಲೆಬಾಗಬೇಕಾಗುತ್ತದೆ. ಕೆಲವೊಮ್ಮೆ ಕೆಟ್ಟ ಜನಪ್ರತಿನಿಧಿಗಳ ಕೈಕೆಳಗೂ ಕೆಲಸ ಮಾಡುವ ಸಂದರ್ಭ ಬರುತ್ತದೆ. ಆಗಲೂ, ಒಬ್ಬ ನಿಷ್ಠಾವಂತ ಪೊಲೀಸ್ ಅಧಿಕಾರಿಯನ್ನು ಸಂಪೂರ್ಣ ತನ್ನ ತೋರು ಬೆರಳಲ್ಲಿ ಕುಣಿಸಲು ಸಾಧ್ಯವಿಲ್ಲ. ಹೆಚ್ಚೆಂದರೆ ರಾಜಕಾರಣಿಗಳು ಅಧಿಕಾರಿಗಳನ್ನು ವರ್ಗಾವಣೆ ಮಾಡಬಹುದು. ಅಂತಹದೊಂದು ವರ್ಗಾವಣೆಗೆ ಅನುಪಮಾ ಶೆಣೈ ಕೂಡ ಗುರಿಯಾಗಿದ್ದಾರೆ.
 
ಮೇಲ್ನೋಟಕ್ಕೆ ತಾನು ಯಾಕೆ ರಾಜೀನಾಮೆ ನೀಡಿದ್ದೇನೆ ಎನ್ನುವುದರ ಒಂದು ಸುಳಿವನ್ನೂ ಅನುಪಮಾ ಶೆಣೈ ಅವರು ಬಿಟ್ಟು ಕೊಡುತ್ತಿಲ್ಲ. ಯಾರಾದರೂ ಕೊಲೆ ಬೆದರಿಕೆಯೊಡ್ಡಿದ್ದರೆ ಏನು ಮಾಡಬೇಕು ಎನ್ನುವುದನ್ನು ಪೊಲೀಸ್ ಅಧಿಕಾರಿಗೆ ಕಲಿಸಿಕೊಡಬೇಕೇ? ಇಷ್ಟಕ್ಕೂ ಕರ್ನಾಟಕ ರಾಜ್ಯ ಬಿಹಾರ, ಉತ್ತರ ಪ್ರದೇಶಗಳಂತಲ್ಲ. ಇಲ್ಲಿ ಪೊಲೀಸ್ ಅಧಿಕಾರಿಗೆ ಏನಾದರೂ ಸಂಭವಿಸಿದರೆ, ಅವರ ನೆರವಿಗೆ ಜನಸಾಮಾನ್ಯರು, ಪತ್ರಿಕೆಗಳು, ಸಾಮಾಜಿಕ ಹೋರಾಟಗಾರರು ತಕ್ಷಣ ನಿಲ್ಲುತ್ತಾರೆ. ಒಂದು ವೇಳೆ ಕೊಲೆ ಬೆದರಿಕೆ ಹಾಕಿದ್ದಾದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಇಡೀ ಇಲಾಖೆಯೇ ಇದೆ. ಪೊಲೀಸ್ ಅಧಿಕಾರಿಗಳೇ ಹೆದರಿ ರಾಜೀನಾಮೆ ನೀಡಿದರೆ, ಜನಸಾಮಾನ್ಯರು ಈ ಪೊಲೀಸ್ ಇಲಾಖೆಯನ್ನು ನಂಬಿ ದೂರು ಕೊಡುವುದು ಹೇಗೆ? ಕೊಲೆ ಬೆದರಿಕೆ ಯಾರಾದರೂ ಒಡ್ಡಿದರೆ ಅದನ್ನು ರೆಕಾರ್ಡ್ ಮಾಡುವ ವ್ಯವಸ್ಥೆಯಿದೆ. 

ಅಂತಹ ಯಾವ ಸಾಕ್ಷವೂ ಅವರ ಬಳಿ ಇಲ್ಲ. ಇದೇ ಸಂದರ್ಭದಲ್ಲಿ ಸಾಮಾಜಿಕ ತಾಣದಲ್ಲಿ, ಯಾರೋ ಮೂರನೆ ದರ್ಜೆಯ ವ್ಯಕ್ತಿಗಳು ಫೇಸ್‌ಬುಕ್‌ನಲ್ಲಿ ನಿಂದನೆ ಮಾಡುವಂತೆ ರಾಜಕಾರಣಿಯನ್ನು ನಿಂದನೆ ಮಾಡಿದ್ದಾರೆ. ತನ್ನ ಬಳಿ ಸಿಡಿ ಇದೆ, ಆಡಿಯೋ ಇದೆ ಎಂದೆಲ್ಲ ಬರೆದಿದ್ದಾರೆ. ಹಾಗೆ ಇದ್ದದ್ದು ಹೌದೇ ಆದಲ್ಲಿ, ಅದನ್ನು ಈವರೆಗೆ ಅನುಪಮಾ ಶೆಣೈ ತಮ್ಮ ಬಳಿ ಇರಿಸಿಕೊಂಡದ್ದು ಯಾಕೆ ಎನ್ನುವ ಪ್ರಶ್ನೆ ಬರುತ್ತದೆ. ಈ ಸಿಡಿ, ಆಡಿಯೋ ಇವುಗಳನ್ನು ಮುಂದಿಟ್ಟುಕೊಂಡು ಶೆಣೈ ಅವರು ರಾಜಕಾರಣಿಯನ್ನು ಬ್ಲಾಕ್‌ಮೇಲ್ ಮಾಡುವ ಉದ್ದೇಶವನ್ನು ಹೊಂದಿದ್ದರೇ? ‘‘ಯಾವುದು ಬಿಡುಗಡೆ ಮಾಡಲಿ ಆಡಿಯೋವನ್ನಾ, ಸಿಡಿಯನ್ನಾ?’’ ಎಂಬ ಸ್ಟೇಟಸ್‌ನಲ್ಲಿ ಬ್ಲಾಕ್‌ಮೇಲ್ ತಂತ್ರವಿದೆ. ನೀವು ನನ್ನ ಮಾತಿಗೆ ಬಗ್ಗದೇ ಇದ್ದರೆ ಇವುಗಳನ್ನು ಬಿಡುಗಡೆ ಮಾಡುವೆ ಎಂಬ ಬೆದರಿಕೆ ಇದೆ. ಇವೆಲ್ಲ ಅನುಪಮಾ ಶೆಣೈ ಅವರಿಗೇ ತಿರುಗುಬಾಣವಾಗಿದೆ. ಇಷ್ಟೆಲ್ಲ ಮಾಡಿದ ಬಳಿಕ, ಗುರುವಾರ ಇನ್ನೊಂದು ಬಾಂಬ್ ಸಿಡಿಸಿದ್ದಾರೆ. ಸಾಮಾಜಿಕ ತಾಣದಲ್ಲಿ ನಾನು ಇಲ್ಲವೇ ಇಲ್ಲ. ನನ್ನ ಪ್ರೊಫೈಲ್‌ನಲ್ಲಿ ಬೇರೆ ಯಾರೋ ಬರೆದಿದ್ದಾರೆ ಎಂದು ಉಡಾಫೆಯ ಹೇಳಿಕೆ ನೀಡಿದ್ದಾರೆ. ಶೆಣೈ ಹೆಸರಲ್ಲಿ ಸಾಮಾಜಿಕ ತಾಣದಲ್ಲಿ ಹೇಳಿಕೆಗಳು ಹೊರ ಬರುತ್ತಿರುವುದು ಟಿವಿಗಳಲ್ಲೂ ಕಳೆದ ಮೂರು ದಿನಗಳಿಂದ ಸುದ್ದಿಯಾಗುತ್ತಿವೆ. ನಿಜಕ್ಕೂ ಅದು ನಕಲಿ ಖಾತೆಯಾಗಿದ್ದರೆ ಶೆಣೈ ತಕ್ಷಣ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಬೇಕಾಗಿತ್ತು. 

ಅದು ಅವರ ಹೊಣೆಗಾರಿಕೆಯೂ ಆಗಿತ್ತು. ಒಬ್ಬ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಅದೂ ರಾಜೀನಾಮೆ ನೀಡಿರುವ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ರಾಜಕಾರಣಿಯ ವಿರುದ್ಧ ಹೇಳಬಾರದ ಹೇಳಿಕೆಗಳನ್ನು ನೀಡುವುದು ಬಹುದೊಡ್ಡ ಅಪರಾಧ. ಆದುದರಿಂದ, ಈವರೆಗೆ ಶೆಣೈ ಯಾಕೆ ನಕಲಿ ಖಾತೆಯ ಬಗ್ಗೆ ದೂರು ನೀಡಿಲ್ಲ ಎಂಬ ಪ್ರಶ್ನೆ ಮತ್ತೆ ಚರ್ಚೆಗೆ ಒಳಗಾಗಿವೆ. ಮೇಲಿನೆಲ್ಲ ಘಟನೆಗಳಲ್ಲೂ ಅನುಪಮಾ ಶೆಣೈ ತಮಗೆ ತಾವೇ ಅನ್ಯಾಯ ಮಾಡಿಕೊಂಡಿದ್ದಾರೆ. ಇತರರು ಅವರಿಗೆ ಮಾಡಿರುವ ಅನ್ಯಾಯ ಪಕ್ಕಕ್ಕಿರಲಿ, ಮೊದಲು ತಮಗೆ ತಾವೇ ಎಸಗಿರುವ ತಪ್ಪುಗಳನ್ನು ಶೆಣೈ ಸರಿಪಡಿಸಿಕೊಳ್ಳಬೇಕಾಗಿದೆ. 

ಈ ಹಿಂದೆ ತನ್ನನ್ನು ವರ್ಗಾವಣೆ ಮಾಡಿರುವ ದ್ವೇಷವನ್ನು ಮುಂದಿಟ್ಟುಕೊಂಡು ಅನುಪಮಾ ಶೆಣೈ ಹತಾಶೆಯ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿ ಬಿಡುತ್ತದೆ. ಜೊತೆಗೆ ಬೇರೆ ಬೇರೆ ರಾಜಕೀಯ ಶಕ್ತಿಗಳು ಶೆಣೈಯನ್ನು ಮುಂದಿಟ್ಟು ಕೊಂಡು ಆಟ ಆಡುತ್ತಿವೆ. ಬಹುಶಃ ಕೆಲಸಕ್ಕೆ ರಾಜೀನಾಮೆ ನೀಡಿ, ಶಾಶ್ವತವಾಗಿ ರಾಜಕೀಯಕ್ಕೆ ಸೇರುವ ದುರುದ್ದೇಶ ಶೆಣೈ ಒಳಗಿದ್ದರೆ ಅಚ್ಚರಿಯೇನೂ ಇಲ್ಲ. ಆದರೆ ತನ್ನ ಮೊದಲ ಆಟದಲ್ಲಿ ಜನರ ವಿಶ್ವಾಸವನ್ನು ಕಳೆದುಕೊಂಡಿರುವ ಶೆಣೈಗೆ ರಾಜಕೀಯ ತುಂಬಾ ಕಷ್ಟವಿದೆ ಎನ್ನುವುದಂತೂ ಸತ್ಯ. ಈ ಎಲ್ಲ ಗೊಂದಲಗಳು ಪೊಲೀಸ್ ಅಧಿಕಾರಿಗಳ ನೈತಿಕ ಶಕ್ತಿಯನ್ನು ಕುಗ್ಗಿಸಬಾರದು. ಯಾವ ರೀತಿಯಲ್ಲೂ ಪೊಲೀಸ್ ಅಧಿಕಾರಿಗಳಿಗೆ ಅನುಪಮಾ ಶೆಣೈ ಮಾದರಿಯಾಗಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News