ರಾಜ್ಯಸಭಾ ಚುನಾವಣಾ ಫಲಿತಾಂಶ:ಉ.ಪ್ರ.ದಲ್ಲಿ ಎಸ್ಪಿ ಜಯಭೇರಿ, ರಾಜಸ್ಥಾನ, ಉತ್ತರಾಖಂಡ್‌ನಲ್ಲಿ ಬಿಜೆಪಿ ಕ್ಲೀನ್ ಸ್ವೀಪ್

Update: 2016-06-11 16:15 GMT

ಹೊಸದಿಲ್ಲಿ, ಜೂ.11: ದೇಶಾದ್ಯಂತ ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ ಶನಿವಾರ ರಾಜ್ಯಸಭೆಯ 27 ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆದಿದ್ದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಸೇರಿದಂತೆ ಪ್ರಮುಖ ಅಭ್ಯರ್ಥಿಗಳು ಗೆಲುವು ಸಾಧಿಸುವಲ್ಲಿ ಸಫಲರಾಗಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿಯು ಎಲ್ಲಾ ನಾಲ್ಕು ಸ್ಥಾನಗಳನ್ನು ಗಳಿಸಿದ್ದು, ಪ್ರತಿಪಕ್ಷ ಕಾಂಗ್ರೆಸ್ ಭಾರೀ ಮುಖಭಂಗವುಂಟು ಮಾಡಿದೆ.
ಉತ್ತರಪ್ರದೇಶದ 11 ಸ್ಥಾನಗಳಿಗೆ, ಕರ್ನಾಟಕ ಹಾಗೂ ರಾಜಸ್ಥಾನಗಳಲ್ಲಿ ತಲಾ 4, ಮಧ್ಯಪ್ರದೇಶದಲ್ಲಿ 3, ಹರ್ಯಾಣ ಹಾಗೂ ಜಾರ್ಖಂಡ್‌ನಲ್ಲಿ ತಲಾ ಎರಡು ಹಾಗೂ ಉತ್ತರಾಖಂಡದ ಒಂದು ಸ್ಥಾನಕ್ಕೆ ಶನಿವಾರ ಚುನಾವಣೆ ನಡೆದಿತ್ತು.
 ರಾಜ್ಯಸಭೆಯ ಒಟ್ಟು 57 ಸ್ಥಾನಗಳು ಖಾಲಿಬಿದ್ದಿದ್ದು, ಈ ಪೈಕಿ 27 ಸ್ಥಾನಗಳಿಗಷ್ಟೇ ಚುನಾವಣೆ ನಡೆದಿತ್ತು. ಉಳಿದ 30 ಮಂದಿ ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕೇಂದ್ರ ಸಚಿವರಾದ ಸುರೇಶ್ ಪ್ರಭು ಹಾಗೂ ಪಿಯೂಶ್ ಗೋಯಲ್, ಖ್ಯಾತ ನ್ಯಾಯವಾದಿ ರಾಮ್‌ಜೇಠ್ಮಲಾನಿ, ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಪುತ್ರಿ ಮಿಸಾ ಭಾರತಿ ಹಾಗೂ ಮಾಜಿ ಜೆಡಿಯು ಅಧ್ಯಕ್ಷ ಶರದ್ ಯಾದವ್ ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳಾಗಿದ್ದಾರೆ.
 ಇಂದಿನ ರಾಜ್ಯಸಭಾ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಸೇರಿದಂತೆ ಬಿಜೆಪಿಯ ಎಲ್ಲಾ ನಾಲ್ಕು ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಪಕ್ಷದ ರಾಜ್ಯಘಟಕದ ಉಪಾಧ್ಯಕ್ಷ ಓಂಪ್ರಕಾಶ್ ಮಾಥುರ್, ಹರ್ಷವರ್ಧನ್‌ಸಿಂಗ್ ಹಾಗೂ ರಾಮ್ ಕುಮಾರ್ ವರ್ಮಾ ಆ ರಾಜ್ಯದಿಂದ ಗೆದ್ದ ಇತರ ಮೂವರು ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ.
 ಇಂದು ನಡೆದ ಚುನಾವಣೆಯಲ್ಲಿ ಜಾರ್ಖಂಡ್‌ನ ಎರಡೂ ರಾಜ್ಯಸಭಾ ಸ್ಥಾನಗಳು ಬಿಜೆಪಿಯ ಪಾಲಾಗಿದೆ. ಅಲ್ಲಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹಾಗೂ ಬಿಜೆಪಿ ಮುಖಂಡ ಮಹೇಶ್ ಪೊದ್ದಾರ್ ಗೆಲುವಿನ ನಗೆಬೀರಿದ್ದಾರೆ. ಉತ್ತರಾಖಂಡದಲ್ಲಿ ಕಾಂಗ್ರೆಸ್‌ನ ಪ್ರದೀಪ್ ತಾಮ್ತಾ ಗೆಲುವು ಸಾಧಿಸಿದ್ದಾರೆ.
ಈ ಸಲದ ರಾಜ್ಯಸಭಾ ಚುನಾವಣೆಯು ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಅತ್ಯಂತ ಮಹತ್ವಾದ್ದಾಗಿದೆ. ರಾಜ್ಯಸಭೆಯಲ್ಲಿ ಅಲ್ಪಮತವನ್ನು ಹೊಂದಿರುವುದರಿಂದ ಸರಕಾರಕ್ಕೆ ಪ್ರತಿಪಕ್ಷಗಳ ಬೆಂಬಲವಿಲ್ಲದೆ ಮಸೂದೆಗಳನ್ನು ಅಂಗೀಕರಿಸಲು ಸಾಧ್ಯವಾಗುತ್ತಿಲ್ಲ..
ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ನಾಯಕ ಕಪಿಲ್‌ಸಿಬಲ್, ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪ್ರೀತಿ ಮಹಾಪಾತ್ರ ಅವರನ್ನು ಪರಾಭವಗೊಳಿಸಿದ್ದಾರೆ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷವು ರಾಜ್ಯಸಭಾ ಸೀಟುಗಳಿಕೆಯಲ್ಲಿ ಸಿಂಹಪಾಲು ಪಡೆದಿದ್ದು, ಅದರ ಎಲ್ಲಾ ಏಳು ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಬಹಳ ಸಮಯದ ಬಳಿಕ ಎಸ್ಪಿ ತೆಕ್ಕೆಗೆ ಮರಳಿಸುವ ಅಮರ್‌ಸಿಂಗ್, ಬೇನಿಪ್ರಸಾದ್ ವರ್ಮಾ, ಕುವರ್ ರೇವತಿ ರಮಣ್ ಸಿಂಗ್, ವಿಶ್ವಂಬರ್ ಪ್ರಸಾದ್ ನಿರ್ಶಾದ್, ಸುಖ್‌ರಾಮ್ ಸಿಂಗ್ ಯಾದವ್, ಸಂಜಯ್ ಸೇಠ್ ಹಾಗೂ ಸುರೇಂದ್ರ ನಾಗರ್ ವಿಜಯಗಳಿಸಿದ ಎಸ್ಪಿ ನಾಯಕರಾಗಿದ್ದಾರೆ. ಸತೀಶ್‌ಚಂದ್ರ ಹಾಗೂ ಅಶೋಕ್ ಸಿದ್ದಾಥ್ ( ಇಬ್ಬರೂ ಬಿಎಸ್‌ಪಿ) ಹಾಗೂ ಶಿವಪ್ರತಾಪ್ ಶುಕ್ಲಾ (ಬಿಜೆಪಿ) ಇತರ ವಿಜಯಿ ಅಭ್ಯರ್ಥಿಗಳಾಗಿದ್ದಾರೆ. ಉ.ಪ್ರ.ವಿಧಾನಸಭೆಯಲ್ಲಿ 29 ಶಾಸಕರನ್ನು ಕಾಂಗ್ರೆಸ್ ಹೊಂದಿದ್ದರೂ, ಕಪಿಲ್ ಸಿಬಲ್ ಹೊರತಾಗಿ ಅದರ ಉಳಿದೆಲ್ಲಾ ಅಭ್ಯರ್ಥಿಗಳು ಪರಾಭವಗೊಂಡಿರುವುದು ಪಕ್ಷಕ್ಕೆ ಭಾರೀ ಹಿನ್ನಡೆಯುಂಟು ಮಾಡಿದೆ.
ಈ ಮಧ್ಯೆ ಉತ್ತರಪ್ರದೇಶದ ಬಿಜೆಪಿ ಶಾಸಕ ವಿಜಯ್ ಬಹಾದೂರ್ ಸಮಾಜವಾದಿ ಪಕ್ಷದ ಅಭ್ಯರ್ಥಿಗಲ ಪರವಾಗಿ ಅಡ್ಡಮತದಾನ ನಡೆಸಿದ್ದಾರೆ. ಮುಖ್ಯಮಂತ್ರಿ ಅಖಿಲೇಶ್‌ಯಾದವ್ ರಾಜ್ಯದಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚಿ ತಾನು ಅಡ್ಡ ಮತದಾನ ಮಾಡಿದ್ದು, ಯಾವುದೇ ತ್ಯಾಗಕ್ಕೂ ಸಿದ್ಧನಿರುವುದಾಗಿ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕರಾದ ಎಂ.ಜೆ.ಅಕ್ಬರ್ ಹಾಗೂ ಅನಿಲ್ ಮಾಧವ್ ದವೆ ಜಯಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News