ರಕ್ತ ಕುಡಿಯುತ್ತಿವೆ ಭಾರತದ ರಸ್ತೆಗಳು!
ಹೊಸದಿಲ್ಲಿ ಜೂ.12: ಭಾರತದ ರಸ್ತೆಗಳ ರಕ್ತದಾಹ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಸ್ವತಃ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. 2015ರಲ್ಲಿ ರಸ್ತೆ ಸುರಕ್ಷತೆ ಎಂಬ ವರದಿಯನ್ನು ಸಚಿವರು ಬಿಡುಗಡೆ ಮಾಡಿದ್ದು, ಇದರ ಪ್ರಕಾರ, ದೇಶದ ರಸ್ತೆಗಳಲ್ಲಿ 2015ರಲ್ಲಿ ಪ್ರತಿದಿನ 400 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 2011 ಮತ್ತು 2014ರಲ್ಲಿ ಈ ಪ್ರಮಾಣ ಕ್ರಮವಾಗಿ 390 ಮತ್ತು 382 ಆಗಿತ್ತು. ಈ ಹೆಚ್ಚಳಕ್ಕೆ, ವಾಹನಗಳ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳ ಮತ್ತು ರಸ್ತೆ ಜಾಲ ವಿಸ್ತರಣೆ ಕೂಡಾ ಕಾರಣ.
ಗಡ್ಕರಿ ಅವರ ಪ್ರಕಾರ, ಅಪಘಾತ ಸಂಖ್ಯೆ ಹೆಚ್ಚಳಕ್ಕೆ ಮುಖ್ಯವಾಗಿ ರಸ್ತೆ ಯೋಜನೆಗಳಲ್ಲಿ ಇಂಜಿನಿಯರಿಂಗ್ ದೋಷಗಳು ಹಾಗೂ ಸಾರಿಗೆ ಇಲಾಖೆ ಬೇಕಾಬಿಟ್ಟಿ ಲೈಸನ್ಸ್ ನೀಡುವುದು ಕಾರಣವಾಗಿದೆ. ರಸ್ತೆ ಅಪಘಾತ ಸಾವು ಹೆಚ್ಚಳಕ್ಕೆ ಮುಖ್ಯ ಕಾರಣ ವ್ಯಾಪಕ ಭ್ರಷ್ಟಾಚಾರ ಎನ್ನುವುದು ಸಚಿವರ ವಿಶ್ಲೇಷಣೆ. ಲೈಸನ್ಸ್ ನೀಡಿಕೆ ಪ್ರಕ್ರಿಯೆಯಲ್ಲಿ ಇಂದಿಗೂ ಲಂಚದ ಹಾವಳಿ ವ್ಯಾಪಕವಾಗಿದ್ದು, ಪ್ರತಿ ನಾಲ್ಕು ಅಪಘಾತಗಳ ಪೈಕಿ ಮೂರು ಅಪಘಾತಗಳು ಚಾಲಕನ ತಪ್ಪಿನಿಂದ ಸಂಭವಿಸುತ್ತದೆ ಎನ್ನುವುದು ಲಂಚದ ಹಾವಳಿಯನ್ನು ಪ್ರತಿಫಲಿಸುತ್ತವೆ ಎಂದು ಗಡ್ಕರಿ ಹೇಳಿದ್ದಾರೆ. ಸರ್ಕಾರಗಳು ಬೇಕಾಬಿಟ್ಟಿಯಾಗಿ ಚಾಲನಾ ಪರವಾನಿಗೆ ನೀಡುವಂತಿಲ್ಲ ಎಂದು ಗಡ್ಕರಿ ಈ ಮೊದಲು ಸೂಚಿಸಿದ್ದರು. ರಸ್ತೆ ಯೋಜನೆಗಳ ಗುತ್ತಿಗೆದಾರರು, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಮೂಲಗಳಾಗಿರುವುದರಿಂದ ಜಿನಿಯರಿಂಗ್ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡು, ಹಣ ಕೊಳ್ಳೆ ಹೊಡೆಯಲಾಗುತ್ತದೆ.
ಗಡ್ಕರಿಯವರು ತಮ್ಮದೇ ಸಚಿವಾಲಯಗಳ ವೈಫಲ್ಯ ಹಾಗೂ ದೋಷಗಳ ಬಗೆಗಿನ ವರದಿಯನ್ನು ಬಿಡುಗಡೆ ಮಾಡುವ ಧೈರ್ಯ ತೋರಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಕಳೆದ ತಿಂಗಳು ಅವರು, ರಸ್ತೆ ಸುರಕ್ಷತಾ ಮಸೂದೆ ಆಂಗೀಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇಲ್ಲದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಹೆದ್ದಾರಿ ಕಾರ್ಯಾಚರಣೆ ಪ್ರಕ್ರಿಯೆಯನ್ನು ಕಂಪ್ಯೂಟರೀಕರಿಸಿ,ಪಾರದರ್ಶಕವಾಗಿಸುವ ಪ್ರಯತ್ನಕ್ಕೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ವಿರೋಧಿಸುತ್ತಿವೆ ಎಂದು ಸಚಿವರು ಹೇಳಿದ್ದರು. ಸಚಿವರ ಹೇಳಿಕೆಗೆ ಮಹತ್ವವಿದ್ದು, ವಿಶ್ವದಲ್ಲೇ ಚೀನಾವನ್ನು ಹೊರತುಪಡಿಸಿದರೆ, ಅತಿಹೆಚ್ಚು ಮಂದಿ ರಸ್ತೆ ಅಪಘಾತಗಳಲ್ಲಿ ಸಾಯುವ ದೇಶ ಭಾರತ ಎನ್ನುವುದು ಗಮನಾರ್ಹ.