ಪತಿ ಸಜೀವ ದಹನವಾಗುತ್ತಿದ್ದರೆ ಟಿವಿ ನೋಡುತ್ತಿದ್ದ ಪತ್ನಿ!
ಕೊಲ್ಕತ್ತಾ: ಅಗ್ನಿ ಆಕಸ್ಮಿಕವೊಂದರ ಬಗ್ಗೆ ಮಾಹಿತಿ ಬಂದ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ, ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ವೃದ್ಧದಂಪತಿಯನ್ನು ರಕ್ಷಿಸಲು ಹರಸಾಹಸ ಮಾಡಿದರು. ನೆರೆಹೊರೆಯವರು ಆತಂಕದಿಂದ ಅಪಾರ್ಟ್ ಮೆಂಟ್ ನ ಎದುರು ಸೇರಿದ್ದರು. ಕೊನೆಗೂ ಬಾಗಿಲು ಒಡೆದು ಅಗ್ನಿಶಾಮಕ ಸಿಬ್ಬಂದಿ ಒಳ ಪ್ರವೇಶಿಸಿದಾಗ ಕಂಡ ದೃಶ್ಯ ಅವರನ್ನು ದಂಗುಬಡಿಸಿತು. ಪತಿ ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡು ಸಜೀವ ದಹನವಾಗುತ್ತಿದ್ದರೆ, ಪತ್ನಿ ಪಕ್ಕದ ಕೊಠಡಿಯಲ್ಲಿ ಆರಾಮವಾಗಿ ಕುಳಿತು ಟಿವಿ ನೋಡುತ್ತಿದ್ದಳು.
ಇದು ಯಾವುದೋ ಸಿನಿಮಾ ಕಥೆಯಲ್ಲ. ಈ ಸತ್ಯಘಟನೆ ನಡೆದದ್ದು ಶನಿವಾರ ಮಧ್ಯರಾತ್ರಿ 12.30ರ ಸುಮಾರಿಗೆ ನಗರದ ಮಾಣಿಕ್ತಾಲ ಸರಕಾರಿ ಕಾಲೋನಿಯಲ್ಲಿ. 63 ವರ್ಷದ ವೃದ್ಧ ಘಟನೆಯಲ್ಲಿ ಮೃತಪಟ್ಟಿದ್ದರೆ, 57ರ ಪತ್ನಿ ಈಗ ಪೊಲೀಸ್ ಅತಿಥಿ.
ಇಷ್ಟೇ ಅಲ್ಲ; ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಇನ್ನಷ್ಟು ಕುತೂಹಲಕರ ವಿಚಾರ ಬೆಳಕಿಗೆ ಬಂತು. ಈ ವೃದ್ಧದಂಪತಿಗೆ ಸೇರಿದ ಮಾರುತಿ ಆಲ್ಟೊ ಕಾರಿನಲ್ಲಿ ಹಳೆಯ ಪೊಲೀಸ್ ಹೆಲ್ಮೆಟ್, ವೈರ್ಲೆಸ್ ರೇಡಿಯೊ ಮತ್ತಿತರ ವಸ್ತುಗಳು ಪತ್ತೆಯಾಗಿವೆ. ಕಾರಿಗೆ ಪೊಲೀಸ್ ಎಂಬ ಸ್ಟಿಕ್ಕರ್ ಕೂಡಾ ಹಚ್ಚಲಾಗಿದೆ. ಪ್ರಕರಣ ಬೇಧಿಸಲು ಪೊಲೀಸರು ಪತ್ನಿಯನ್ನು ವಿಚಾರಣೆಗೆ ಗುರಿಪಡಿಸಿದ್ದು, ಸುತಾಪಾ ಬಾರಟ್ ಪೊಲೀಸ್ ವಶದಲ್ಲಿದ್ದಾರೆ.
ಸಿಇಎಸ್ಇಯಲ್ಲಿ ಸೇವೆಯಲ್ಲಿದ್ದ ಪತಿ ರಂಜಿತ್ ಕುಮಾರ್ ಬಾರಟ್ (63) ಸರಕಾರಿ ಕಾಲೋನಿಯ ಜಿ ವಿಂಗ್ ನ ಅಪಾರ್ಟ್ ಮೆಂಟ್ ನಲ್ಲಿ ಪತ್ನಿ ಜತೆ ವಾಸವಿದ್ದರು. ರಾತ್ರಿ ಮಲಗುವ ಕೋಣೆಯಿಂದ ದಟ್ಟ ಹೊಗೆ ಬರುತ್ತಿದ್ದುದನ್ನು ಗಮನಿಸಿದ ನೆರೆಯವರು ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದರು. ಅಚ್ಚರಿಯ ಸಂಗತಿಯೆಂದರೆ ಪತಿ ಅಥವಾ ಪತ್ನಿ ಯಾರೂ ನೆರವಿಗೆ ಕೂಗಿಕೊಳ್ಳಲಿಲ್ಲ.
ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಮಹಿಳೆಯನ್ನು ರಕ್ಷಿಸಿದರು. ಆದರೆ ಪತಿ ಆಗಲೇ ಸಜೀವ ದಹನವಾಗಿದ್ದರು. ಪೊಲೀಸರು ಆಕೆಯನ್ನು ಪ್ರಶ್ನಿಸಿದಾಗ ಮೊದಲು, ಸಹಾಯಕ್ಕಾಗಿ ನಾನು ಕೂಗಿಕೊಂಡರೆ ಯಾರೂ ಬರಲಿಲ್ಲ ಎಂದು ಹೇಳಿಕೆ ನೀಡಿದಳು. ಮನೆಯನ್ನು ಒಳಗಿನಿಂದ ಏಕೆ ಲಾಕ್ ಮಾಡಲಾಗಿತ್ತು ಎಂದು ಪ್ರಶ್ನಿಸಿದಾಗ, ಪತಿಯ ಕೊಠಡಿ ಬಳಿಗೆ ಹೋಗಲು ಭಯವಾಯಿತು ಎಂಬ ಉತ್ತರ ಬಂತು. ಮತ್ತೆ ಹೇಳಿಕೆ ಬದಲಿಸಿ, ಗಂಡ ನನ್ನನ್ನು ಹತ್ಯೆ ಮಾಡಲು ಮುಂದಾಗಿದ್ದರು. ಇದರಿಂದ ಭಯವಾಯಿತು ಎಂದು ಹೇಳಿಕೆ ನೀಡಿದ್ದು, ವಿಚಾರಣೆ ಮುಂದುವರಿದಿದೆ.