ಪನ್ಸಾರೆ ಹತ್ಯೆ: ಗಾಯಕ್‌ವಾಡ ವಿರುದ್ಧ ತನಿಖೆಗೆ ತಡೆ
ಮುಂಬೈ: ಚಿಂತಕ ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಬಂತರಾಗಿದ್ದ ಸಮೀರ್ ಗಾಯಕ್ವಾಡ್ ವಿರುದ್ಧ ಆರೋಪಪಟ್ಟಿ ಅಂತಿಮಪಡಿಸದಂತೆ ಮುಂಬೈ ಹೈಕೋರ್ಟ್, ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸೆಷನ್ಸ್ ನ್ಯಾಯಾಲಯಕ್ಕೆ ಸೂಚನೆ ನೀಡಿದೆ. ಸನಾತನ ಸಂಸ್ಥೆಯ ಕಾರ್ಯಕರ್ತರಾಗಿರುವ ಗಾಯಕ್ವಾಡ್ ವಿರುದ್ಧ ವಿಚಾರಣೆ ನಡೆಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸರಕಾರಿ ಅಭಿಯೋಜಕರು ಇಂಗ್ಲೆಂಡಿನಿಂದ ವಿವಿಜ್ಞಾನ ಪ್ರಯೋಗಾಲಯ ವರದಿ ನಿರೀಕ್ಷೆಯಲ್ಲಿರುವುದರಿಂದ ಮುಂದಿನ ಆದೇಶ ನೀಡುವವರೆಗೂ ವಿಚಾರಣೆ ಮುಂದುವರಿಸದಂತೆ ಸೂಚಿಸಲಾಗಿದೆ.
ಪನ್ಸಾರೆ, ನರೇಂದ್ರ ದಾಬೋಲ್ಕರ್ ಹಾಗೂ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣಗಳ ನಡುವೆ ಸಂಬಂಧ ಇದೆಯೇ ಎಂದು ಪರೀಶಿಲಿಸಲು ವಿವಿಜ್ಞಾನ ಪ್ರಯೋಗಾಲಯ ವರದಿಯನ್ನು ಎದುರು ನೋಡಲಾಗುತ್ತಿದೆ.
ನ್ಯಾಯಮೂರ್ತಿ ಸಾಧನಾ ಜಾಧವ್ ಅವರು ಜೂನ್ 9ರಂದು ಆದೇಶ ಹೊರಡಿಸಿ, ಕೊಲ್ಲಾಪುರ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ಸ್ಥಗಿತಗೊಳಿಸುವಂತೆ ಸೂಚಿಸಿದರು.
ಪನ್ಸಾರೆ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮಹಾರಾಷ್ಟ್ರ ಸರಕಾರದ ಸಿಐಡಿ, ಸೆಷನ್ಸ್ ನ್ಯಾಯಾಲಯಕ್ಕೆ ಮನವಿ ಮಾಡಿ, ವಿವಿಜ್ಞಾನ ಪ್ರಯೋಗಾಲಯ ವರದಿ ಬರುವವರೆಗೂ ಆರೋಪಪಟ್ಟಿ ಅಂತಿಮಪಡಿಸದಂತೆ ಕೋರಿತ್ತು. ಈ ಮನವಿಯನ್ನು ಸೆಷನ್ಸ್ ಕೋರ್ಟ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು.
ಆರೋಪಪಟ್ಟಿ ಅಂತಿಮಪಡಿಸುವ ಸಂದರ್ಭದಲ್ಲಿ ಆರೋಪಿಯ ವಿರುದ್ಧದ ಎಲ್ಲ ಆರೋಪಗಳನ್ನು ಆತನಿಗೆ ವಿವರಿಸಬೇಕಾಗುತ್ತದೆ. ಮೂವರೂ ವಿಚಾರವಾದಿಗಳ ಹತ್ಯೆ ಪ್ರಕರಣಗಳಿಗೆ ಸಂಬಂಧವಿದೆಯೇ ಎಂದು ನಿರ್ಧರಿಸಲು ವಿವಿಜ್ಞಾನ ಪ್ರಯೋಗಾಲಯದ ವರದಿ ಅಗತ್ಯವಾಗಿರುವುದರಿಂದ ಈ ಆದೇಶ ನೀಡಲಾಗಿದೆ ಎಂದು ಜಾಧವ್ ಹೇಳಿದ್ದಾರೆ.
ಸಿಐಡಿ ಸೆಷನ್ಸ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿರುವ ವಿಚಾರವನ್ನು ಸರ್ಕಾರಿ ವಕೀಲ ಸಂದೀಪ್ ಶಿಂಧೆ ನ್ಯಾಯಾಲಯದ ಗಮನಕ್ಕೆ ತಂದರು. ಇದಕ್ಕೂ ಮುನ್ನ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಕರ್ನಾಟಕ ಪೊಲೀಸರು, ಪನ್ಸಾರೆ ಹತ್ಯೆಗೆ ಬಳಸದಾದ ಐದು ಖಾಲಿ ಕ್ಯಾಟ್ರಿಡ್ಜ್‌ಗಳನ್ನು ಪಡೆದುಕೊಂಡಿದ್ದಾರೆ ಎಂದು ಹೈಕೋರ್ಟ್ ಗಮನಕ್ಕೆ ತಂದರು.
ಅಂತೆಯೇ ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಈ ಬುಲೆಟ್ ಕ್ಯಾಟ್ರಿಡ್ಜ್‌ಗಳನ್ನು ಕರ್ನಾಟಕದಿಂದ ಪಡೆದಿದೆ. ಎಲ್ಲವನ್ನೂ ಇಂಗ್ಲೆಂಡಿನ ಸ್ಕಾಟ್‌ಲ್ಯಾಂಡ್ ಯಾರ್ಡ್ ವಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವಿವರಿಸಿದರು.